ಡಿಕೆಶಿ ಭೇಟಿಯಾದ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
Recommended Video
ಬೆಂಗಳೂರು, ಸೆಪ್ಟೆಂಬರ್ 04 : ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ಬಂಧಿಸಿದೆ. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ನವದೆಹಲಿಯಲ್ಲಿ ಮಂಗಳವಾರ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಈ ಕುರಿತು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. "ವಶಕ್ಕೆ ಪಡೆದರು ಎಂದು ಅವರೇನು ಧೈರ್ಯ ಕಳೆದುಕೊಂಡಿಲ್ಲ" ಎಂದು ಹೇಳಿದರು.
"ಇಂದು ದೆಹಲಿಯಲ್ಲಿ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ, ಸುಮಾರು 15 ಅಡಿಗಳ ದೂರದಿಂದ ಅವರನ್ನು ಕಂಡೆ, ನನ್ನನು ನೋಡಿ ವಿಶ್ ಮಾಡಿದರು. ವಶಕ್ಕೆ ಪಡೆದರು ಅಂತ ಅವರೇನು ಧೈರ್ಯ ಕಳೆದುಕೊಂಡಿಲ್ಲ" ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

"ಡಿ. ಕೆ. ಶಿವಕುಮಾರ್ ಆರೋಗ್ಯದ ಬಗ್ಗೆ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಬಂಧನವಾಗಿದ್ದು ಸ್ವಾಯತ್ತ ಸಂಸ್ಥೆಗಳನ್ನ ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಹಣಿಯುವ ಕೆಲಸ ಕೇಂದ್ರ ಬಿಜೆಪಿ ನಾಯಕರಿಂದ ನಡೆಯುತ್ತಿದೆ" ಎಂದು ಆರೋಪಿಸಿದರು.
"ಬಂಧನ ಮಾಡಬೇಕೆಂದೇ ಈ ರೀತಿ ಮಾಡಿದ್ದಾರೆ. ಬಿಜೆಪಿ ನಾಯಕರು ವಿರೋಧ ಪಕ್ಷಗಳನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ. ಐಟಿ, ಇಡಿಯವರು ಅವರ ಕೆಲಸ ಮಾಡಬೇಕೆ ವಿನಃ ಬೇರೆಯವರ ಕೈಗೊಂಬೆಯಾಗಿ ಮಾಡಿದರೆ ಹೇಗೆ ? ಇದೊಂದು ದುರುದ್ದೇಶಪೂರಿತ ಕೃತ್ಯ" ಎಂದರು.
ಡಿ. ಕೆ. ಶಿವಕುಮಾರ್ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರು ಆರೋಗ್ಯವಾಗಿದ್ದಾರೆ ಎಂದು ವರದಿ ನೀಡಿದ ಬಳಿಕ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.












Click it and Unblock the Notifications