ರೈತ ವಿದ್ಯಾನಿಧಿ: ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
ಬೆಂಗಳೂರು, ಫೆಬ್ರವರಿ 23; 2023-24ನೇ ಸಾಲಿನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಕರ್ನಾಟಕ ರಾಜ್ಯ ಸರ್ಕಾರವು ಮಾರ್ಗಸೂಚಿ ಹೊರಡಿಸಿದೆ. ಯೋಜನೆಯ ಫಲಾನುಭವಿಗಳು ಇದರ ಮಾಹಿತಿ ತಿಳಿಯುವುದು ಅಗತ್ಯ.
ಮಾರ್ಗಸೂಚಿಯ ಅನ್ವಯ ಸಾಮಾನ್ಯ ವರ್ಗಕ್ಕೆ ಸೇರಿದ ಮತ್ತು ಇತರೆ ಯಾವುದೇ ಇಲಾಖೆಯ (ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಇತ್ಯಾದಿ) ಶಿಷ್ಯ ವೇತನವನ್ನು ಪಡೆಯದೇ ಇರುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ (SSP)ಸಲ್ಲಿಸಬಹುದಾಗಿದೆ.

ರೈತರು ಹಾಗೂ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ವಾರ್ಷಿಕ ಆದಾಯ ರೂ. 2.50,000 ಮೀರದಿರುವ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ. ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ (SSP) ವಿದ್ಯಾರ್ಥಿಗಳ ಲಾಗಿನ್‌ನಲ್ಲಿ ತಮ್ಮ ಪ್ರಮಾಣಪತ್ರಗಳ ಸಮೇತ ಅರ್ಜಿ ಸಲ್ಲಿಸಲು ಫೆಬ್ರವರಿ 29 ಕೊನೆಯ ದಿನವಾಗಿದೆ.
ಉಳಿದಂತೆ ಈ ಹಿಂದಿನ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಅರ್ಹ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾನಿಧಿ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಲಾಗಿದೆ.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 2023-24ನೇ ಸಾಲಿನಲ್ಲಿ ಇತರೆ ಇಲಾಖೆಗಳ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ ಪಡೆಯಲು ಅವಕಾಶವಿರುವುದಿಲ್ಲ.
ಯೋಜನೆಯ ಫಲಾನುಭವಿಗಳಾಗಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪೋಷಕರ ಆದಾಯವು ರೂ. 2.50 ಲಕ್ಷ ಮೀರಿರಬಾರದು. ಆಧಾರ್ ಪ್ರಮಾಣದೊಂದಿಗೆ ಅರ್ಜಿ ಸಲ್ಲಿಸಬೇಕು.
ಕರ್ನಾಟಕ ಸರ್ಕಾರ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಘೋಷಣೆ ಮಾಡಿದೆ. ರಾಜ್ಯದಲ್ಲಿ 10ನೇ ತರಗತಿ ಪೂರ್ಣಗೊಳಿಸಿ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತ ನೋಂದಣಿಯ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವನ್ನು ಪಡೆದಿರುವ ಪಿಯುಸಿ, ಪದವಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ ಸ್ಕಾಲರ್ ಶಿಪ್ ಮೂಲಕ ತಲುಪುತ್ತದೆ.
ರೂ. 2500 ರಿಂದ 11,000 ರೂ. ತನಕ ಶಿಷ್ಯ ವೇತನವನ್ನು ಶಿಷ್ಯ ವೇತನ ರೂಪದಲ್ಲಿ ಒದಗಿಸುವ ಯೋಜನೆ ಇದಾಗಿದೆ. ಈ ಸ್ಕಾಲರ್ ಶಿಪ್ ಯೋಜನೆಗೆ ಉಳುಮೆ ಮಾಡುವಂತಹ/ ಕೃಷಿ ಮಾಡುವಂತಹ ಜಮೀನನ್ನು ಹೊಂದಿರುವ ರೈತರ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು. ರೈತರ ಮಕ್ಕಳು ಮಾತ್ರ ಈ ಶಿಷ್ಯ ವೇತನ ಪಡೆಯಲು ಅರ್ಹರು.
2021-22ನೇ ಸಾಲಿನಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. 19 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. 2021-22ನೇ ಸಾಲಿನಲ್ಲಿ 10.44 ಲಕ್ಷ ವಿದ್ಯಾರ್ಥಿಗಳಿಗೆ, 464 ಕೋಟಿ ಮತ್ತು 2022-23ನೇ ಸಾಲಿನಲ್ಲಿ 8.56 ಲಕ್ಷ ವಿದ್ಯಾರ್ಥಿಗಳಿಗೆ 375 ಕೋಟಿ ವಿತರಣೆಯಾಗಿತ್ತು.












Click it and Unblock the Notifications