'ಕರಿಮಣಿ ಮಾಲೀಕ' ಯಾರು? ಎಂಬ ಬಿಜೆಪಿ ಪ್ರಶ್ನೆಗೆ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು, ಮಾರ್ಚ್ 18: ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಮುಂದಿನ ಸಿಎಂ ಯಾರು ಎಂಬ ಚರ್ಚೆ ಹೆಚ್ಚಾಗುತ್ತಿರುವ ಮಧ್ಯೆಯೇ ವಿಪಕ್ಷ ನಾಯಕರು ವಿಧಾನಸಭೆಯಲ್ಲಿ ಕರಿಮಣಿ ಮಾಲೀಕ ಯಾರು ಎಂಬ ರೀತಿ ಟೀಕೆ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.ಸದನದಲ್ಲಿ 'ಕರಿಮನಿ ಮಾಲೀಕ' ಯಾರು ಎಂಬ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಡುವೆ ಟಾಕ್ ಫೈಟ್ ನಡೆಯಿತು. ಸದನದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾಲೆಳೆದಿದ್ದ ಆರ್ ಅಶೋಕ್ ಮತ್ತು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕರಿಮಣಿ ಮಾಲೀಕ ಯಾರು? ಎಂದು ಪ್ರಶ್ನಿಸಿದ್ದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಉತ್ತರ ನೀಡುವ ಸಂದರ್ಭದಲ್ಲಿ, ನಿಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲವೇ? ಯತ್ನಾಳ್ ಹಾಗೂ ವಿಜಯೇಂದ್ರ ನಡುವೆ ಭಿನ್ನಾಭಿಪ್ರಾಯ ಇಲ್ಲವೇ? ನಿಮ್ಮಲ್ಲಿ ಭಿನ್ನಾಭಿಪ್ರಾಯ ಯಾವ ಮಟ್ಟಕ್ಕೆ ಹೋಗಿದೆ? ಅದನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಅಧಿಕಾರ ಜನರ ಕಲ್ಯಾಣಕ್ಕೆ ಬಳಕೆ ಆಗಬೇಕು. ನಮ್ಮ ಸರ್ಕಾರ ಈ ಕೆಲಸ ಮಾಡುತ್ತಿದೆ. ಸರ್ಕಾರದ ಕಾರ್ಯಕ್ರಮ ವಾಸ್ತವವಾಗಿದ್ದರಿಂದ ರಾಜ್ಯಪಾಲರಿಂದ ಶ್ಲಾಘನೆ ಸಿಕ್ಕಿದೆ. ಹೀಗಿರುವಾಗ ಆರ್ ಅಶೋಕ್ , ಸುನೀಲ್ ಕುಮಾರ್ ಮಾತನಾಡುವಾಗ ಕರಿಮಣಿ ಮಾಲೀಕ ಯಾರು ಎಂದು ಪ್ರಶ್ನಿಸಿದ್ದಾರೆ. ಇದು ಕೀಳು ಅಭಿರುಚಿ , ಹೀನ ಮಾತು ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಅಶೋಕ್ ಹಾಗು ಸುನೀಲ್ ಕುಮಾರ್ ಅವರು ಮಾತನಾಡುವಾಗ ಕರಿಮಣಿ ಮಾಲೀಕ ಯಾರು ಎಂದು ಪ್ರಶ್ನಿಸಿದ್ದಾರೆ. ನನ್ನ ಹಾಗು ಬಹುತೇಕ ಸದಸ್ಯರ ಪ್ರಕಾರ ಅರ್ಥಹೀನ ಮಾತುಗಳು. ನನಗೂ ಹಿರಿಯ ಸದಸ್ಯರಿಂದ ಇಂಥ ಮಾತುಗಳನ್ನು ನಿರೀಕ್ಷೆ ಇರಲಿಲ್ಲ. ನಿಮ್ಮ ಪಕ್ಷದಲ್ಲಿ ಭಿನಾಭಿಪ್ರಯಗಳಿಲ್ಲವೇ? ನಿಮ್ಮ ಭಿನ್ನಾಭಿಪ್ರಾಯಗಳು ಯಾವ ಮಟ್ಟಕ್ಕೆ ಹೋಗಿವೆ ಎಂಬ ಚರ್ಚೆ ಬೇಡ. ಅಭಿರುಚಿ ಹೀನ ಎಂದಷ್ಟೇ ಹೇಳಿದ್ದೇನೆ. ನಿಮಗೆ ಸರಿಯಿದ್ದರೆ ಓಕೆ. ಜನ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯಪಾಲರ ಭಾಷಣದಲ್ಲಿ ಸಾಂಪ್ರದಾಯಿಕವಾಗಿ ಸರ್ಕಾರದ ಸಾಧನೆಗಳನ್ನು ಸದನದ ಮುಂದಿಡುವ ಭಾಷಣವಿರುತ್ತದೆ. ಕೆಲವರು ಟೀಕಿಸಿದ್ದಾರೆ, ಹಲವರು ವಾಸ್ತವಿಕವಾಗಿ ಮಾತನಾಡಿದ್ದಾರೆ, ಕೆಲವರು ಸಮರ್ಥಿಸಿದ್ದಾರೆ, ಕೇಲವರು ವಿರೋಧಿಸಲೆಂದೇ ವಿರೋಧಿಸಿ ಮಾತನಾಡಿದ್ದಾರೆ. ಅವರೆಲ್ಲರ ಸಲಹೆ ಸೂಚನೆಗಳನ್ನು ಸರ್ಕಾರ ಸ್ವಾಗತಿಸಿ, ಸರ್ಕಾರದ ನಿಲುವನ್ನು ಸದನಕ್ಕೆ ತಿಳಿಸಿ ವಂದನಾ ನಿರ್ಣಯವನ್ನು ಅಂಗೀಕಾರ ಮಾಡಬೇಕೆಂದು ವಿನಂತಿಸಿದರು.
ವಿರೋಧ ಪಕ್ಷದ ನಾಯಕರಾದಿಯಾಗಿ 14 ಜನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಮಾತನಾಡಿದ್ದಾರೆ. ರಾಜ್ಯಪಾಲರು ಒಂದು ಗಂಟೆಗೂ ಮೀರಿ ಸುದೀರ್ಘವಾಗಿ ಮಾತನಾಡಿ ಸರ್ಕಾರದ ಸಾಧನೆಗಳನ್ನು ಓದಿ ಹೇಳಿದ್ದಾರೆ. ವಾಸ್ತವವನ್ನು ಸದನಕ್ಕೆ ತಿಳಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ವಾಸ್ತವಾಂಶಗಳನ್ನು ಸದನದ ಸದಸ್ಯರಿಗೆ ತಿಳಿಸುತ್ತೇನೆ. ನಮ್ಮ ಸರ್ಕಾರ ಜನರ ಆಶೀರ್ವಾದದಿಂದ 2023 ಮೇ 22 ರಂದು ಅಧಿಕಾರಕ್ಕೆ ಬಂದಿತು. ನಮ್ಮ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದು 2 ವರ್ಷಗಾಳಾಗುತ್ತಿದೆ. ಇದು ಸರ್ಕಾರ ಬಂದ ನಂತರ ರಾಜ್ಯಪಾಲರ ಎರಡನೇ ಭಾಷಣ.
ಅಧಿಕಾರಕ್ಕಾಗಿ ಅಧಿಕಾರ ಮಾಡುವುದಲ್ಲ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಶ್ಲಾಘಿಸಿದ್ದಾರೆ. ಸದನದ ಚರ್ಚೆಗಳು ಬಸವಣ್ಣ ಹೇಳಿದಂತೆ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನುವಂತಿರಬೇಕು. ಸದನದಲ್ಲಿ ಮಾತನಾಡಿದರೆ ಜನರ ಅಭಿರುಚಿಯನ್ನು ಹೆಚ್ಚಿಸಬೇಕು. ವಿದ್ಯಾವಂತರು ಸದನಕ್ಕೆ ಬರುತ್ತಿರುವುದರಿಂದ ಚರ್ಚೆ ಅರ್ಥ ಪೂರ್ಣ, ಆರೋಗ್ಯಕರವಾಗಿರಬೇಕು. ಜನರೂ, ಸಧನವೂ ಇದನ್ನೇ ನಿರೀಕ್ಷಿಸುತ್ತದೆ.
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ದೊಡ್ಡ ಸುಳ್ಳು ಹೇಳಿದ್ದಾರೆ. ಆರ್.ಎಸ್.ಎಸ್ ಬೈಠಕ್ ನಲ್ಲಿದ್ದಾರೋ, ಸದನದಲ್ಲಿದ್ದಾರೋ ಗೊತ್ತಿಲ್ಲ. ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕ ನೀರಾವರಿ ನಿಗಮಕ್ಕೆ 3300 ಕೋಟಿ, ವಿಶ್ವೇಶ್ವರ ಜಲನಿಗಮ ಸೇರಿ ಕರ್ನಾಟಕ ನೀರಾವರಿಗೆ ಒಟ್ಟು 10 ಸಾವಿರ ಕೋಟಿ ರೂಪಾಯಿ ರಾಜ್ಯದ ನೀರಾವರಿ ನಿಗಮಕ್ಕೆ ಕೊಟ್ಟಿದೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯೋ ಉದ್ದೇಶಪೂರ್ವಕ, ಟೀಕೆಗಾಗಿ ಹೇಳಿದ್ದಾರೋ ಗೊತ್ತಿಲ್ಲ. ವಾಸ್ತವ ಏನೆಂದರೆ 24-1-2025 ರಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸ್ಕೀಂ ಆಫ್ ಸ್ಪೆಶಲ್ ಅಸಿಸ್ಟೆನ್ಸ್ ಕೊಟ್ಟಿದ್ದು, 50 ವರ್ಷಗಳ ಕಾಲ ಬಡ್ಡಿ ರಹಿತವಾಗಿ ವಿಶೇಷ ನೆರವು ನೀಡಿದೆ ಎಂದು ತಿಳಿಸಿದರು.












Click it and Unblock the Notifications