ರಾಜ್ಯಸಭೆ ಚುನಾವಣೆ: ಡಿಪಿಎಸ್ ಸಹ ಸ್ಥಂಸ್ಥಾಪಕ ಮನ್ಸೂರ್ ಆಲಿಖಾನ್ ಆಸ್ತಿ ವಿವರ
ಬೆಂಗಳೂರು, ಮೇ. 31: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿಖಾನ್ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಶೋಧನಾ ವಿಭಾಗದ ಅಧ್ಯಕ್ಷರಾಗಿರುವ ಮನ್ಸೂರ್ ಆಲಿಖಾನ್ 20 ಪುಟಗಳ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ.
ಜೂನ್ 10 ರಂದು ನಡೆಯಲಿರುವ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಮೊದಲ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಜಯರಾಮ್ ರಮೇಶ್ ಅವರನ್ನು ಕಣಕ್ಕೆ ಇಳಸಿದ್ದು ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿಖಾನ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ಅವರು ರೂಪಿಸಿರುವ ತಂತ್ರದ ಭಾಗವಾಗಿ ಆಲಿಖಾನ್ ಕಣಕ್ಕೆ ಇಳಿದಿದ್ದು ಮಂಗಳವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಎಜುಕೇಷನಿಸ್ಟ್ ಮನ್ಸೂರ್ ಆಲಿ ಖಾನ್
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮನ್ಸೂರ್ ಆಲಿಖಾನ್ ಗೆ 49 ವರ್ಷ ವಯಸ್ಸು. ಜಯನಗರದ ಮೂರನೇ ಬ್ಲಾಕ್ ನಿವಾಸಿ. ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇನ್ನು ಮನ್ಸೂರ್ ಖಾನ್ ಡೆಲ್ಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ಪಾಲುದಾರ. ದೆಹಲಿ ಪಬ್ಲಿಕ್ ಸ್ಕೂಲ್ ಪೂರ್ವ, ಮೈಸೂರು ಹಾಗು ಸ್ಕೂಲ್ ಆಫ್ ಇಂಡಿಯಾದ ಸಹ ಸಂಸ್ಥಾಪಕ. ಅವರ ಸಮುದಾಯದ ಕೆಲ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಖ್ಯಾತಿ ಗಳಿಸಿದ್ದಾರೆ.

ಮನ್ಸೂರ್ ಪತ್ನಿಯೂ ಸಮಪಾಲು ಆದಾಯ :
2020-21 ನೇ ಸಾಲಿನಲ್ಲಿ 2 ಕೋಟಿ ರೂಪಾಯಿ ಅಧಿಕೃತ ಆದಾಯ ಘೋಷಣೆ ಮಾಡಿಕೊಂಡಿದ್ದಾರೆ. 2019-20 ರಲ್ಲಿ 1.99 ಕೋಟಿ ರೂ. ಆದಾಯ ತೋರಿಸಿಕೊಂಡಿದ್ದರು. ಇನ್ನು ಅವರ ಪತ್ನಿ 2020-21 ನೇ ಸಾಲಿನಲ್ಲಿ 1.62 ಕೋಟಿ ರೂ. ಆದಾಯ ಘೋಷಣೆ ಮಾಡಿಕೊಂಡು ಆದಾಯ ತೆರಿಗೆ ಪಾವತಿಸಿದ್ದಾರೆ. ಮನ್ಸೂರ್ ಆಲಿಖಾನ್ ವಿರುದ್ಧ ಯಾವುದೇ ಕ್ರಿಮಿನಲ್ ಹಿನ್ನೆಲೆಯ ಅಪರಾಧ ಪ್ರಕರಣಗಳು ದಾಖಲಾಗಿಲ್ಲ.

ಮನ್ಸೂರ್ ಖಾನ್ ಜಮೀನು ವಿವರ:
ಮನ್ಸೂರ್ ಖಾನ್ ಅವರ ಬಳಿ 6.5 ಲಕ್ಷ ರೂ. ನಗದು ಹಣ ಇರುವುದಾಗಿ ನಾಮಪತ್ರದ ಜತೆ ಸಲ್ಲಿಸಿರುವ ಆಸ್ತಿ ಘೋಷಣೆ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರ ಪತ್ನಿ 2.5 ಲಕ್ಷ ರೂ. ನಗದು ಹಣ ಹೊಂದಿದ್ದಾರೆ. ಇನ್ನು ವಿವಿಧ ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಡೆಪಾಸಿಟ್ ಮಾಡಿದ್ದಾರೆ. ಎಚ್ಎಸ್ಆರ್ ಲೇಔಟ್ ಎಸ್‌ಬಿಐ ನಲ್ಲಿ 12.54 ಲಕ್ಷ ರೂ., ಜಯನಗರ ಕೆನರಾಬ್ಯಾಂಕ್ ನಲ್ಲಿ 5 ಲಕ್ಷ ರೂ, ಬಸವನಗುಡಿ ಆಕ್ಸಿಸ್ ಬ್ಯಾಂಕ್ ನಲ್ಲಿ 11 ಲಕ್ಷ ರೂ., ಜಯನಗರದ ಕರ್ನಾಟಕ ಬ್ಯಾಂಕ್ ನಲ್ಲಿ 64 ಲಕ್ಷ ರೂ, ಆಕ್ಸಿಸ್ ಬ್ಯಾಂಕ್ ನಲ್ಲಿ ಪತ್ನಿ ಜತೆಗಿನ ಜಂಟಿ ಖಾತೆಯಲ್ಲಿ 13 ಲಕ್ಷ ರೂ, ಹಲಸೂರು ಎಚ್‌ಡಿಎಫ್ ಸಿ ಬ್ಯಾಂಕ್ ನಲ್ಲಿ 13 ಲಕ್ಷ ರೂ. ಇಟ್ಟಿದ್ದಾರೆ. ಇನ್ನು ಖಾನ್ ಪತ್ನಿ ಕೂಡ ಫೆಡರಲ್ ಬ್ಯಾಂಕ್ ನಲ್ಲಿ 37 ಲಕ್ಷ ರೂ, ಹಲಸೂರು ಎಚ್‌ಡಿ ಎಫ್ ಸಿ ನಲ್ಲಿ 6 ಲಕ್ಷ ರೂ, ಸರ್ಜಾಪುರ ರಸ್ತೆ ಅಕ್ಸಿಸ್ ಬ್ಯಾಂಕ್ ನಲ್ಲಿ 61 ಲಕ್ಷ ರೂ, ಜಯನಗರ ಯೂನಿಯನ್ ಬ್ಯಾಂಕ್‌ನಲ್ಲಿ 8 ಲಕ್ಷ ರೂ. ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ. ಖಾನ್ ಅವಲಂಬಿತರು (ಮಕ್ಕಳು) ಹೆಸರಿನಲ್ಲಿ ಲಕ್ಷ ಲಕ್ಷ ಹಣ ಡೆಪಾಸಿಟ್ ಇಟ್ಟಿದ್ದಾರೆ.
ಮನ್ಸೂರ್ ಆಲಿಖಾನ್ ಅವರು ಜಾಲದ ಸಾತನೂರು ಬಳಿ 2. ಎಕರೆ ಜಮೀನು ಇದ್ದು, ಇದರ ಮಾರುಕಟ್ಟೆ ಮೌಲ್ಯ ಮೂರು ಕೋಟಿ ರೂ. ದೊಮ್ಮಸಂದ್ರದ ಸೂಲಿಕುಂಟೆ ಬಳಿ ಒಂದು ಎಕರೆ ಕೃಷಿ ಜಮೀನು, ಸೂಲಿಕುಂಟೆ ಬಳಿ ನಾನಾ ಕಡೆ ಕೃಷಿ ಜಮೀನು, ಮೈಸೂರಿನ ಬೋಗೇನಹಳ್ಳಿಯಲ್ಲಿ ಜಮೀನು, ಶ್ರೀರಂಗಪಟ್ಟಣದಲ್ಲಿ 9 ಎಕರೆ ಜಮೀನು ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

ಕೋಟಿ ಕೋಟಿ ಬೆಲೆ ಬಾಳುವ ಪ್ಲಾಟ್ ಗಳ ಒಡೆಯ
ಮನ್ಸೂರ್ ಆಲಿ ಖಾನ್ ಅವರು ಸಾರಕ್ಕಿಯಲ್ಲಿ ನಿವೇಶನ, ಪತ್ನಿ ಜಯನಗರದಲ್ಲಿ ಪ್ಲಾಟ್ ಹೊಂದಿದ್ದಾರೆ. ಎರಡರ ಮಾರುಕಟ್ಟೆ ಮೌಲ್ಯ ಮೂರು ಕೋಟಿ ರೂ.ಗೂ ಅಧಿಕ. ರಾಮನಹಳ್ಳಿಯಲ್ಲಿ 9 ಗುಂಟೆ ಜಮೀನು, ಸಂಪಿಗೆಹಳ್ಳಿಯಲ್ಲಿ ನಿವೇಶನ, ಎಚ್‌ಎಸ್ ಆರ್ ಬಡಾವಣೆ, ಮೈಸೂರು ವಿವಿಧ ಕಡೆ ಮನ್ಸೂರ್ ಆಲಿಖಾನ್ ಕೃಷಿಯೇತರ ಜಮೀನು, ನಿವೇಶನಗಳನ್ನು ಹೊಂದಿದ್ದಾರೆ. ಪ್ರಿಸ್ಟೇಜ್ ಸೇರಿದಂತೆ ವಿವಿಧ ಕೋಟಿ ಕೋಟಿ ಬೆಲೆ ಬಾಳುವ ಪ್ಲಾಟ್ ಗಳ ಒಡೆಯನಾಗಿದ್ದಾರೆ. ಒಟ್ಟಾರೆ 39 ಕೋಟಿ. ಮೊತ್ತದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದು, ಅವರ ಪತ್ನಿ 4.95 ಕೋಟಿ ರೂ. ಮೌಲ್ಯ ಆಸ್ತಿಗಳ ಒಡೆಯರಾಗಿದ್ದಾರೆ.

ಖಾನ್ ಮತ್ತು ಪತ್ನಿಯ ಚರಾಸ್ತಿ:
ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಅವರು ಒಟ್ಟು 1.92 ಕೋಟಿ ರೂ. ಸಾಲ ಹೊಂದಿದ್ದಾರೆ. ಅವರ ಪತ್ನಿ ಕೂಡ 2.03 ಕೋಟಿ ರೂ. ಸಾಲಗಾರ್ತಿಯಾಗಿದ್ದಾರೆ. ಮನ್ಸೂರ್ ಆಲಿಖಾನ್ ಬಳಿ 8. 39 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 4.41 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, ಅವರ ಇಬ್ಬರ ಮಕ್ಕಳು ತಲಾ 18 ಲಕ್ಷ ರೂ. ಮೊತ್ತದ ಚರಾಸ್ತಿ ಹೊಂದಿದ್ದಾರೆ. ಇನ್ನು 12. 76 ಕೋಟಿ ಮೊತ್ತದಲ್ಲಿ ಸ್ತಿರಾಸ್ತಿ ಖರೀದಿ ಮಾಡಿದ್ದು, ಅದರ ಅಭಿವೃದ್ಧಿ ವೆಚ್ಚ ನಾಲ್ಕು ಕೋಟಿ ರೂ. ಆಗಿದೆ. ಇನ್ನು ಪತ್ನಿ ಬಳಿ 4.41 ಕೋಟಿ ರೂ.ಗೆ ಆಸ್ತಿ ಹೊಂದಿದ್ದಾರೆ. ಒಟ್ಟಾರೆ ಆಲಿಖಾನ್ ಅವರ ಸ್ತಿರ ಮತ್ತು ಚರಾಸ್ತಿ ಮಾರುಕಟ್ಟೆ ಬೆಲೆ ಆಧರಿಸಿ ಹೇಳುವುದಾದರೆ ಐವತ್ತು ಕೋಟಿಗಿಂತಲೂ ಅಧಿಕವಾಗುತ್ತದೆ.












Click it and Unblock the Notifications