ಯಕ್ಷಗಾನಕ್ಕೆ ರಾಜಮೌಳಿ ಬಾಹುಬಲಿ, ಸರಿಯೋ? ತಪ್ಪೋ?
ಬೆಂಗಳೂರು, ಆಗಸ್ಟ್. 10: 'ಯಕ್ಷಗಾನದಲ್ಲಿ ಸಂಶೋಧನೆಯಾಗಬೇಕು, ಆದರೆ ಅದು ಸಂಪ್ರದಾಯಕ್ಕೆ ಮಾರಕವಾಗಬಾರದು. ಹೊಸತನ ಅಗತ್ಯ ಆದರೆ ಅದು ನಮ್ಮ ತನವನ್ನು ಕೊಲೆ ಮಾಡಬಾರದು' ಎಂಬುದು ಹಿರಿಯ ಕಲಾವಿದರೊಬ್ಬರ ಮಾತು.
ಈ ಮಾತಿಗೆ ಕಾರಣವಾಗಿದ್ದು ಬಾಹುಬಲಿ ಯಕ್ಷಗಾನವಾತ್ತದೆ ಎಂಬ ಸುದ್ದಿ. ಜನರೇ ಹಾಗೇ ಪ್ರಸಿದ್ಧಿಯ ಬೆನ್ನು ಹತ್ತುತ್ತಾರೆ. ಬಾಹುಬಲಿ ಚಿತ್ರ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದ ಬಗೆಯನ್ನು ಹೊಸದಾಗಿ ಹೇಳಬೇಕಾಗಿಲ್ಲ. ಇದೀಗ ಬಾಹುಬಲಿ ಯಕ್ಷಗಾನವಾಗಿಯೂ ಮೂಡಿಬರಲಿದೆ. ಹಾ... ಇಲ್ಲಿ ಪೂರ್ತಿ ಕತೆಯನ್ನು ಹೇಳಲಾಗುತ್ತದೆಯಂತೆ.[ಬಾಹುಬಲಿ ಚಿತ್ರ ವಿಮರ್ಶೆ]

ಹೌದು.. ಮಂಗಳೂರಿನ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಇಂಥದ್ದೊಂದು ಪ್ರಯತ್ನವನ್ನು ಈಗಾಗಲೇ ಆರಂಭಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ಮೊದಲ ವಾರ ಬಾಹುಬಲಿಯ ಸಂಪೂರ್ಣ ಅವತಾರ ರಂಗಸ್ಥಳದಲ್ಲಿ ವಿಜೃಂಭಿಸಲಿದೆ.
ವಾಟ್ಸಾಪ್ ನಲ್ಲಿ ಈಗಾಗಲೇ ಪ್ರಚಾರ ಆರಂಭಗೊಂದಿದೆ. ಫೇಸ್ ಬುಕ್ ನಲ್ಲಿಯೂ ಬಾಹುಬಲಿ ಯಕ್ಷಗಾನ ಅವತಾರಕ್ಕೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗತೊಡಗಿದೆ.[ಬೆಂಗಳೂರಿನ ಯಕ್ಷದಶಾಹಕ್ಕೆ ಹೋಗೋಣ ಬನ್ನಿ]
ಸೂಪರ್ ಹಿಟ್ ಸಿನಿಮಾದ ಕತೆಯನ್ನು ಯಕ್ಷಗಾನಕ್ಕೆ ತಕ್ಕುದಾಗಿ ಮಾರ್ಪಡಿಸಿ ಪ್ರಸ್ತುತಪಡಿಸುವುದು ಹೊಸದೇನಲ್ಲ. ಹಿಂದೆ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಆಪ್ತಮಿತ್ರ' ನಾಗವಲ್ಲಿಯಾಗಿ ಮೂಡಿಬಂದಿತ್ತು. ತಮಿಳಿನ ಚಿತ್ರವೊಂದು ಶಿವರಂಜಿನಿಯಾಗಿತ್ತು.

ಬದಲಾದ ಕಾಲಘಟ್ಟದಲ್ಲಿ ಯಕ್ಷಗಾನ ಪೌರಾಣಿಕ ಆಖ್ಯಾನಗಳನ್ನು ಬಿಟ್ಟು ಹೊರಕ್ಕೆ ಬಂದಿದೆ. ಆದರೆ ಸಿನಿಮಾವನ್ನು ಅಳವಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ದ್ವಂದ್ವ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಸಾಂಪ್ರದಾಯಿಕ ಯಕ್ಷಗಾನ ಕಲಾವಿದರಲ್ಲಿ ಈ ಬಗ್ಗೆ ಕೇಳಿದರೆ ಖಡಾಖಂಡಿತವಾಗಿ ತಿರಸ್ಕಾರ ಮಾಡುತ್ತಾರೆ. ಬೇಕಾದಷ್ಟು ಪೌರಾಣಿಕ ಪ್ರಸಂಗಗಳೇ ಯಕ್ಷಗಾನದಲ್ಲಿದೆ. ಯಕ್ಷಗಾನಕ್ಕೆ ಅದರದೇ ಆದ ಸಂಪ್ರದಾಯ, ತಿಟ್ಟುಗಳಿವೆ. ಅದೆಲ್ಲವನ್ನು ಮೀರಿ ಮಾಡುವ ಇಂಥ ಪ್ರಯತ್ನ ಕೇವಲ ವ್ಯವಹಾರಿಕವಾಗಿ ಲಾಭ ತರಬಹುದೇ ವಿನಃ ನಿಜ ಕಲೆಗೆ ಮಾರಕ ಎಂದೇ ಹೇಳುತ್ತಾರೆ.[ಸುವರ್ಣ ಸುಯೋಧನನಿಗೆ ತಲೆದೂಗಿದ ಪ್ರಬುದ್ಧ ಪ್ರೇಕ್ಷಕ]
ಫೇಸ್ ಬುಕ್ ಅಭಿಯಾನ
ಯಕ್ಷಗಾನದ ಅಭಿಮಾನ ಹೊಂದಿರುವವರು ಫೇಸ್ ಬುಕ್ ನಲ್ಲಿ ಕ್ರಿಯಾಶೀಲವಾಗಿದ್ದಾರೆ. ಯಕ್ಷಗಾನ, ಯಕ್ಷಗಾನ ಪ್ರಿಯರು ಎಂಬ ಪೇಜ್ ಗಳು ಹೊಸ ಹೊಸ ವಿಚಾರಗಳನ್ನು ಚರ್ಚೆ ಮಾಡುತ್ತ, ಯಕ್ಷಗಾನಕ್ಕೆ ಸಂಬಂಧಿಸಿದ ಉತ್ತಮ ದೃಶ್ಯಗಳನ್ನು ಹರಿಬಿಡುತ್ತಿವೆ, ವಾಟ್ಸಪ್ ನಲ್ಲೂ ಕಲಾವಿದರ ಅಭಿಮಾನದ ಹೆಸರಿನಲ್ಲೀ ಗ್ರೂಪ್ ಗಳು ಹುಟ್ಟಿಕೊಂಡು ಬಹಳ ಕಾಲವೇ ಸಂದಿದೆ. ಇವರಲ್ಲಿ ಬಹುತೇಕರು ಬಾಹುಬಲಿಯನ್ನು ತರುವುದು ಬೇಡ ಎಂದೇ ಹೇಳುತ್ತಾರೆ.
ನೀವು ಅಭಿಪ್ರಾಯ ಹಂಚಿಕೊಳ್ಳಬೇಕು ಎಂದಿದ್ದರೆ ಧಾರಾಳವಾಗಿ ಕಮೆಂಟ್ ಮಾಡಬಹುದು...












Click it and Unblock the Notifications