Government Employee: ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್, ವಿಶೇಷತೆ
ಬೆಂಗಳೂರು, ಆಗಸ್ಟ್ 17: ಕರ್ನಾಟಕ ಸರ್ಕಾರ ಎಲ್ಲಾ ಸರ್ಕಾರಿ ನೌಕರರು ಗುರುತಿನ ಚೀಟಿಯನ್ನು ಕೊರಳಿಗೆ ಹಾಕಿಕೊಳ್ಳುವುದರ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಹಾಕಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಸರ್ಕಾರ ಈಗಾಗಲೇ 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಅಭಿಯಾನವನ್ನು ರಾಜ್ಯಾದ್ಯಂತ ನಡೆಸುತ್ತಿದ್ದು, ಹಲವು ಕಾರ್ಯಕ್ರಮಗಳನ್ನು ಈ ಅಭಿಯಾನದ ಭಾಗವಾಗಿ ಆಯೋಜಿಸಲಾಗುತ್ತಿದೆ.
ಸಂದೀಪ್ ಬಿ. ಕೆ., ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ರಾಜಕೀಯ) ಈ ಕುರಿತು ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯ ಮೂಲಕ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಸುತ್ತೋಲೆಯ ವಿವರಗಳು: ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರವು ನಿರ್ಣಯಿಸಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ತಮ್ಮ ಇಲಾಖೆ/ ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳುದಾರವನ್ನು ಒದಗಿಸಲು ತಮ್ಮ ಇಲಾಖೆ/ ಸಂಸ್ಥೆಯ ಸಕ್ಷಮ ಪ್ರಾಧಿಕಾರಗಳು ಕೂಡಲೇ ನಿಯಮಗಳನುಸಾರ ಕ್ರಮವಹಿಸುವಂತೆ ತಿಳಿಸಿದೆ.
ನೂತನ ಕೊರಳುದಾರದ ವಿನ್ಯಾಸವನ್ನು https://photos.app.goo.gl/YcJeNHnDNPecW8Q48 ಆನ್‌ಲೈನ್ ವಿಳಾಸದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಸುತ್ತೋಲೆಯೂ ಹೇಳಿದೆ.
ವಿವಿಧ ಕಾರ್ಯಕ್ರಮಗಳು: ಕರ್ನಾಟಕ ಸರ್ಕಾರ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 2023ನೇ ಸಾಲಿನ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿತ್ತು. ಅಲ್ಲದೇ ವರ್ಷಪೂರ್ತಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಅಭಿಯಾನದಡಿ ಆಯೋಜನೆ ಮಾಡುತ್ತಿದೆ.
ಕರ್ನಾಟಕ ಎಂದು ನಾಮಕರಣ ಹೊಂದಿ 50 ವರ್ಷಗಳಾದ ಹಿನ್ನಲೆಯಲ್ಲಿ ಕರ್ನಾಟಕದ ಭವ್ಯವಾಅದ ಇತಿಹಾಸ ಮತ್ತು ಸಂಸ್ಕೃತಿ, ಪರಂಪರೆಯನ್ನು ಯುವ ಜನತೆಗೆ ಮನನ ಮಾಡಿಕೊಡಲು 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಅಭಿಯಾನ ಆರಂಭಿಸಲಾಗಿದೆ.
ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗತವೈಭವವನ್ನು ಮರುಕಳಿಸುವ ರೀತಿಯಲ್ಲಿ ಇವುಗಳನ್ನು ಆಚರಣೆ ಮಾಡಲಾಗುತ್ತಿದೆ.
ಕನ್ನಡಾಂಬೆಗೆ ನುಡಿ ನಮನ ಅರ್ಪಿಸಲಾಗುತ್ತಿದೆ. ನಾಡಿನ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು', ಕುವೆಂಪು ಅವರ 'ಎಲ್ಲಾದರೂ ಇರು ಎಂತಾದರು ಇರು', ದ. ರಾ. ಬೇಂದ್ರೆ ಅವರ 'ಒಂದೇ ಒಂದೇ ಒಂದೇ ಕರ್ನಾಟಕ ಒಂದೇ', ಸಿದ್ದಯ್ಯ ಪುರಾಣಿಕ ಅವರ 'ಹೊತ್ತಿತೋ ಹೊತ್ತಿತೋ ಕನ್ನಡದ ದೀಪ' ಹಾಗೂ ಚೆನ್ನವೀರ ಕಣವಿ ಅವರ 'ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ' ಗೀತೆಗಳನ್ನು ಕಾರ್ಯಕ್ರಮಗಳಲ್ಲಿ ಹಾಡಲಾಗುತ್ತಿದೆ.












Click it and Unblock the Notifications