ಗೊಂದಲಕ್ಕೆ ತೆರೆ; ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಆಯ್ಕೆ
ಬೆಂಗಳೂರು, ಜೂನ್ 30; ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರು ಯಾರು?. ಅಧ್ಯಕ್ಷ ಹುದ್ದೆಯ ಚುನಾವಣೆ ಮುಗಿದು ತಿಂಗಳುಗಳು ಕಳೆದರೂ ಅಧ್ಯಕ್ಷರು ಯಾರು ಎಂಬುದು ಅಂತಿಮವಾಗಿರಲಿಲ್ಲ. ಅಧ್ಯಕ್ಷರ ಆಯ್ಕೆ ಗೊಂದಲದ ಗೂಡಾಗಿ ಕಾಂಗ್ರೆಸ್ ನಾಯಕರ ತಲೆನೋವಿಗೆ ಕಾರಣವಾಗಿತ್ತು.
ಬುಧವಾರ ಸರಣಿ ಸಭೆಗಳ ಬಳಿಕ ರಕ್ಷಾ ರಾಮಯ್ಯ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರು ಎಂದು ಅಂತಿಮಗೊಳಿಸಲಾಗಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಜಾಲತಾಣದಲ್ಲಿ ಈ ಕುರಿತು ಅಪ್‌ಡೇಟ್ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ, ಭದ್ರಾವತಿ ಮೂಲದ ಬಿ. ವಿ. ಶ್ರೀನಿವಾಸ್ ಬುಧವಾರ ಮಾತುಕತೆ ನಡೆಸಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಅಂತಿಮಗೊಳಿಸಿದ್ದಾರೆ.

ರಕ್ಷಾ ರಾಮಯ್ಯ ಮತ್ತು ಮೊಹಮ್ಮದ್ ನಲಪಾಡ್ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆದಿತ್ತು. ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರ ದೆಹಲಿಯನ್ನು ತಲುಪಿತ್ತು. ಅಂತಿಮವಾಗಿ ರಕ್ಷಾ ರಾಮಯ್ಯ ಅಧ್ಯಕ್ಷರಾಗಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮೊಹಮ್ಮದ್ ನಲಪಾಡ್ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ನಲಪಾಡ್ ಆಯ್ಕೆ ಅನರ್ಹಗೊಳಿಸಿ ರಾಷ್ಟ್ರೀಯ ಕಾಂಗ್ರೆಸ್ 2ನೇ ಸ್ಥಾನದಲ್ಲಿದ್ದ ರಕ್ಷಾ ರಾಮಯ್ಯರನ್ನು ಅಧ್ಯಕ್ಷರು ಎಂದು ಘೋಷಣೆ ಮಾಡಿತ್ತು.
ಪಟ್ಟು ಬಿಡದ ಮೊಹಮ್ಮದ್ ನಲಪಾಡ್ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ತಮ್ಮನ್ನು ಅಧ್ಯಕ್ಷರಾಗಿ ಪರಿಗಣಿಸಲಾಗುತ್ತದೆ ಎಂಬ ಭರವಸೆಯಲ್ಲಿಯೇ ಇದ್ದರು.
50-50 ಮಾದರಿ ಸೂತ್ರ; ರಕ್ಷಾ ರಾಮಯ್ಯ ಮತ್ತು ಮೊಹಮ್ಮದ್ ನಲಪಾಡ್ ನಡುವೆ ಅಧಿಕಾರ ಹಂಚಿಕೆ ಸೂತ್ರದಡಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯೂ ಹಬ್ಬಿದೆ. ಸಿದ್ದರಾಮಯ್ಯ ನಿರ್ದೇಶನದಂತೆ ಡಿಸೆಂಬರ್ ತನಕ ರಕ್ಷಾ ರಾಮಯ್ಯ, ಜನವರಿಯಿಂದ ಮೊಹಮ್ಮದ್ ನಲಪಾಡ್ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತಿದೆ.
50:50 ಹಂಚಿಕೆ ಸೂತ್ರದ ಬಗ್ಗೆ ಡಿ. ಕೆ. ಶಿವಕುಮಾರ್ ಸಿದ್ದರಾಮಯ್ಯ ಮತ್ತು ಬಿ. ವಿ. ಶ್ರೀನಿವಾಸ್ ಜೊತೆ ಮಾತುಕತೆ ನಡೆಸಿದ್ದರು. ಸರಣಿ ಸಭೆಗಳ ಬಳಿಕ ಅಂತೂ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಿ ನಿಟ್ಟುಸಿರು ಬಿಟ್ಟಿದೆ.












Click it and Unblock the Notifications