Breaking; ರಾಜ್ಯಸಭೆ ಚುನಾವಣೆ; ನಾಮಪತ್ರ ಸಲ್ಲಿಸಿದ ಜಗ್ಗೇಶ್
ಬೆಂಗಳೂರು, ಮೇ 31; ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಜಗ್ಗೇಶ್ ಮತ್ತು ಲೆಹರ್ ಸಿಂಗ್ ನಾಮಪತ್ರಗಳನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿದೆ.
ಮಂಗಳವಾರ ವಿಧಾನಸೌಧದಲ್ಲಿ ಜಗ್ಗೇಶ್ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಜೆ. ಸಿ. ಮಾಧುಸ್ವಾಮಿ ಜೊತೆ ನಾಮಪತ್ರ ಸಲ್ಲಿಸಿದರು. ಜಗ್ಗೇಶ್ ರಾಜ್ಯಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿಯ ಎರಡನೇ ಅಭ್ಯರ್ಥಿ.
ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಹ ನಳಿನ್ ಕುಮಾರ್ ಕಟೀಲ್ ಮತ್ತು ಕಂದಾಯ ಸಚಿವ ಆರ್. ಅಶೋಕ ಜೊತೆ ನಾಮಪತ್ರ ಸಲ್ಲಿಕೆ ಮಾಡಿದರು.

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ಲೆಹರ್ ಸಿಂಗ್ ಅಭ್ಯರ್ಥಿಗಳು.
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ಉಪಸ್ಥಿತಿಯಲ್ಲಿ ಇಂದು ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಗಳಾಗಿ ಶ್ರೀ @Jaggesh2 ಮತ್ತು ಶ್ರೀ ಲೆಹರ್ ಸಿಂಗ್ ಸಿರೋಯಾ ಅವರು ನಾಮಪತ್ರ ಸಲ್ಲಿಸಿದರು. pic.twitter.com/SYXNFhO5QC
— BJP Karnataka (@BJP4Karnataka) May 31, 2022
ಕಾಂಗ್ರೆಸ್ ಪಕ್ಷದಿಂದ ಜಯರಾಂ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಅಭ್ಯರ್ಥಿಗಳು. ಉಭಯ ನಾಯಕರು ಸೋಮವಾರ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಜೆಡಿಎಸ್ ಪಕ್ಷದಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯಸಭೆ ಸದಸ್ಯರ ಆಯ್ಕೆಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಕರ್ನಾಟಕ ವಿಧಾನಸಭೆಯಲ್ಲಿನ ಶಾಸಕರ ಬಲದ ಆಧಾರದ ಮೇಲೆ ಬಿಜೆಪಿ ಎರಡು, ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲಲಿದೆ. ಜೆಡಿಎಸ್ ಪಕ್ಷಕ್ಕೆ ಒಂದು ಸ್ಥಾನ ಗೆಲ್ಲಲು ಮತಗಳ ಕೊರತೆ ಇದೆ. ಆದರೂ ಸಹ ಪಕ್ಷ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದೆ.
ಈ ನಡುವೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯ ದಾಳ ಉರುಳಿಸಿ ಮನ್ಸೂರ್ ಅಲಿ ಖಾನ್‌ರನ್ನು 2ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಲೆಹರ್ ಸಿಂಗ್‌ರನ್ನು 3ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಕರ್ನಾಟಕದಿಂದ ನಾಲ್ವರು ಸದಸ್ಯರನ್ನು ರಾಜ್ಯಸಭೆಗೆ ಆರಿಸಿ ಕಳಿಸಬೇಕು. ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. 3ನೇ ಸ್ಥಾನ ಯಾರಿಗೆ ಒಲಿಯಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications