Karnataka Election: ವೈರಿಗಳನ್ನೇ ಅಪ್ಪಿಕೊಂಡ ಪಕ್ಷಾಂತರಿ ನಾಯಕರ ಅಂದಿನ - ಇಂದಿನ ಮಾತುಗಳು
ಬೆಂಗಳೂರು, ಏಪ್ರಿಲ್ 19: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಿಜೆಪಿಯ ಹಲವು ವಿಕೆಟ್ ಪತನಗೊಂಡಿದೆ. ಅದರಲ್ಲಿ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ.
ಜನಸಂಘದ ಕಾಲದಿಂದಲೂ ಪಕ್ಷ ನಿಷ್ಠೆ ತೋರಿದ್ದ ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆ ಖುದ್ದು ಬಿಜೆಪಿಗೂ ಆಶ್ಚರ್ಯ ತಂದಿದೆ. ಅದೇ ರೀತಿ ಕಳೆದ ಚುನಾವಣೆಯಲ್ಲಿ ಸೋತಿದ್ದರೂ, ಸವದಿಗೆ ಉನ್ನತ ಹುದ್ದೆ ಲಭಿಸಿದೆ.

ಟಿಕೆಟ್ ಸಿಗದೇ ಇರಲು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿ.ಎಲ್.ಸಂತೋಷ್ ಮುಂತಾದವರು ನೇರ ಕಾರಣ ಎಂದು ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ.
ಈ ನಾಯಕರುಗಳ ಅಂದಿನ ಮತ್ತು ಇಂದಿನ ಹೇಳಿಕೆಗಳ ಒಂದು ಝಲಕ್ ಹೀಗಿದೆ:
"ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಕಾಂಗ್ರೆಸ್‌ನಲ್ಲಿ ಹೊಂದಾಣಿಕೆ ಕೊರತೆ ಇದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದೆ. ಬಿಜೆಪಿ ಸುಭದ್ರವಾಗಿದೆ" ಹೀಗೆ ಒಂದಲ್ಲಾ ಎರಡಲ್ಲಾ ಕಾಂಗ್ರೆಸ್ ವಿರುದ್ಧ ಹಲವಾರು ಬಾರಿ ಹೇಳಿಕೆ ನೀಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗ ಕಾಂಗ್ರೆಸ್ ಸೇರಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ
ಇನ್ನು, ಲಕ್ಷ್ಮಣ ಸವದಿಯವರೂ ಕಾಂಗ್ರೆಸ್, ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸುತ್ತಲೇ ಬಂದವರು. ರಾಜ್ಯ ಮತ್ತು ಕಾಂಗ್ರೆಸ್ ನಾಯಕರ ವಿರುದ್ದ ಟೀಕಿಸುತ್ತಾ ಬಂದವರು ಈಗ ಬಿಜೆಪಿಯನ್ನು ದೂರುತ್ತಿದ್ದಾರೆ. "ಅಥಣಿಯಿಂದ 2023ಕ್ಕೆ ಟಿಕೆಟ್ ನೀಡುತ್ತೇನೆ ಎಂದು ವಚನ ಕೊಟ್ಟಿದ್ದರು. ಆದರೆ ಬಿಜೆಪಿ ಕೊಟ್ಟ ಮಾತನ್ನು ತಪ್ಪಿದೆ. ಯಾವುದೇ ಜವಾಬ್ದಾರಿಯನ್ನು ನೀಡಲಿಲ್ಲ" ಎಂದು ಲಕ್ಷ್ಮಣ ಸವದಿ, ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಹಾವೇರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಓಲೇಕಾರ್
ಇನ್ನೊಂದು ಕಡೆ, ಹಾವೇರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನೆಹರು ಓಲೇಕಾರ್ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಗೊಂಡಿದ್ದಾರೆ. ತಮಗೆ ಟಿಕೆಟ್ ಸಿಗದೇ ಇರಲು ಬಸವರಾಜ ಬೊಮ್ಮಾಯಿ ಅವರೇ ನೇರ ಕಾರಣ ಎಂದು ಓಲೇಕಾರ್ ದೂರಿದ್ದಾರೆ. ಬೊಮ್ಮಾಯಿ ವಿರುದ್ಧ ಮಾಜಿ ಶಾಸಕ ನೆಹರು ಓಲೇಕಾರ್ 1,500 ಕೋಟಿ ಕೊಳ್ಳೆ ಹೊಡೆದ ಆರೋಪವನ್ನು ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ದ ಓಲೇಕರ್ ಆರೋಪಿಸುತ್ತಲೇ ಬಂದವರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್
ಬಿಜೆಪಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್ ಟಿಕೆಟ್ ಕೈತಪ್ಪಿದ್ದಕ್ಕೆ ನಿರಾಸೆಗೊಂಡು ಕಾಂಗ್ರೆಸ್ ಸೇರಿದ್ದಾರೆ. ಸದ್ಯ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಜಗದೀಶ್ ಶೆಟ್ಟರ್ ಈ ಹಿಂದೆ ಕಾಂಗ್ರೆಸ್ ವಿರುದ್ಧ ಮಾಡಿದ ಆರೋಪಗಳು ಕಮ್ಮಿಯೇನೂ ಇಲ್ಲ. ಅವುಗಳನ್ನ ನೆನಪಿಸಿಕೊಳ್ಳುತ್ತಾ ಹೋದರೆ ಇಂದು ಜಗದೀಶ್ ಶೆಟ್ಟರ್ ನಿಜವಾಗಲೂ ಕಾಂಗ್ರೆಸ್ ಸೇರಿದ್ದಾರಾ ಅನ್ನೋ ಅನುಮಾನ ಮೂಡದೇ ಇರದು.

ಓಲೇಕರ್ ಅವರ ಮಾತಿನ ವರಸೆ
ಪಕ್ಷ ತೊರೆಯಲು ಬೊಮ್ಮಾಯಿ ಅವರೇ ಕಾರಣ ಎಂದ ಓಲೇಕರ್ ಏಕವಚನದಲ್ಲಿ ಮಾತನಾಡಿದ್ದರು. ಜೊತೆಗೆ 'ಧಮ್ ಇದ್ದರೆ ಬೊಮ್ಮಾಯಿ ಗೆದ್ದು ತೋರಿಸಲಿ, ನಮ್ಮ ತಾಕತ್ತು ಎಷ್ಟು ಇದೆ ಅಂತ ನಾವು ತೋರಿಸುತ್ತೇವೆ. ಅವರೂ ಅವರ ತಾಕತ್ತು ತೋರಿಸಲಿ' ಎಂದು ಓಲೇಕಾರ್ ಸವಾಲು ಹಾಕಿದ್ದರು. ಇದು ಟಿಕೆಟ್ ಮಿಸ್ ಆದ ಎರಡೇ ದಿನದಲ್ಲಿ ಓಲೇಕರ್ ಅವರ ಮಾತಿನ ವರಸೆಯಾಗಿತ್ತು.
ಸಿದ್ದರಾಮಯ್ಯ- ಡಿಕೆಶಿ ಗದ್ದಲ
ಸಿದ್ದರಾಮಯ್ಯ- ಡಿಕೆಶಿ ಗದ್ದಲದಿಂದ ರಾಜ್ಯದಲ್ಲಿ ಕಾಂಗ್ರೆಸ್ ಫಿನಿಷ್ ಆಗುತ್ತೆ, ಬಿಜೆಪಿ ಸುಭದ್ರವಾಗಿದೆ. ಸಿದ್ದರಾಮಯ್ಯ, ಹಾಗೂ ಡಿ.ಕೆ ಶಿವಕುಮಾರ್ ನಡುವೆ ಹಿಂದಿನಿಂದಲೂ ಭಿನ್ನಾಭಿಪ್ರಾಯ ಇದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಬಯಸಿದ್ದು, ಬಹಿರಂಗವಾಗಿ ಸಿಎಂ ಆಗುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಹೇಳಿದ್ದ ಶೆಟ್ಟರ್ ಈಗ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರಿದ್ದು ರಾಜಕೀಯ ಅಪಹಾಸ್ಯ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications