ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡುರ ಮರಿ ಮೊಮ್ಮಗಳ ದುರಂತ ಅಂತ್ಯ
ಬೆಂಗಳೂರು, ಜನವರಿ 13: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ಪುಟ್ಟ ಬಾಲಕಿ ಸಮನ್ವಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾಳೆ. ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸಮನ್ವಿ (6)ಮಿಂಚಿದ್ದಳು. ಈ ಮೂಲಕ ರಾಜ್ಯದ ಮನೆ ಮಾತಾಗಿದ್ದರು. ಖ್ಯಾತ ಹರಿಕಥಾ ವಿದ್ವಾಂಸರಾದ ಗುರುರಾಜುಲು ನಾಯ್ಡು ಅವರ ಮರಿ ಮೊಮ್ಮಗಳು ಸಮನ್ವಿ. ಗುರುರಾಜುಲು ನಾಯ್ಡು ಅವರ ಪುತ್ರಿ ಹರಿಕಥೆ ವಿದ್ವಾಂಸೆ ಶೋಭಾನಾಯ್ಡು ಅವರ ಪುತ್ರಿ ಅಮೃತ ನಾಯ್ಡು ಅವರ ಪುತ್ರಿ ಸಮನ್ವಿ.
ಅಮೃತ ಹಾಗೂ ಸಮನ್ವಿ ಶಾಪಿಂಗ್ ಮುಗಿಸಿಕೊಂಡು ವಾಜರಹಳ್ಳಿ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಜಿಗಿದ ಅಮೃತ ನಾಯ್ಡು ಗಾಯಗೊಂಡಿದ್ದಾರೆ. ಬೈಕ್‌ನಿಂದ ಪಕ್ಕಕ್ಕೆ ಬಿದ್ದ ಸಮನ್ವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಅಮೃತ ನಾಯ್ಡು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್ ಚಾಲಕನನ್ನು ಕುಮಾರಸ್ವಾಮಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಟಿಪ್ಪರ್ ಲಾರಿ ಅತಿ ವೇಗವಾಗಿ ಬಂದಿದ್ದೇ ಅವಘಡಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ದಾಖಲಿದ್ದಾರೆ. ಅಪಘಾತದಲ್ಲಿ ಮಗುವಿನ ಈ ದಾರುಣ ಸಾವು ಆಕೆಯ ಅಭಿಮಾನಿ ಬಳಗ ಕಣ್ಣೀರು ಹಾಕುವಂತೆ ಮಾಡಿದೆ.

ಎರಡನೇ ಮಗು ಸಾವು: ಗುರುರಾಜಲು ನಾಯ್ಡು ಹರಿಕಥೆ ಮೂಲಕ ಅಪ್ರತಿಮ ಸಾಧನೆ ಮಾಡಿದ್ದರೂ ಅವರ ಕುಟುಂಬವನ್ನು ಬಡತನ ಬಿಟ್ಟಿರಲಿಲ್ಲ. ಬಡತನದ ಹಿನ್ನೆಲೆಯಲ್ಲಿ ಅಮೃತಾ ಅವರಿಗೆ ಮೊದಲು ಜನಿಸಿದ್ದ ಮಗು ಅಪೌಷ್ಠಿಕೆಯಿಂದ ಕೂಡಿತ್ತು. ಹೀಗಾಗಿ ಆಸ್ಪತ್ರೆಯಲ್ಲಿಯೇ ಮಗು ಸಾವನ್ನಪ್ಪಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗದ್ದ ಅಮೃತ ನಾಯ್ಡು ಎರಡನೇ ಮಗು ಸಮನ್ವಿಯಲ್ಲಿ ಖುಷಿ ಕಂಡುಕೊಂಡಿದ್ದರು. ಎಲ್ಲಾ ನೋವು ಮರೆತ ಸಂತಸವನ್ನು ತನ್ನ ಎರಡನೇ ಮಗುವಿನಲ್ಲಿ ಕಂಡು ಕೊಂಡಿದ್ದರು. ಆದರೆ ಯಮರೂಪಿ ಟಿಪ್ಪರ್ ಆ ಎರಡನೇ ಮಗುವನ್ನು ಕಸಿದುಕೊಂಡಿದೆ. ವಿಧಿ ಎಂತಾ ಘೋರ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ಹಲವು ಸಿನಿಮಾಗಳಲ್ಲಿ ನಟನೆ: ಅಮೃತಾ ನಾಯ್ಡು ಹಲವು ಸಿನಿಮಾ ಸೀರಿಯಲ್‌ಗಳಲ್ಲಿ ನಟನೆ ಮಾಡಿದ್ದರು. ಮೊದಲು ಮಿಡ್ಲ್ ಕ್ಲಾಸ್ ಎಂಬ ಸೀರಿಯಲ್‌ನಲ್ಲಿ ಮೊದಲು ಅಮೃತಾ ನಾಯ್ಡು ಬಣ್ಣ ಹಚ್ಚಿದ್ದಳು. ಕಳೆದ ಹದಿನೆಂಟು ವರ್ಷದಿಂದ ಕಲ್ಲು ಸಕ್ಕರೆ, ಗಂಗೋತ್ರಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದರು. ಅಮೃತಾ ನಾಯ್ಡು ಕೂಡ ಹರಿಕಥೆ ಕಲಿತಿದ್ದರು.
"ನಾನು ನಾನು ಎನದಿರು ಎಲೆ ಮಾನವ, ನಿನ್ನ ಜನ್ಮದ ಅರ್ಥವಾ ಗ್ರಹಿಸಿ ನೋಡು, ಅನ್ನದೇ ಬೆಳೆದ ಕಾಯ ನಾಳೆ ಕರ್ಣದಲ್ಲಿ ಹೋಗುವ ಪ್ರಾಣ ನಿನ್ನದೇನೋ.. ನಾನು ಎಂಬುದನ್ನು ಅಹಂ ಬಿಟ್ಟು ಬದುಕಬೇಕು ಎಂಬ ಸಂದೇಶ ತಾರುವ ತಾತ್ಪರ್ಯದ ಹರಿಕಥೆಯ ನಾಲ್ಕು ಸಾಲುಗಳನ್ನು ಖಾಸಗಿ ವಾಹಿನಿಯೊಂದಕ್ಕೆ ಅಮೃತಾ ನಾಯ್ಡು ಸಂದರ್ಶನ ನೀಡಿದ್ದರು. ಹೊಸ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರವನ್ನು ಇತ್ತೀಚೆಗೆ ಆಯ್ಕೆ ಮಾಡಿಕೊಂಡಿದ್ದರು. ಈ ಖುಷಿಯಲ್ಲಿರುವಾಗಲೇ ಅಮೃತಾ ನಾಯ್ಡು ಅವರ ಹೃದಯದಂತಿದ್ದ ಮುದ್ದು ಮಗಳು ಅಪಘಾತದಲ್ಲಿ ಮಡಿದಿದ್ದಾಳೆ.












Click it and Unblock the Notifications