ರಾಜ್ಯ ರೈತ ಸಂಘದಿಂದ 50 ಕ್ಷೇತ್ರಗಳಲ್ಲಿ ಸ್ಪರ್ಧೆ
ಬೆಂಗಳೂರು, ಮಾರ್ಚ್ 11: ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್ ಆರ್ ಎಸ್)ವು ತಮ್ಮ ಏಕೈಕ ಜನಪ್ರತಿನಿಧಿಯಾಗಿದ್ದ ಮೇಲುಕೋಟೆ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರನ್ನು ಕಳೆದುಕೊಂಡ ದುಃಖದಲ್ಲಿದೆ. ಈ ನಡುವೆ ಪುಟ್ಟಣ್ಣಯ್ಯ ಅವರ ನಂತರವೂ ರೈತ ಪರ ಹೋರಾಟ ಮುಂದುವರೆಸಲು ಸಮರ್ಥ ನಾಯಕರ ಹುಡುಕಾಟ ಜಾರಿಯಲ್ಲಿದೆ.
ಜತೆಗೆ, ಈ ಬಾರಿಯೂ ಕೂಡಾ ಚುನಾವಣೆ ಅಖಾಡಕ್ಕಿಳಿಯಲು ನಿರ್ಧರಿಸಿದೆ. ವಿಧಾನಸಭೆ ಚುನಾವಣೆ 2018ರಲ್ಲಿ ಕನಿಷ್ಟ 50 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು 50 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಲಾಗಿದೆ. ದಾವಣಗೆರೆಯ ಎಪಿಎಂಸಿ ಸಭಾಂಗಣದಲ್ಲಿ ಶನಿವಾರದಂದು ಸಂಘದ ಸದಸ್ಯರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಕಾಂಗ್ರೆಸ್ ಸರ್ಕಾರವು ರೈತರ ಸಾಲಮನ್ನಾ ಮಾಡುವಲ್ಲಿ ವಿಫಲವಾಗಿದೆ. ರೈತರ ಸಮಸ್ಯೆಯ ಪರಿಹಾರಕ್ಕಾಗಿ ಚುನಾವಣೆ ಎದುರಿಸಿ ಶಾಸಕರಾಗಬೇಕಾಗಿದೆ. ರೈತ ಪರ ಹೋರಾಟಕ್ಕೆ ಬೆಲೆ ಸಿಗುತ್ತಿಲ್ಲ.ರೈತರೇ ವಿಧಾನಸಭೆ ಪ್ರವೇಶಿ ಸುವುದು ಅನಿವಾರ್ಯವಾಗಿದೆ ಎಂದು ಚಂದ್ರಶೇಖರ್ ಹೇಳಿದರು.
ರೈತರ ಸಮಸ್ಯೆಗಳ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ. ಚುನಾವಣೆಯನ್ನು ರೈತ ಸಂಘ ಚಳವಳಿಯನ್ನಾಗಿ ಸ್ವೀಕರಿಸಿದ್ದು, ಸಂಘಟನೆಯಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆಸಕ್ತ ರೈತರು ಸಂಘದಲ್ಲಿ ಅರ್ಜಿ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಿಳಿಸಿದರು.












Click it and Unblock the Notifications