Ration Card: 4.50 ಲಕ್ಷ ಬಿಪಿಎಲ್ ಕಾರ್ಡ್‌ದಾರರಿಗೆ ಶಾಕ್: 110 ಕೋಟಿ ರೂಪಾಯಿ ಉಳಿಸಿದ ಸರ್ಕಾರ
ಕರ್ನಾಟಕ ಸರ್ಕಾರವು ಕೆಲವು ನಿರ್ದಿಷ್ಟ ಪಡಿತರ ಚೀಟಿದಾರರಿಗೆ (Ration Card) ಶಾಕ್ ನೀಡುವ ಮೂಲಕ ಕೋಟ್ಯಾಂತರ ರೂಪಾಯಿ ಹಣ ಉಳಿತಾಯ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಹಣ ಖರ್ಚಾಗುತ್ತಿರುವುದರಿಂದ ವಿವಿಧ ಆದಾಯ ಮೂಲಗಳ ಪರಿಶೀಲನೆ ಹಾಗೂ ವೆಚ್ಚವನ್ನು ಕಡಿತ ಮಾಡುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿತ್ತು. ಇದೀಗ ಬಿಪಿಎಲ್ ಪಡಿತರ ಕಾರ್ಡ್‌ಗಳ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಕರ್ನಾಟಕ ಸರ್ಕಾರವು ಬಿಪಿಎಲ್ ಪಡಿತರ ಕಾರ್ಡ್ ವಿಚಾರದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಲಾಭ ಬಂದಿದೆ. ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ತಗ್ಗಿಸಲು ಹಾಗೂ ಗ್ಯಾರಂಟಿ ಯೋಜನೆಗಳ ಜಾರಿಗೆ ಅನುದಾನ ಹೊಂದಾಣಿಕೆ ಮಾಡುವುದಕ್ಕೆ ರಾಜ್ಯ ಸರ್ಕಾರವು ಸರ್ಕಸ್ ಮಾಡುತ್ತಿದೆ. ಇದೀಗ ಸರ್ಕಾರವು ಬಿಪಿಎಲ್ ಪಡಿತರ ಕಾರ್ಡ್ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವು ಕೋಟ್ಯಾಂತರ ರೂಪಾಯಿ ಉಳಿತಾಯಕ್ಕೆ ಕಾರಣವಾಗಿದೆ.

4.50 ಲಕ್ಷ ಬಿಪಿಎಲ್ ಪಡಿತರ ಕಾರ್ಡ್‌ಗಳ ರದ್ದು
ಕರ್ನಾಟಕ ಸರ್ಕಾರವು ಕಳೆದ ಒಂದು ವರ್ಷದಿಂದಲೂ ಪಡಿಚರ ಚೀಟಿಗಳ ಪರಿಷ್ಕರಣೆ ಪ್ರಕ್ರಿಯೆ ನಡೆಸುತ್ತಿದೆ. ಬಿಪಿಎಲ್ ಹಾಗೂ ಎಪಿಎಲ್‌ಗಳಿಗೆ ನಿಗದಿತ ಮಾನದಂಡಗಳಿವೆ. ಈ ಮಾನದಂಡಗಳನ್ನು ಉಲ್ಲಂಘಿಸುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರವು ಯಾವ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಯ ಬಳಿ ರೇಷನ್ ಕಾರ್ಡ್‌ಗಳಿವೆ ಎನ್ನುವ ಪರಿಶೀಲನೆಯನ್ನು ಮೊದಲು ಪ್ರಾರಂಭಿಸಿತ್ತು. ಇದೀಗ ಒಟ್ಟಾರೆ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ನಿಯಮ ಉಲ್ಲಂಘಿಸಿದ್ದ 4.50 ಲಕ್ಷ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ ಎಂದು ಸರ್ಕಾರವು ತಿಳಿಸಿದೆ.
ಈ ಪ್ರಮಾಣದ ಬಿಪಿಎಲ್ ಕಾರ್ಡ್‌ಗಳ ರದ್ದು ಆಗಿರುವುದರಿಂದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಉಳಿತಾಯವಾಗಿದೆ. ಈ ಕ್ರಮದಿಂದ ಬೊಕ್ಕಸಕ್ಕೆ ಪ್ರತಿ ತಿಂಗಳು 110 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರಾಜ್ಯ ಸರ್ಕಾರವು ರದ್ದು ಮಾಡಿರುವುದರಿಂದ 4.50 ಲಕ್ಷ ಜನರು ಗೃಹಲಕ್ಷ್ಮಿ ಯೋಜನೆಯಿಂದಲೂ ಹೊರಗೆ ಉಳಿಯಲಿದ್ದಾರೆ. ಇದರಿಂದಲೂ ಸರ್ಕಾರಕ್ಕೆ ಭಾರೀ ಹಣ ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯಿಂದ ಕೈಬಿಡುತ್ತೇವೆ
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಯಾವುದಾದರೂ ಸರಿ. ಈ ಎರಡು ಕಾರ್ಡ್‌ಗಳನ್ನು ಹೊಂದಿರುವವರು ಹಾಗೂ ಗೃಹಲಕ್ಷ್ಮಿ ಯೋಜನೆಯ ಭಾಗವಾಗಿರುವವರು ಒಂದೊಮ್ಮೆ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ, ಅವರನ್ನು ಗೃಹಲಕ್ಷ್ಮಿ ಯೋಜನೆಯಿಂದಲೂ ಕೈ ಬಿಡಲಿದ್ದೇವೆ. ಈ ಪರಿಶೀಲನೆ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಈ ಮೂಲಕ ಇನ್ನಷ್ಟು ಜನ ಗೃಹಲಕ್ಷ್ಮೀ ಯೋಜನೆಯಿಂದ ಹೊರಗೆ ಉಳಿಯುವ ಸಾಧ್ಯತೆಯೂ ಇದೆ.
ಮನೆಯಲ್ಲಿ ಒಬ್ಬರಿದ್ದರೂ ಕ್ರಮ
ಇನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಯಾವುದೇ ಒಬ್ಬ ಸದಸ್ಯರಾದರೂ ಜಿಎಸ್‌ಟಿ ಅಥವಾ ಆದಾಯ ತೆರಿಗೆ ವ್ಯಾಪ್ತಿಯ ಒಳಗಡೆ ಇದ್ದರೆ ಆ ನಿರ್ದಿಷ್ಟ ಕುಟುಂಬದ ಒಟ್ಟಾರೆ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ಈಗಾಗಲೇ ಈ ಮಾದರಿಯನ್ನು ಕರ್ನಾಟಕದಾದ್ಯಂತ ಅನುಸರಿಸಲಾಗುತ್ತಿದೆ. ಅಲ್ಲದೇ ಕೆಲವು ಬಿಪಿಎಲ್ ಕಾರ್ಡ್‌ದಾರರಿಗೆ ಯಾವುದೇ ನೋಟಿಸ್ ಜಾರಿ ಮಾಡದೆ ಈ ರೀತಿ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಇದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಅಸಮಾಧಾನವೂ ವ್ಯಕ್ತವಾಗುತ್ತಿದೆ. ಅರ್ಹರನ್ನೂ ಸಹ ಬಿಪಿಎಲ್ ಕಾರ್ಡ್ ವ್ಯಾಪ್ತಿಯಿಂದ ಹೊರಗೆ ಇರಿಸಲಾಗುತ್ತಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ.












Click it and Unblock the Notifications