ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ರಾಮಲಿಂಗಾ ರೆಡ್ಡಿ?
Recommended Video
ಬೆಂಗಳೂರು, ಜುಲೈ 17 : ಕಾಂಗ್ರೆಸ್ ನಾಯಕರು ನಡೆಸಿದ ಸಂಧಾನ ಸಭೆ ಫಲ ಕೊಟ್ಟಿದೆ. ಬಿ. ಟಿ. ಎಂ. ಕ್ಷೇತ್ರದ ಶಾಸಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ?.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ, "ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಪಕ್ಷದಲ್ಲಿಯೇ ಇರುತ್ತೇನೆ. ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ," ಎಂದು ಹೇಳಿದರು.
"ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ ಕಾಂಗ್ರೆಸ್ ಪಕ್ಷದ ಬಗ್ಗೆಯಾಗಲಿ, ಸಮ್ಮಿಶ್ರ ಸರ್ಕಾರದ ಬಗ್ಗೆಯಾಗಲಿ ಯಾವುದೇ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿಲ್ಲ" ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
ಗುರುವಾರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ರಾಮಲಿಂಗಾ ರೆಡ್ಡಿ ಅವರು ಸದನಕ್ಕೆ ಹಾಜರಾದರೆ ಸರ್ಕಾರದ ಪರವಾಗಿಯೇ ಮತ ಚಲಾವಣೆ ಮಾಡಲಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ಹೇಳಿಕೆಯಿಂದಾಗಿ ಕಾಂಗ್ರೆಸ್ ನಾಯಕರಿಗೆ ಸ್ಪಲ್ಪ ಸಮಾಧಾನವಾಗಿದೆ.

ಸ್ಪೀಕರ್ ಜೊತೆ ಮಾತನಾಡುವೆ
ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, "ನಾನು ಕೆಲವು ಕಾರಣಗಳಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ವಾಪಸ್ ಪಡೆಯುವುದು ಅಥವ ಪಡೆಯದಿರುವ ಬಗ್ಗೆ ಸ್ಪೀಕರ್ ಜೊತೆ ಗುರುವಾರ ಕರೆದಿರುವ ವಿಚಾರಣೆ ವೇಳೆ ಮಾತುಕತೆ ನಡೆಸುತ್ತೇನೆ," ಎಂದರು.

ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ
"ರಾಜಕೀಯದ ಬಗ್ಗೆ ನಾನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಗುರುವಾರ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುತ್ತೇನೆ. ಕಾಂಗ್ರೆಸ್ ಪಕ್ಷ, ಸರ್ಕಾರದ ಬಗ್ಗೆ ನಾನು ವ್ಯತರಿಕ್ತ ಹೇಳಿಕೆ ನೀಡಿಲ್ಲ" ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಯಕರು ಭೇಟಿಯಾಗಿದ್ದರು
ಭಾನುವಾರ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು.

ಜುಲೈ 6ರಂದು ರಾಜೀನಾಮೆ
ಜುಲೈ 6ರಂದು ರಾಮಲಿಂಗಾ ರೆಡ್ಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಇತರ ಶಾಸಕರ ಜೊತೆ ಮುಂಬೈಗೆ ಹೋಗದೆ ಬೆಂಗಳೂರಿನಲ್ಲಿಯೇ ಇದ್ದಾರೆ. ಜುಲೈ 15ರಂದು ವಿಚಾರಣೆಗೆ ಬರುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ನೋಟಿಸ್ ನೀಡಿದ್ದರೂ ರಾಮಲಿಂಗಾ ರೆಡ್ಡಿ ಅವರು ಗೈರಾಗಿದ್ದರು.












Click it and Unblock the Notifications