ರಾಜ್ಯಕ್ಕೆ ದ್ರೋಹ ನಿರ್ಮಲಾ ಸೀತಾರಾಮನ್ ಅವರಿಗೆ ಮತ ಹಾಕಬೇಡಿ: ಟಿಜೆ ಅಬ್ರಹಾಂ
ಬೆಂಗಳೂರು, ಜೂ. 03: ರಾಜ್ಯಕ್ಕೆ ಯಾವುದೇ ಸಹಾಯ ಮಾಡದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬರಬೇಕಿದ್ದ ಅನುದಾನ ಕೊಟ್ಟಿಲ್ಲ. ಅವರನ್ನು ಪುನಃ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು ದೇಶದ್ರೋಹದ ಕೆಲಸ. ಅವರಿಗೆ ಮತ ಹಾಕುವ ಶಾಸಕರು ರಾಜ್ಯದ್ರೋಹಿಗಳು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಕಿಡಿ ಕಾರಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಟಿಕೆಟ್ ಕೊಟ್ಟಿದ್ದು ಸರಿಯಲ್ಲ. ಇವರ ಆಯ್ಕೆಯಿಂದ ರಾಜ್ಯಕ್ಕೆ ಯಾವುದೇ ಉಪಯೋಗವಿಲ್ಲ. ಇಂತಹವರನ್ನು ಯಾಕೆ ಆಯ್ಕೆ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.

ಹೊರಗಿನವರಿಗೆ ರಾಜ್ಯಸಭೆ ಟಿಕೆಟ್
ನಮ್ಮ ರಾಜ್ಯದಲ್ಲಿ ರಾಜ್ಯ ಸಭೆಯನ್ನು ಪ್ರತಿನಿಧಿಸುವಂತಹ ನಾಯಕರು ಇಲ್ಲವೇ. ಕಾಂಗ್ರೆಸ್‌ನಲ್ಲೂ ಹೊರಗಿನವರು, ಬಿಜೆಪಿಯಿಂದಲೂ ಹೊರಗಿನವರು. ಮ್ಯಾನಿಫೆಸ್ಟೋ ಸರಿಯಾಗಿ ತಯಾರು ಮಾಡ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಹೊರಗಿನವರಿಗೆ ಟಿಕೆಟ್ ಕೊಟ್ಟಿದೆ.
ಬೇರೆ ಎಲ್ಲೂ ಟಿಕೆಟ್ ಪಡೆಯಲಾಗದೇ ಕೆಲವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ನಮ್ಮ ರಾಜ್ಯದ ಬಗ್ಗೆ ಅವರಿಗೆ ಏನು ಗೊತ್ತಿದೆ ಎಂದು ಅವರನ್ನು ಚುನಾಯಿಸಬೇಕು. ಬಿಜೆಯಲ್ಲಿ ಹೊರಗಿನವರನ್ನು ತಂದಿದ್ದಾರೆ. ನಮ್ಮ ರಾಜ್ಯದವರನ್ನು ಆಯ್ಕೆ ಮಾಡಲು ಯೋಗ್ಯತೆ ಇಲ್ಲವೇ ಎಂದು ಟಿ.ಜೆ. ಅಬ್ರಹಾಂ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜಿಎಸ್ ಟಿ ಪಾಲು ತಡೆದ್ರಾ ನಿರ್ಮಲಾ :
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಏನು ಮಾಡಿದ್ದಾರೆ ? ಕೇಂದ್ರದಲ್ಲಿ ಮಂತ್ರಿ ಆಗಿದ್ದಾಗ ತಾನು ಪ್ರತಿನಿಧಿಸಿದ ರಾಜ್ಯಕ್ಕೆ ಸಹಾಯ ಮಾಡಲಿಕ್ಕೆ ಆಗಲ್ಲವೇ ? ನಮ್ಮ ರಾಜ್ಯಕ್ಕೆ ಕೊಡಿ ಅಂತ ಕೇಳಬೇಕಾದ್ರೆ ಅವರು ನಮ್ಮ ರಾಜ್ಯದವರಾಗಿರಬೇಕು. ಜಿಎಸ್ ಟಿ ಪರಿಹಾರ ನಿಧಿ 2020-21 - 2021-22 ಕ್ಕೆ ರಾಜ್ಯಕ್ಕೆ 14881 ಕೋಟಿ ರೂ. ಬಾಕಿ ಇತ್ತು. ನಮ್ಮ ರಾಜ್ಯಕ್ಕೆ ಬರಬೇಕಿದ್ದ ಬಾಕಿ 8636 ಕೋಟಿ ರೂ ಮಾತ್ರ ಬಂದಿದೆ. ಅದೂ ಟಿಕೆಟ್ ಘೋಷಣೆಯಾದ ಮೇಲೆ. ನ್ಯಾಮಿನೇಷನ್ ಫೈಲ್ ಆದ ಮೇಲೆ ರಿಲೀಸ್ ಮಾಡಿದ್ದಾರೆ. ಇನ್ನೂ ಹೆಚ್ಚಿನ ಮೊತ್ತ ಬಾಕಿ ಇಟ್ಟಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ವಿರುದ್ಧ ಅಬ್ರಹಾಂ ಕಿಡಿ ಕಾರಿದರು.

ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ 1480 ಸಾವಿರ ಕೋಟಿ ರೂ.
ರಾಜ್ಯದ ಪ್ರವಾಹ ಪರಿಹಾರಕ್ಕಾಗಿ 30 ಸಾವಿರ ಕೋಟಿ ರೂ. ನೀಡುವಂತೆ ರಾಜ್ಯ ಸರ್ಕಾರ ಕೇಳಿತ್ತು. ಆದ್ರೆ, ಕೇಂದ್ರ ಸರ್ಕಾರ ಕೊಟ್ಟಿದ್ದು 3,412 ಕೋಟಿ ರೂ. ಪ್ರವಾಹದಲ್ಲಿ ರಾಜ್ಯಕ್ಕೆ ಹತ್ತು ಸಾವಿರ ಕೋಟಿ ರೂ. ನಷ್ಟವುಂಟಾಗಿರುವ ಬಗ್ಗೆ ವರದಿ ನೀಡಲಾಗಿತ್ತು. ಆದ್ರೆ ಕೇಂದ್ರ ಸರ್ಕಾರ ಕೇವಲ 1480 ಸಾವಿರ ಕೋಟಿ ರೂ. ಅಂತ ಕೇಂದ್ರ ಸರ್ಕಾರ ಅಂದಾಜಿಸಿತ್ತು. ನಿರ್ಮಲಾ ಸೀತಾರಾಮನ್ ಗೆ ರಾಜ್ಯ ಸಭೆ ಟಿಕೆಟ್ ಸಿಕ್ಕಿರುವುದು ಕರ್ನಾಟಕ ಕೊಟ್ಟ ಭಿಕ್ಷೆ ಎಂದು ಅಬ್ರಹಾಂ ಆಕ್ರೋಶ ವ್ಯಕ್ತಪಡಿಸಿದರು.

ನಿರ್ಮಲಾ ಸೀತಾರಾಮನ್ ಕರ್ನಾಟಕ ದ್ರೋಹಿ
ಹದಿನೈದನೇ ಹಣಕಾಸು ಆಯೋಗ ನಮ್ಮ ರಾಜ್ಯಕ್ಕೆ 5,495 ಕೋಟಿ ರೂ. ನೀಡಿತ್ತು. ಅದಕ್ಕೆ ಅಡ್ಡಿ ಹಾಕಿದ್ದು ಯಾರು ? ಬೇರೆ ಎಲ್ಲೂ ಸೀಟು ಸಿಗದೇ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾಗಲು ಬಂದಿದ್ದಾರೆ. ನಿರ್ಮಲಾ ಸೀತಾರಾಮಾನ್ ನಮ್ಮ ರಾಜ್ಯಕ್ಕೆ ದ್ರೋಹ ಮಾಡಿದ್ದಾರೆ. ನಮ್ಮ ರಾಜ್ಯಕ್ಕೆ ಬರಬೇಕಿದ್ದ ಅನುದಾನವನ್ನು ತಡೆ ಹಿಡಿದು ರಾಜ್ಯದ್ರೋಹ ಮಾಡಿದ್ದಾರೆ. ಅವರಿಗೆ ವೋಟು ಹಾಕಿ ಗೆಲ್ಲಿಸಲು ಹೊರಟಿರೋ ಶಾಸಕರನ್ನು ರಾಜ್ಯ ದ್ರೋಹಿ ಎನ್ನದೇ ಬೇರೆ ಏನಂತ ಕರೆಯಬೇಕು ? ನಿರ್ಮಲಾ ಸೀತರಾಮನ್ ಗೆ ವೋಟು ಹಾಕುವರು ರಾಜ್ಯ ದ್ರೋಹಿಗಳೇ. ನಿರ್ಮಲಾ ಸೀತಾರಾಮನ್ ವಿರುದ್ಧ ಹೋರಾಟ ಮಾಡುವ ತಾಕತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದುಕೊಂಡಿರುವುದು ವಿಪರ್ಯಾಸ ಎಂದು ಅಬ್ರಹಾಂ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications