ರಾಜ್ಯಸಭೆಗೆ ಜಗ್ಗೇಶ್: ನಟನ ಆಯ್ಕೆಯ ಹಿಂದೆ ಇರುವ ಕಾರಣಗಳು
ಬೆಂಗಳೂರು, ಮೇ 30: ರಾಜ್ಯಸಭೆ ಚುನಾವಣೆಗೆ ಅಚ್ಚರಿ ಎಂಬಂತೆ ಬಿಜೆಪಿಯಿಂದ ನಟ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ವೇದಿಕೆಯಲ್ಲಿ ಜಗ್ಗೇಶ್ ಅವರ ಹೆಸರು ಇತ್ತೇ? ಜಗ್ಗೇಶ್ ಅವರ ಹೆಸರನ್ನು ಹೈಕಮಾಂಡ್‌ಗೆ ಸಲಹೆ ನೀಡಿದವರು ಯಾರು? ಯಾವ ಮಾನದಂಡದ ಮೇಲೆ ಜಗ್ಗೇಶ್ ಅವರನ್ನು ಟಿಕೆಟ್ ನೀಡಲಾಗಿದೆ ಎಂಬುದನ್ನು ರಾಜಕೀಯ ವಲಯದಲ್ಲಿ ಎಲ್ಲರನ್ನೂ ಚರ್ಚೆಗೀಡು ಮಾಡಿದೆ.
ಕನ್ನಡ ಚಿತ್ರರಂಗದಿಂದ ಬಂದವರು ವಿಧಾನಸಭೆಗೆ, ವಿಧಾನ ಪರಿಷತ್ತಿಗೆ ಮತ್ತು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಆದರೆ, ರಾಜ್ಯಸಭೆಗೆ ಚಿತ್ರರಂಗದ ಮಂದಿ ಹೋಗುತ್ತಿರುವುದು ಇದೇ ಮೊದಲು. ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಜಗ್ಗೇಶ್ ಈಗ ರಾಜ್ಯಸಭೆಯ ಪ್ರವೇಶ ಮಾಡುತ್ತಿದ್ದಾರೆ.
ನಟ ಜಗ್ಗೇಶ್ ಸದ್ಯ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯ ಮೇಲೆ ಕಣ್ಣು ಇಟ್ಟಿದ್ದರು. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ತಮ್ಮನ್ನು ನಾಮಕರಣ ಮಾಡುವಂತೆ ಕೇಳಿದ್ದರು ಎಂದೂ ಹೇಳಲಾಗುತ್ತಿದೆ. ಅಲ್ಲದೆ, ರಾಜ್ಯಸಭೆಗೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಜಗ್ಗೇಶ್ ಹೆಸರು ಚರ್ಚಿತವಾಗಿತ್ತು. ಆದರೆ, ಅವರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಬಿಜೆಪಿಗರಲ್ಲೂ ಇರಲಿಲ್ಲ ಎನ್ನಲಾಗಿದೆ.
ಕರ್ನಾಟಕ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಗೆ ಆಯ್ಕೆಗೊಂಡ ನಾಲ್ಕು ಸದಸ್ಯರುಗಳು ಅಂದರೆ ನಿರ್ಮಲಾ ಸೀತಾರಾಮನ್, ಜಯರಾಂ ರಮೇಶ್, ಕೆ.ಸಿ. ರಾಮಮೂರ್ತಿ ಜೂನ್ 30ರಂದು ನಿವೃತ್ತರಾಗಲಿದ್ದಾರೆ. ಇದಲ್ಲದೆ, ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಸೇರಿ ಪಟ್ಟು ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಚುನಾವಣಾ ವೇಳಾಪಟ್ಟಿಯಂತೆ ಮೇ 24ರ ಮಂಗಳವಾರದಂದು ಅಧಿಸೂಚನೆಯನ್ನು ಹೊರಡಿಸಿದ್ದು, ಮೇ 31ರ ಮಂಗಳವಾರದಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಜೂನ್ 01ರ ಬುಧವಾರದಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಜೂನ್ 03ರ ಶುಕ್ರವಾರದಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಅವಶ್ಯವಿದ್ದಲ್ಲಿ ಜೂನ್ 10ರ ಶುಕ್ರವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಮತದಾನವನ್ನು ನಡೆಸಲಾಗುವುದು. 2022ರ ಜೂನ್ 10ರ ಶುಕ್ರವಾರ ಸಂಜೆ 5:00 ಗಂಟೆಯಿಂದ ಮತಗಳ ಏಣಿಕೆ ನಡೆಯಲಿದ್ದು, ಜೂನ್ 13ರ ಸೋಮವಾರದಂದು ಚುನಾವಣೆ ಮುಕ್ತಾಯಗೊಳ್ಳಲಿದೆ.

ಜಗ್ಗೇಶ್ ಅಚ್ಚರಿಯ ಆಯ್ಕೆ
ಬಿಜೆಪಿ ಹೈಕಮಾಂಡ್ ಕರ್ನಾಟಕ ಸಹಿತ ಹಲವು ರಾಜ್ಯಗಳ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಮೇ 29ರ ರಾತ್ರಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನಟ ಜಗ್ಗೇಶ್ ಅವರಿಗೆ ಟಿಕೆಟ್ ಘೋಷಿಸಿದೆ. ಈ ಪಟ್ಟಿ ಬಹುತೇಕರಿಗೆ ಅಚ್ಚರಿ ಮೂಡಿಸಿತು. ಕಾರಣ ನಿರ್ಮಲಾ ಸೀತಾರಾಮನ್ ಈ ಬಾರಿ ಕರ್ನಾಟಕ ಬದಲು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಪ್ರವೇಶಿಸುತ್ತಾರೆ. ಇಲ್ಲಿ ಸ್ಥಳೀಯತರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದಿಂದಲೇ ಟಿಕೆಟ್ ನೀಡಲಾಗಿದೆ. ಇನ್ನು ಹೆಸರಿಗೇ ಇಲ್ಲದ ಜಗ್ಗೇಶ್ ಅವರಿಗೆ ಟಿಕೆಟ್ ನೀಡಿದ್ದು ಹೇಗೆ ಎಂಬ ಅಚ್ಚರಿಯೂ ಬಿಜೆಪಿಯೊಳಗಿನ ಹಲವರಿಗೆ ಕಾಡಿದೆ ಎಂಬುದು ಸುಳ್ಳಲ್ಲ.

ಶಾಸಕರಾಗಿ ಪಕ್ಷಾಂತರ ಮಾಡಿದ್ದ ಜಗ್ಗೇಶ್
ಜಗ್ಗೇಶ್ ಅವರಿಗೆ ರಾಜಕಾರಣ ಹೊಸದಲ್ಲ. ಚಿತ್ರನಟರಾಗಿ ಜನರನ್ನು ರಂಜಿಸುವುದರ ಜತೆಗೆ ರಾಜಕೀಯದಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಪಕ್ಷಾಂತರಗಳನ್ನು ಮಾಡಿದ್ದಾರೆ, ಏಳು ಬೀಳುಗಳನ್ನು ಕಂಡಿದ್ದಾರೆ. ಅವಕಾಶ ಸಿಗದಿದ್ದಾಗ ರಂಪಾಟವನ್ನೂ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಆಪ್ತರಾಗಿದ್ದ ಜಗ್ಗೇಶ್ 2008ರಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆಗ ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ಡಿ. ಲಕ್ಷ್ಮೀನಾರಾಯಣ ವಿರುದ್ಧ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ರಾಜ್ಯಸಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಬಿಜೆಪಿಗೆ ಪಕ್ಷಾಂತರ ಮಾಡಿದರು. ನಂತರ ಅವರನ್ನು 2010ರಿಂದ 2016ರವರೆಗೆ ಬಿಜೆಪಿ ವಿಧಾನ ಪರಿಷತ್ತಿಗೆ ನಾಮಕರಣ ಮಾಡಲಾಗಿತ್ತು. ಆಗಿನಿಂದಲೂ ಬಿಜೆಪಿಯಲ್ಲಿಯೇ ಇರುವ ಜಗ್ಗೇಶ್ ಅವರನ್ನು ಕಳೆದ ವರ್ಷ ಪಕ್ಷದ ವಕ್ತರಾರನ್ನಾಗಿ ಮಾಡಲಾಗಿತ್ತು.

ಯಶವಂತಪುರದಲ್ಲಿ ಸೋತರೂ ಟಿಕೆಟ್ ಆಕಾಂಕ್ಷಿ ಆಗಿದ್ದರು ಜಗ್ಗೇಶ್
2018ರ ವಿಧಾನಸಭಾ ಚುನಾವಣೆಯಲ್ಲಿ ಜಗ್ಗೇಶ್ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆ ಆಗಿದ್ದರಿಂದ ಗೆಲುವು ಸಾಧ್ಯವಾಗಲಿಲ್ಲ. ಕೇವಲ 59,308 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಆಗ ಶೋಭಾಕರಂದ್ಲಾಜೆ ಮತ್ತು ಜಗ್ಗೇಶ್ ಎರಡು ಹೆಸರುಗಳು ಬಿಜೆಪಿಯಿಂದ ಇದ್ದವು. ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆಯಾದ್ದರಿಂದ ಗೆಲುವು ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಈ ಬಾರಿ ಚುನಾವಣೆಗೆ ಬಹುತೇಕ ಒಂದು ವರ್ಷ ಮುಂಚೆಯೇ ಜಗ್ಗೇಶ್ ಸಿದ್ದರಾಗಿದ್ದರು. ಯಶವಂತಪುರದಿಂದ ಟಿಕೆಟ್ ಕೊಡುವಂತೆ ಕೇಳಿದ್ದರು. ಆದರೆ, ಆಗ ಕಾಂಗ್ರೆಸ್‌ನಲ್ಲಿದ್ದ ಎಸ್.ಟಿ. ಸೋಮಶೇಖರ್ ಅವರೇ ಈಗ ಬಿಜೆಪಿಗೆ ಬಂದು ಮತ್ತೊಮ್ಮೆ ಯಶವಂತಪುರದಿಂದ ಶಾಸಕರಾಗಿದ್ದಾರೆ. ಇದು ಚುನಾವಣೆ ವೇಳೆಗೆ ಅಸಮಾಧಾನಕ್ಕೂ ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಸ್.ಟಿ. ಸೋಮಶೇಖರ್ ದಾರಿ ಸುಗಮ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.

ಎರಡೂ ಬಣಗಳ ಮಧ್ಯೆ ಜಗ್ಗೇಶ್‌ಗೆ ಲಾಟರಿ
ಸದ್ಯ ಬಿಜೆಪಿಯಲ್ಲಿ ಎರಡು ಬಣಗಳ ಮಧ್ಯೆ ತೀವ್ರ ಪೈಪೋಟಿ ಇದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಣ ಮೇಲುಗೈ ಸಾಧಿಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ. ರಾಘವೇಂದ್ರ ಹಾಗೂ ಆಪ್ತ ಮೋಹನ್ ಲಿಂಬಿಕಾಯಿ ಸಹಿತ ಹಲವರಿಗೆ ಟಿಕೆಟ್ ನಿರಾಕಸಿರುವುದು ಬಿಎಸ್‌ವೈ ಅವರನ್ನು ಕೆರಳಿಸಿದೆ. ಎರಡು ರಾಜ್ಯಸಭಾ ಸ್ಥಾನಗಳ ಪೈಕಿ ಒಂದು ನಿರ್ಮಲಾ ಸೀತಾರಾಮನ್ ಅವರಿಗಾದರೆ ಮತ್ತೊಂದು ಸ್ಥಾನವನ್ನು ನಿರ್ಮಲ್ ಕುಮಾರ್ ಸುರಾನಾ ಅವರಿಗೆ ನಿಡಬೇಕು ಎಂಬುದು ಬಿ.ಎಲ್. ಸಂತೋಷ್ ಬಣದ ಬಯಕೆಯಾಗಿತ್ತು. ಹಾಗೇನಾದರೂ ಸುರಾನಾ ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಬಿಎಸ್‌ವೈ ಮತ್ತಷ್ಟು ಉಗ್ರರೂಪ ತಾಳಬಹುದು ಎಂದು ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಚಿತ್ರರಂಗ ಚುನಾವಣೆಗೆ ಅನುಕೂಲ
ಇನ್ನು ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತಿಲ್ಲ. ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲೂ ಸಹ ಬೇರೆ ಬೇರೆ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ, ಒಕ್ಕಲಿಗರನ್ನು ಒಬ್ಬರನ್ನೂ ಆಯ್ಕೆ ಮಾಡಿಲ್ಲ ಎಂಬ ಆರೋಪ ಬಿಜೆಪಿಯೊಳಗೆ ಇತ್ತು. ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದಿ ಜಗ್ಗೇಶ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರಚಾರ ಕಾರ್ಯಕ್ಕೆ ಜಗ್ಗೇಶ್ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಜನರನ್ನು ಆಕರ್ಶಿಸುವ ಶಕ್ತಿ ಅವರಿಗೆ ಇದೆ. ಚಿತ್ರರಂಗದ ಇನ್ನೂ ಕೆಲವರನ್ನು ಪಕ್ಷಕ್ಕೆ ಸೆಳೆಯಬಹುದು ಎಂಬ ನಿರೀಕ್ಷೆಯಿಂದ ಜಗ್ಗೇಶ್ ಅವರಿಗೆ ಮಣೆ ಹಾಕಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications