ಕೃಷಿ ಪ್ರೊಫೆಸರ್ ಖ್ಯಾತಿಯ ಪುಟ್ಟೀರಮ್ಮ ಇನ್ನಿಲ್ಲ: ಕೃಷಿಯಲ್ಲಿ ಲಾಭ-ನಷ್ಟದ ಲೆಕ್ಕಾಚಾರವನ್ನೇ ನೋಡದ ಮಹಾತಾಯಿ
ಚಾಮರಾಜನಗರ: ಇಲ್ಲಿನ ಕೃಷಿಕ ಮಹಿಳೆ, ಕೃಷಿ ಪ್ರೊಫೆಸರ್ ಎಂದೇ ಖ್ಯಾತಿ ಗಳಿಸಿರುವ ಪುಟ್ಟೀರಮ್ಮ ಇನ್ನಿಲ್ಲ. 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾಮರಾಜನಗರದ ಪುಣ್ಯದಹುಂಡಿಯ ಪುಟ್ಟೀರಮ್ಮ ಅವರು ನೂರಕ್ಕೂ ಹೆಚ್ಚು ಬೆರಕೆ ಸೊಪ್ಪುಗಳನ್ನು ಗುರುತಿಸುವ ಅಪಾರ ಜ್ಞಾನ ಹೊಂದಿದ್ದರು. ಬೆರಕೆ ಸೊಪ್ಪಿನ ಬಳಕೆಯೇ ನಶಿಸುತ್ತಿರುವ ಕಾಲಮಾನದಲ್ಲಿ ಅದರ ಜ್ಞಾನವನ್ನು ತಮ್ಮ ಗ್ರಾಮದ ಎಳೆಯ ಹೆಣ್ಣುಮಕ್ಕಳಿಗೂ ಕಲಿಸಿದ್ದು ಇವರ ವಿಶೇಷ.
ಮಿಶ್ರ ಬೆಳೆ-ಬೆರಕೆ ಸೊಪ್ಪಿನ ವಿಸ್ಮಯ ಲೋಕದ ಭಂಡಾರವಾಗಿದ್ದ ಪುಟ್ಟೀರಮ್ಮ ನಿಧನರಾಗಿದ್ದಾರೆ. ನೆಲಮೂಲ ಕೃಷಿ ಜ್ಞಾನದ ಕೊಂಡಿಯೊಂದು ಕಳಚಿದಂತಾಗಿದೆ. ನೆಲಮೂಲದ 'ಕೃಷಿ ಪ್ರೊಫೆಸರ್'ನಂತೆ ಕಾಣುತ್ತಿದ್ದ ಪುಟ್ಟೀರಮ್ಮ ಕೃಷಿ ಎಂಬುದನ್ನು ಲಾಭ ನಷ್ಟದ ಬಾಬ್ತಾಗಿ ನೋಡಲೇ ಇಲ್ಲ. ತಾವು ಕಲಿತ ಜ್ಞಾನವನ್ನು ತಮ್ಮೊಳಗಿಟ್ಟುಕೊಳ್ಳದೆ ತಲೆಮಾರುಗಳಿಗೆ ತಲುಪಿಸುತ್ತಿದ್ದದ್ದು ವಿಶೇಷವಾಗಿತ್ತು. ಬೇಸಾಯಕ್ಕೆ ಇವರು ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಸರ್ಕಾರ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿದೆ.

ಪುಟ್ಟೀರಮ್ಮ ಹಿನ್ನೆಲೆ ಏನು
ಪುಟ್ಟೀರಮ್ಮ ಅವರು ಅತ್ಯಂತ ಹಿಂದುಳಿದ ಕುಟುಂಬದಿಂದ ಬಂದವರು. ಕೃಷಿಕ ಮಹಿಳೆಯಾದ ಪುಟ್ಟೀರಮ್ಮ ಅವರು ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಗ್ರಾಮದವರು. ಪತಿ ಲಿಂಗೇಗೌಡ ಶತಾಯುಷಿ. ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ತಂದೆ ಈರೇಗೌಡ, ತಾಯಿ ಉಚ್ಚಮ್ಮ. ಲಿಂಗೇಗೌಡರನ್ನು ವಿವಾಹವಾಗಿ ಗುಂಡ್ಲುಪೇಟೆ ಆಲತ್ತೂರಿಗೆ ಬಂದ ಪುಟ್ಟೀರಮ್ಮ ಅವರು ಇಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದರು. ಇವರ ಕುಟುಂಬ ಕಾರಣಾಂತರಗಳಿಂದ 30 ವರ್ಷಗಳ ಹಿಂದೆಯೇ ಪಣ್ಯದಹುಂಡಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಸೋದರ ಮಾವ ಕೊಟ್ಟಿದ್ದ ಒಂದು ಎಕರೆ ಹದಿನೈದು ಗುಂಟೆ ಜಮೀನೇ ಇವರಿಗೆ ಮುಂದೆ ಇವರ ಕರ್ಮ ಭೂಮಿಯೂ ಹಾಗೂ ಪ್ರಯೋಗಶಾಲೆಯಾಗಿಯೂ ಬದಲಾಯಿತು.
ಬೆರೆಕೆ ಸೊಪ್ಪು - ಪುಟ್ಟೀರಮ್ಮ ಮೀರಿಸುವವರುಂಟೆ
ಪುಟ್ಟೀರಮ್ಮ ಅವರು ಬೆರೆಕೆ ಸೊಪ್ಪಿನ ವಿಚಾರದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರು. ಕಾಡಿನಲ್ಲಿ ಸಿಗುವುದು ಬೆರಕೆಸೊಪ್ಪು. ಬೆರೆಕೆ ಸೊಪ್ಪು ಪ್ರಕೃತಿ ಕೊಟ್ಟ ಆಹಾರ. ನಮ್ಮಲ್ಲಿ ನೂರೊಂದು ಸೊಪ್ಪುಗಳಿವೆ. 40 ಸೊಪ್ಪಗಳನ್ನು ಹೊಲದಲ್ಲಿ, ಬೇಲಿಮೇಲೆ ನಾವೇ ಬೆಳೆಯುತಿದ್ದೆವು. ಅರವತ್ತು ಸೊಪ್ಪುಗಳನ್ನು ಕಾಡಿನಿಂದ ತರುತ್ತಿದ್ದೆವು ಎಂದು ಪುಟ್ಟೀರಮ್ಮ ಹೇಳಿದ್ದರು.
ಪುಟ್ಟೀರಮ್ಮ ಸಾಧನೆ ಸ್ಮರಿಸಿದ ಕನ್ನಡಿಗರು
ನೂರಕ್ಕೂ ಹೆಚ್ಚು ಬೆರಕೆ ಸೊಪ್ಪುಗಳನ್ನು ಗುರುತಿಸುವ ಅಪಾರ ಜ್ಞಾನ ಇವರಿಗಿತ್ತು. ಬೆರಕೆ ಸೊಪ್ಪಿನ ಬಳಕೆಯೇ ನಶಿಸುತ್ತಿರುವ ಕಾಲಮಾನದಲ್ಲಿ ಅದರ ಜ್ಞಾನವನ್ನು ತಮ್ಮ ಗ್ರಾಮ ಎಳೆಯ ಹೆಣ್ಣುಮಕ್ಕಳಿಗೂ ಕಲಿಸಿದ್ದು ಇವರ ವಿಶೇಷ. ಒಣಭೂಮಿ ಕೃಷಿ, ಅಕ್ಕಡಿ ಬೇಸಾಯ ಹಾಗೂ ಬೆರಕೆ ಸೊಪ್ಪುಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದರು. ಇಕ್ರಾ ಸಂಸ್ಥೆಯು ಇವರ ಬಗ್ಗೆ ಒಳ್ಳೆಯ ಪುಸ್ತಕ ಪ್ರಕಟಿಸಿದೆ. 88 ವರ್ಷ ನಮ್ಮೊಂದಿಗಿದ್ದ "ಕೃಷಿ ಪ್ರೊಫೆಸರ್ ಪುಟ್ಟೀರಮ್ಮ" ಅವರಿಗೆ ನಮನಗಳು ಎಂದು ಮಲ್ಲಿಕಾರ್ಜುನ ಹೊಸಪಾಳ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications