ಅಂಬರೀಶ್ ಅಂತಿಮ ಸಂಸ್ಕಾರದಲ್ಲೂ ಡಿ ಕೆ ಶಿವಕುಮಾರ್ ಟ್ರಬಲ್ ಶೂಟರ್
Recommended Video

ಸ್ನೇಹಜೀವಿ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ (ನ 26) ಸಂಜೆ ನಡೆಯಿತು. ಪುರೋಹಿತ ನಾಗರಾಜ್ ದೀಕ್ಷಿತ್ ನೇತೃತ್ವದಲ್ಲಿ ನಡೆದ ಅಂತಿಮ ಸಂಸ್ಕಾರ ಹಿಂದೂ, ಒಕ್ಕಲಿಗ ಸಂಪ್ರದಾಯದಂತೆ ಸಂಪನ್ನಗೊಂಡಿತು.
ಕಂಠೀರವ ಸ್ಟುಡಿಯೋದಲ್ಲಿ ನಡೆದ ಅಂತಿಮ ಸಂಸ್ಕಾರದ ವೇಳೆ, ರಾಜ್ಯದ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್, ಮೈಕ್ ಹಿಡಿದುಕೊಂಡು, ಓಡಾಡುತ್ತಾ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದದ್ದು ಗಮನಿಸಬೇಕಾದ ವಿಚಾರ.
ಹಲವಾರು ಬಾರಿ, ಕರ್ನಾಟಕ ಕಾಂಗ್ರೆಸ್ಸಿಗೆ ಟ್ರಬಲ್ ಶೂಟರ್ ಆಗಿ ಕೆಲಸ ಮಾಡಿದ್ದ ಡಿಕೆಶಿ, ಸೂತಕದ ವಾತಾವರಣದಲ್ಲೂ, ಅಭಿಮಾನಿಗಳ ಮೆಚ್ಚಿನ 'ಜಲೀಲ'ನ ಅಂತ್ಯ ಸಂಸ್ಕಾರ ಕೆಲಸಗಳು ಕ್ರಮ ಬದ್ದವಾಗಿ ನಡೆಯುವಂತೆ ಮುತುವರ್ಜಿ ವಹಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯಿತು.
ಪಕ್ಷಬೇಧ ಮೆರೆತು ಅಂಬರೀಶ್ ಅವರ ಅಂತ್ಯಕ್ರಿಯೆಗೆ ಹೆಚ್ಚಿನ ರಾಜಕೀಯ ಮುಖಂಡರು ಆಗಮಿಸಿದ್ದರು. ಖುತ್ವಿಜರು ವಿಷ್ಣುಸಹಸ್ರನಾಮ ಪಠಣ ಮಾಡುತ್ತಿದ್ದರು. ಕಂಠೀರವ ಸ್ಟುಡಿಯೋಗೆ ಬಂದವರೆಲ್ಲಾ, ಅಂಬಿಯವರ ಚಿತೆಗೆ ಗಂಧದ ಕೋಡು, ತುಪ್ಪ ಮತ್ತು ಕರ್ಪೂರವನ್ನು ಇಡುತ್ತಿದ್ದರು.
ಚಿತ್ರನಟ ಯಶ್, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ಮುನಿರತ್ನಂ ನಾಯ್ಡು ಮುಂತಾದವರು, ಅಂಬಿ ಕುಟುಂಬದ ಬೆನ್ನಿಗೆ ನಿಂತು, ಮೂರು ದಿನದಿಂದ, ಆಗಬೇಕಾಗಿರುವ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಇವರ ಜೊತೆಗೆ, ಅಂತಿಮ ಸಂಸ್ಕಾರದ ದಿನದಂದು, ಡಿಕೆಶಿ ಕೂಡಾ ಅವರ ಜೊತೆ ಕೈಜೋಡಿಸಿದ್ದು, ವೇದಿಕೆ ಎಂತದ್ದೇ ಇರಲಿ, ಲೀಡರ್ಶಿಪ್ ವಹಿಸಿಕೊಳ್ಳಲು ಸಿದ್ದ ಎಂದು ಸಾರುವಂತಿತ್ತು. ಮುಂದೆ ಓದಿ..

ಇಕ್ಕೆಲಗಳಲ್ಲಿ ಭಾರೀ ಜನಸ್ತೋಮ
ಅಂತ್ಯಕ್ರಿಯ ನಡೆಯುವ ಸ್ಥಳಕ್ಕೆ ಡಿಕೆಶಿ ಆಗಮಿಸಿದಾಗಲೇ, ಸಾಕಷ್ಟು ರಾಜಕೀಯ ಮುಖಂಡರು, ಚಿತ್ರೋದ್ಯಮದವರು ಹಾಜರಿದ್ದರು. ಆ ವೇಳೆಗೆ, ಅಂಬಿಯವರ ಪಾರ್ಥಿವ ಶರೀರ ಹೊತ್ತ ಅಂತಿಮ ಯಾತ್ರೆ, ಬೆಂಗಳೂರಿನ ಗುರುಗುಂಟೆಪಾಳ್ಯದಿಂದ, ಕಂಠೀರವ ಸ್ಟುಡಿಯೋ ಕಡೆಗೆ ಬರುತ್ತಿತ್ತು. ಇಕ್ಕೆಲಗಳಲ್ಲಿ ಭಾರೀ ಜನಸ್ತೋಮ ನೆರೆದಿದ್ದರಿಂದ, ಅಂತಿಮಯಾತ್ರೆ ಸ್ಥಳಕ್ಕೆ ತಲುಪುವುದು ಕೊಂಚ ವಿಳಂಬವಾಯಿತು.

ಪರಮೇಶ್ವರ್ ಕಡೆಯಿಂದ ಡಿಸಿಪಿಗೆ ಫೋನ್
ಉಪಮುಖ್ಯಮಂತ್ರಿ, ಗೃಹಸಚಿವರೂ ಆಗಿರುವ ಪರಮೇಶ್ವರ್ ಕಡೆಯಿಂದ ಡಿಸಿಪಿಗೆ ಫೋನ್ ಮಾಡಿಸಿ, ಅಂತಿಮಯಾತ್ರೆಯ ಅಪ್ಡೇಟ್ ಪಡೆದುಕೊಳ್ಳುತ್ತಿದ್ದ ಡಿಕೆಶಿ, ಒಬ್ಬರಹಿಂದೆ ಒಬ್ಬರು ಬರುತ್ತಿದ್ದವರನ್ನು ಆಸನದ ವ್ಯವಸ್ಥೆ ಮಾಡಿದ್ದ ಕಡೆ, ಕಳುಹಿಸುತ್ತಿದ್ದರು. ದೇವೇಗೌಡ, ಆದಿಚುಂಚನಗಿರಿ ಶ್ರೀಗಳು ಬಂದಾಗ, ಖುದ್ದಾಗಿ ಅವರ ಬಳಿಗೆ ಹೋಗಿ, ಅವರನ್ನು ಕರೆದುಕೊಂಡು ಬಂದು, ಚಿತೆಗೆ ಗಂಧದ ಕಟ್ಟಿಗೆಯನ್ನು ಅವರ ಕೈಯಿಂದ ಇರಿಸಿದರು.

ಕುಮಾರಸ್ವಾಮಿ ಎಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು
ಎಲ್ಲಾ ಶಿಷ್ಟಾಚಾರಗಳನ್ನು ಬದಿಗೊತ್ತಿ, ಅಂಬರೀಶ್ ನಿಧನದಿಂದ, ಅಂತ್ಯಕ್ರಿಯೆಯವರೆಗೆ ಕುಮಾರಸ್ವಾಮಿ ಎಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಇವರೆಗೆ, ಅಂತಿಮ ಸಂಸ್ಕಾರದ ದಿನದಂದು, ಡಿ ಕೆ ಶಿವಕುಮಾರ್ ಸಾಥ್ ಕೊಟ್ಟರು. ಮೈಕ್ ಹಿಡಿದುಕೊಂಡು ಪುರೋಹಿತರಿಂದ ಹಿಡಿದು, ಅಭಿಮಾನಿಗಳವರೆಗೆ ಎಲ್ಲರಿಗೂ ಸೂಚನೆ ನೀಡುತ್ತಿದ್ದರು.

ಸಮಯ ಸಂದರ್ಭ ಅನ್ನೋದು ಇಲ್ವೇನ್ರೀ
ಒಂದು ಹಂತದಲ್ಲಿ ಅಭಿಮಾನಿಗಳನ್ನೂ ತರಾಟೆಗೂ ತೆಗೆದುಕೊಂಡು, ' ಸಮಯ ಸಂದರ್ಭ ಅನ್ನೋದು ಇಲ್ವೇನ್ರೀ... ಊರೆಲ್ಲಾ ನೋಡುತ್ತಿದ್ದಾರೆಂದು ಗೊತ್ತಾಗಲ್ವಾ' ಎಂದು ಡಿಕೆಶಿ ಗದರಿದರು. ಕಂಠೀರವ ಸ್ಟುಡಿಯೋದ ಒಳಾವರಣದ ಸಾಮರ್ಥ್ಯ ಮುಗಿದ ನಂತರ, ಗೇಟ್ ಬಂದ್ ಮಾಡಲಾಗಿತ್ತು. ಅಭಿಮಾನಿಗಳು ಒಳಗೆ ಬಿಡಿ ಎಂದು ಆಗ್ರಹಿಸುತ್ತಿದ್ದರು. ಅದಕ್ಕಾಗಿ, ಅಭಿಮಾನಿಗಳ ಮೇಲೆ ಒಂದು ನಿಮಿಷ ಡಿಕೆಶಿ ರೇಗಿದ್ದರು.

ಅಂಬರೀಶ್ ಅಂತಿಮ ಸಂಸ್ಕಾರದಲ್ಲೂ ಡಿಕೆಶಿ ಟ್ರಬಲ್ ಶೂಟರ್
ಅಂತ್ಯಕ್ರಿಯೆ ಆರಂಭವಾಗುವುದಕ್ಕೂ ಮುನ್ನ, ಸುಮಲತಾ ಮತ್ತು ಮತ್ತೋರ್ವ ಕುಟುಂಬದ ಸದಸ್ಯೆ ಕುಸಿದು ಬಿದ್ದಾಗ, ' ಯಾರಲ್ಲಿ, ಕುಟುಂಬದ ಸದಸ್ಯರು, ಸರಕಾರೀ ವೈದ್ಯರು ಕೂಡಲೇ ಬನ್ನಿ' ಮೈಕಿನಲ್ಲಿ ಮನವಿ ಮಾಡಿದರು. ಅಭಿಮಾನಿಗಳಲ್ಲಿ ಮನವಿ ಮಾಡುತ್ತಲೇ ಇದ್ದ ಡಿ ಕೆ ಶಿವಕುಮಾರ್, ಅಂತ್ಯ ಸಂಸ್ಕಾರದ ಸ್ಥಳದ ಸುತ್ತಮುತ್ತ, ಮೈಕ್ ಹಿಡಿದುಕೊಂಡು, ಓಡಾಡುತ್ತಲೇ ಅಂತಿಮ ಸಂಸ್ಕಾರದ ವಿಧಿವಿಧಾನ ಸಾಂಗ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಟ್ಟಿನಲ್ಲಿ, ಅಂಬರೀಶ್ ಅಂತಿಮ ಸಂಸ್ಕಾರದಲ್ಲೂ ಡಿ ಕೆ ಶಿವಕುಮಾರ್ ಟ್ರಬಲ್ ಶೂಟರ್ ರೀತಿ ಕೆಲಸ ನಿರ್ವಹಿಸಿದರು.












Click it and Unblock the Notifications