ರಾಜ್ಯಸಭೆ : ಚಾನ್ಸ್ ತೆಗೆದುಕೊಳ್ಳಲು ಕಾಂಗ್ರೆಸ್ ತಯಾರಿಲ್ಲ

Posted By:
Subscribe to Oneindia Kannada

ಬೆಂಗಳೂರು, ಜೂನ್ 07 : ವೋಟಿಗಾಗಿ ನೋಟು ಸ್ಟಿಂಗ್ ಆಪರೇಷನ್ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ವ್ಯತಿರಿಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಜೂನ್ 11ರಂದು ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ.

ಯಾವುದೇ ಕಾರಣಕ್ಕೂ ಚುನಾವಣೆಯನ್ನು ಮುಂದೂಡಬಾರದು ಎಂದು ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಇಂಡಿಯಾ ಟುಡೇ ಮತ್ತು ಟೈಮ್ಸ್ ನೌ ನಡೆಸಿದ ಕುಟುಕು ಕಾರ್ಯಾಚರಣೆಯ ಕುರಿತು ಕೇಂದ್ರ ಚುನಾವಣಾ ಆಯೋಗ ವರದಿ ತರಿಸಿಕೊಂಡಿದ್ದು, ಚುನಾವಣೆ ಮುಂದೂಡಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ಖಚಿತ ತೀರ್ಮಾನ ಬರಬೇಕಿದೆ.

ಈಗಾಗಲೆ ಏಳಕ್ಕೂ ಹೆಚ್ಚು ಪಕ್ಷೇತರ ಶಾಸಕರನ್ನು, ಮುಂಬೈನ ರೆಸಾರ್ಟೊಂದರಲ್ಲಿ, ತಮ್ಮ 'ವಶ'ದಲ್ಲಿ ಇಟ್ಟುಕೊಂಡಿರುವ ಕಾಂಗ್ರೆಸ್ ಮೂರನೇ ಅಭ್ಯರ್ಥಿಯ ಗೆಲುವಿಗಾಗಿ ಹೆಚ್ಚು ಶ್ರಮ ಪಡಬೇಕಿಲ್ಲ. ಜೈರಾಮ್ ರಮೇಶ್ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಗೆಲುವು ನಿಶ್ಚಿತ. ಆದರೆ, ಕೆಸಿ ರಾಮಮೂರ್ತಿ ಗೆಲುವಿಗಾಗಿ ಇದೆಲ್ಲ ಕಸರತ್ತು ಕಾಂಗ್ರೆಸ್ ಮಾಡಬೇಕಾಗಿದೆ. [ಟೈಮ್ಸ್ ನೌ ವರದಿಗಾರ್ತಿಯನ್ನು 'ಸಾಲೀ' ಎಂದ ಟೀಕಿಸಿದ ಖೇಣಿ]

Rajya Sabha Election : Congress win certain, but not ready to take chances

ಜೆಡಿಎಸ್ ನಲ್ಲಿ ಭಿನ್ನಮತ ಸ್ಫೋಟ

ಈ ಚುನಾವಣೆಯಲ್ಲಿ ಜೆಡಿಎಸ್ ಸೋಲು ಹೆಚ್ಚೂ ಕಡಿಮೆ ಖಚಿತವಾಗಿದೆ. ಬಿಎಂ ಫಾರೂಕ್ ಅವರನ್ನು ಕಣಕ್ಕಿಳಿಸಿದ್ದರೂ, ಜೆಡಿಎಸ್‌ನ ಕೆಲ ಭಿನ್ನಮತೀಯರು ತಾವು ಕಾಂಗ್ರೆಸ್ಸಿಗೆ ಬೆಂಬಲ ನೀಡುವುದಾಗಿ ಡಂಗುರ ಸಾರಿದ್ದು ಒಂದೆಡೆಯಾದರೆ, ಸ್ಟಿಂಗ್ ಆಪರೇಷನ್‌ನಲ್ಲಿ ಸ್ವತಃ ಫಾರೂಕ್ ಹೆಸರು ಕೇಳಿಬಂದಿದ್ದು ಭಾರೀ ಹಿನ್ನಡೆಯಾದಂತಾಗಿದೆ.

ಒಟ್ಟು 40 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ಸಿಗೆ ಗೆಲ್ಲಲು ಇನ್ನೂ 5 ಮತಗಳು ಬೇಕು. ಆದರೆ, ಜಮೀರ್ ಅಹ್ಮದ್ ಸೇರಿದಂತೆ ಐವರು ಶಾಸಕರು ತಮ್ಮ ಕಾಂಗ್ರೆಸ್ಸಿಗೇ ಎಂದು 'ಕೈ' ಎತ್ತಿದ್ದರಿಂದ ಜೆಡಿಎಸ್‌ಗೆ ಗೆಲ್ಲಲು ಒಟ್ಟು 10 ಮತಗಳ ಅವಶ್ಯಕತೆಯಿದೆ. ಆ ಹತ್ತು ಮತಗಳನ್ನು ದೇವೇಗೌಡರು ಮತ್ತು ಕುಮಾರಸ್ವಾಮಿ ಹೇಗೆ ಗಳಿಸುತ್ತಾರೆ? ಯಕ್ಷ ಪ್ರಶ್ನೆ! [ಮುಂಬೈಗೆ ಹಾರಿದ ಪಕ್ಷೇತರ ಶಾಸಕರು]

ಕಾಂಗ್ರೆಸ್ ಚಾಲಾಕಿ ನಡೆ

ಕೋಲಾರದ ಶಾಸಕ ವರ್ತೂರು ಪ್ರಕಾಶ್ ಸೇರಿದಂತೆ ಎಲ್ಲಾ ಹತ್ತು ಪಕ್ಷೇತರರು, ನಮ್ಮ ಮತ ಕಾಂಗ್ರೆಸ್ಸಿಗೆ ಎಂದು ಬಹಿರಂಗವಾಗಿ ಘೋಷಿಸಿದ್ದರೂ, ಕಾಂಗ್ರೆಸ್ ಯಾವುದೇ ಚಾನ್ಸ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಇನ್ನೂ ಮೂರು ದಿನ, ಅಂದರೆ ಜೂನ್ 10ರವರೆಗೆ ಮುಂಬೈ ರೆಸಾರ್ಟಿನಲ್ಲಿ ಮಜಾಮಾಡುತ್ತ ಕಾಲಕಳೆಯುತ್ತಿರುವ ಯಶವಂತಪುರ ಶಾಸಕ ಸೋಮಶೇಖರ ಗೌಡ ಮತ್ತಿತರ ಪಕ್ಷೇತರರು ಬೆಂಗಳೂರಿಗೆ ಮರಳುವುದು ಅನುಮಾನ.

ಎಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ನಡೆಗಳನ್ನು ಬಲ್ಲ ಕಾಂಗ್ರೆಸ್ ಧುರೀಣರು ಜಾಣತನದಿಂದ ಪಕ್ಷೇತರರನ್ನೆಲ್ಲ ಮುಂಬೈಗೆ ಹೈಜಾಕ್ ಮಾಡಿದ್ದಾರೆ. 124 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಮೂರನೇ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲಾ ತಂತ್ರಗಾರಿಕೆ ಬಳಸುತ್ತಿದೆ. ಹೌದಾ, ಇದರಲ್ಲಿ ತಪ್ಪೇನು, ಏನೋ ತಮ್ಮ ಕೆಲಸದ ಮೇಲೆ ಹೋಗಿರಬಹುದು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕವಾಡುತ್ತಿರುವುದು ಸ್ಪಷ್ಟ. [ಪಾಟೀಲರ ಬಾಯಲ್ಲಿ ಇದೆಂಥ ಅವಾಚ್ಯ ಶಬ್ದ, ಶಿವಶಿವ!]

ಎಲ್ಲರ ಕಣ್ಣು ಚುನಾವಣಾ ಆಯೋಗದ ಮೇಲೆ

ಸ್ಟಿಂಗ್ ಆಪರೇಷನ್ ಅನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ಚುನಾವಣೆಯನ್ನು ಮುಂದೂಡುವುದಾ? ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕಿದ್ದರೆ ಚುನಾವಣೆಯನ್ನು ಮುಂದೂಡಲೇಬೇಕು ಎಂದು ಮಾಧ್ಯಮಗಳೂ ಆಯೋಗಕ್ಕೆ ಒತ್ತಡ ತರುತ್ತಿವೆ. ಸಸ್ಪೆನ್ಸ್ ಮುಂದುವರಿದಿದೆ. [ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ? ಮತ ಲೆಕ್ಕಾಚಾರ ಹೇಗಿರುತ್ತೆ?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Congress is confident that the independents would vote for their candidate in Rajya Sabha election to be held on June 11, 2016. However it is still not ready to bring the 7 independents from Mumbai to Bengaluru until June 10. Though win is certain, Congress is not ready to take any chances.
Please Wait while comments are loading...