ಸಿದ್ದರಾಮಯ್ಯ ಭೇಟಿ ಮಾಡಿದ ರೇಣುಕಾಸ್ವಾಮಿ ತಂದೆ-ತಾಯಿ; ಇಟ್ಟ ಬೇಡಿಕೆ ಏನು?
ಬೆಂಗಳೂರು, ಜೂನ್ 25: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರವಾಗಿ ಕೊಲೆಯಾಗಿದ್ದು, ಈ ಪ್ರಕರಣ ಕುರಿತು ಪವಿತ್ರ ಗೌಡ, ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳು ಜೈಲುವಶವಾಗಿದ್ದಾರೆ. ಆದರೆ ಕುಟುಂಬದ ಆಧಾರವಾಗಿದ್ದ ರೇಣುಕಾಸ್ವಾಮಿಯನ್ನು ಕಳೆದುಕೊಂಡ ತಂದೆ ತಾಯಿ ಇಂದು (ಮಂಗಳವಾರ) ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.
ರೇಣುಕಾಸ್ವಾಮಿ ಅವರ ತಂದೆ , ತಾಯಿ ಇಂದು ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಪುತ್ರನಿ ಸಾವಿನ ಕುರಿತು ತಂದಿ ತಾಯಿ ಇಬ್ಬರು ಕಣ್ಣೀರು ಹಾಕಿದ್ದಾರೆ. ತಪ್ಪು ಮಾಡಿದ್ದರೆ ಕರೆದು ಬುದ್ಧಿ ಹೇಳಬಹುದಿತ್ತು, ಅಥವಾ ಪೊಲೀಸರಿಗೆ ದೂರು ಕೊಡಬಹುದಿತ್ತು ಆದರೆ ಬರ್ಬರವಾಗಿ ಕೊಂದುಬಿಡುವುದು ಯಾವ ನ್ಯಾಯ ಎಂದು ಅವಲತ್ತುಕೊಂಡಿದ್ದಾರೆ.

ರೇಣುಕಾಸ್ವಾಮಿ ತಂದೆ ತಾಯಿ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂತ್ವಾನ ಹೇಳಿ, ಪೊಲೀಸ್ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಪೊಲೀಸ್ ತನಿಖೆಯ ಬಗ್ಗೆ ರೇಣುಕಾಸ್ವಾಮಿ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬಕ್ಕೆ ಆಧಾರವಾಗಿದ್ದೆ ರೇಣುಕಾಸ್ವಾಮಿ, ಹೆಂಡತಿ ಮೊಮ್ಮಗುವಿಗೆ ಮುಂದೆ ಯಾರು ಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನೋವು ತೋಡಿಕೊಂಡಿದ್ದಾರೆ.
ಈ ವೇಳೆ ಕುಟುಂಬ ನಿರ್ವಹಣೆಗಾಗಿ ತಮ್ಮ (ಸೊಸೆ) ಮಗಳಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ರೇಣುಕಾಸ್ವಾಮಿ ಪತ್ನಿಗೆ ಪರಿಹಾರ ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡುವಂತೆಯೂ ಒತ್ತಾಯಿಸಿದ್ದಾರೆ.












Click it and Unblock the Notifications