ಜೆಡಿಎಸ್ ಸರಕಾರ ಬಂದರೆ ರೈತ ಚೈತನ್ಯ ಯೋಜನೆ ಜತೆಗೆ ತೆಲಂಗಾಣ ಮಾದರಿಯ ಕೃಷಿ ಬಂಧು ಜಾರಿ: ಹೆಚ್ಡಿಕೆ
ರಾಮನಗರ, ಜನವರಿ 17: ರಾಜ್ಯದ ರೈತರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ರೈತ ಚೈತನ್ಯ ಕಾರ್ಯಕ್ರಮವನ್ನು ಜಾರಿ ಮಾಡಲಾಗುವುದು ಹಾಗೂ ತೆಲಂಗಾಣ ಮಾದರಿಯಲ್ಲಿ ರೈತ ಬಂಧು ಯೋಜನೆಯನ್ನೂ ಅನುಷ್ಠಾನಕ್ಕೆ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.
ರಾಮನಗರ ಜಿಲ್ಲೆಯ ಬಿಡದಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ ರೈತ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಸುಮಾರು 78 ವಿಧಾನಸಭೆ ಕ್ಷೇತ್ರಗಳ ರೈತರ ಜತೆ ಅನ್ ಲೈನ್ ಸಂವಾದ ನಡೆಸಿ, ಮಾತನಾಡಿದ ಅವರು, ರೈತರಿಗೆ ತಾಂತ್ರಿಕ ಶಕ್ತಿ ನೀಡುವುದರ ಜತೆಗೆ ಯಾವ ಭಾಗದಲ್ಲಿ ಯಾವ ಬೆಳೆ ಬೆಳೆಯುತ್ತಾರೋ ಆ ಬೆಳೆಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿ ಮಾಡಲಾಗುವುದು. ರಾಜ್ಯದ ಪ್ರತೀ ಕೃಷಿ ಉತ್ಪನ್ನಕ್ಕೆ ಅತ್ಯುತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಜತೆಗೆ, ರೈತರು. ಶಾಶ್ವತವಾಗಿ ಸಾಲಗಾರರು ಆಗದಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕೃಷಿ ವಿಶ್ವ ವಿದ್ಯಾಲಯಗಳಿಗೆ ಕಾಯಕಲ್ಪ ಮಾಡುವುದರ ಜತೆಗೆ, ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಒಟ್ಟು ಕೊಡಲಾಗುವುದು. ಮುಖ್ಯವಾಗಿ ಸಂಶೋಧನೆಗೆ ಹೆಚ್ಚು ಆದ್ಯತೆ ಕೊಡಲಾಗುವುದು ಎಂದು ಹೇಳಿದರು.

ವಿಷ ನೀರು ಕೊಟ್ಟು ಸಾಯಿಸುತ್ತಿದ್ದಾರೆ ಎಂದ ಹೆಚ್ಡಿಕೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಎರಡು ಜಿಲ್ಲೆಗಳಿಗೆ ಕೇಸು ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿಯಿಂದ ಬೆಂಗಳೂರು ನಗರದ ವಿಷಕಾರಿ ನೀರು ಕೊಟ್ಟು ನಮ್ಮನ್ನು ಸಾಯಿಸುತ್ತಾರೆ. ನಮ್ಮ ಬೆಳೆಗಳು ನಾಶವಾಗುತ್ತಿವೆ. ಜೆಡಿಎಸ್ ಸರಕಾರ ಬಂದರೆ ಕೂಡಲೇ ಈ ನೀರನ್ನು ಜಿಲ್ಲೆಗಳಿಗೆ ಹರಿಸುವುದನ್ನು ತಡೆಯಬೇಕು ಎಂದು ರೈತರು ಒತ್ತಾಯ ಮಾಡಿದರು. ಇದಕ್ಕೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಕೆ ಸಿ ವ್ಯಾಲಿ ಹಾಗೂ ಹೆಚ್ ಎನ್ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಲಾಗುವುದು ಎಂದರು.
ಸಕಲೇಶಪುರ ಕ್ಷೇತ್ರದ ರೈತರು ಮೆಣಸು ಬೆಲೆ ಕುಸಿತ, ಕಾಡಾನೆ ಹಾವಳಿ ಬಗ್ಗೆ ದೂರಿದರು. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ರೈತರ ಅಳಲು ತೋಡಿಕೊಂಡರು. ಇದಕ್ಕೆ ಉತ್ತರ ನೀಡಿದ ಕುಮಾರಸ್ವಾಮಿ ಅವರು, ಬೆಲೆ ಕುಸಿತ ತಡೆಗೆ ರಾಜ್ಯದ ಎಲ್ಲಾ ಕಡೆ ಆಯಾ ಬೆಳೆಗೆ ತಕ್ಕಂತೆ ಸುಧಾರಿತ ನೀತಿ ರೂಪಿಸಲಾಗುವುದು. ಅದೇ ರೀತಿ ವನ್ಯ ಜೀವಿಗಳ ಉಪಟಳ ತಡೆಯಲು ಏಕರೂಪ ನೀತಿಯನ್ನು ಜಾರಿಗೆ ತರಲಾಗುವುದು ಎಂದರು.
ನಮ್ಮ ಸರ್ಕಾರ ಬಂದ ಬಳಿಕ ರಾಜ್ಯದ ಎಲ್ಲಾ ರೈತ ಮುಖಂಡರ ಜೊತೆ ಚರ್ಚೆ ನಡೆಸುತ್ತೇನೆ. ವಿಧಾನಸೌಧದ ಮೂರನೇ ಮಹಡಿಗೆ ಅನ್ನದಾತರನ್ನು ಕರೆದು ಚರ್ಚೆ ನಡೆಸುತ್ತೇನೆ ಎಂದು ಕೆ ಆರ್ ಪೇಟೆ ರೈತರಿಗೆ ಕುಮಾರಸ್ವಾಮಿ ಭರವಸೆ ನೀಡಿದರು.

ಜೆಡಿಎಸ್ ಸರ್ಕಾರ ಬಂದ ಬಳಿಕ ಮತ್ತೆ ಹುಮ್ನಾಬಾದ್ ಕಾರ್ಖಾನೆ ಪ್ರಾರಂಭ
ಚಿಕ್ಕನಾಯಕನಹಳ್ಳಿ ಸೇರಿ ತುಮಕೂರು ಜಿಲ್ಲೆಯಲ್ಲಿ ಕೊಬರಿಯನ್ನು ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ. ಆದರೆ, ಬೃಹತ್ ಎಣ್ಣೆ ಗಿರಣಿಗಳು ಇಲ್ಲ ಎಂದು ಚಿಕ್ಕನಾಯಕನಹಳ್ಳಿ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಅವರು, ಸರ್ಕಾರದ ವತಿಯಿಂದ ಎಣ್ಣೆ ಗಿರಣಿ ಅಥವಾ ಬೃಹತ್ ಕಾರ್ಖಾನೆ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗುವುದು ಎಂದರು.
ಹುಮ್ನಾಬಾದ್ ಕ್ಷೇತ್ರದಲ್ಲಿ ಸ್ಥಳೀಯವಾಗಿ ಯುವಜನರಿಗೆ ಕೆಲಸ ನೀಡಲು ಕಾರ್ಖಾನೆ ನಿರ್ಮಿಸಿದ್ದೆ. ಆದರೆ ಬಿಜೆಪಿ ಸರ್ಕಾರ ಬಂದು ಅದನ್ನು ನಿಲ್ಲಿಸಿದೆ. ಜೆಡಿಎಸ್ ಸರ್ಕಾರ ಬಂದ ಬಳಿಕ ಮತ್ತೆ ಕಾರ್ಖಾನೆ ಪ್ರಾರಂಭ. ಬೀದರ್‌ಗೆ ಕೆರೆಗಳನ್ನು ತುಂಬಿಸಲು 350 ಕೋಟಿ ಅನುದಾನ ನೀಡಿದ್ದೆ. ಅದಕ್ಕೂ ಬಿಜೆಪಿ ಸರಕಾರ ಕೊಕ್ಕೆ ಹಾಕಿತ್ತು. ನಮ್ಮ ಸರಕಾರ ಬಂದರೆ ಈ ಎಲ್ಲಾ ಯೋಜನೆಗಳಿಗೆ ಚಾಲನೆ ನೀಡಲಿದೆ. ಪಿರಿಯಾಪಟ್ಟಣದ ಹೊಗೆಸೊಪ್ಪು ರೈತರು ತುಂಬಾ ಸಂಕಷ್ಟ ಅನುಭವಿಸ್ತಿದ್ದಾರೆ. ನಮ್ಮ ರೈತರನ್ನು ಬಿಜೆಪಿಯವರು ತೀರ ಕೇವಲವಾಗಿ ತೆಗೆದುಕೊಂಡಿದ್ದಾರೆ ಎಂದು ಆ ಭಾಗದ ರೈತರು ಅಲವತ್ತುಕೊಂಡರು.
ಕೋಲಾರ, ಚಿಕ್ಕಬಳ್ಳಾಪುರದ ಜನರಿಗೆ ಕೊಳಚೆ ನೀರು ಬಿಡಲಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಕೆರೆಗಳಿಗೆ ಶುದ್ಧ ನೀರು ಪೂರೈಕೆ ಮಾಡಲಾಗುವುದು. ಈ ಸರ್ಕಾರದಲ್ಲಿ ಅಧಿಕಾರಿಗಳು ಕಂಟ್ರೋಲ್ ಇಲ್ಲ. ಈ ಸರ್ಕಾರದಲ್ಲಿ ಅಧಿಕಾರಿಗಳು ಎಲ್ಲಿ ಕೆಲಸ ಮಾಡ್ತಿದ್ದಾರೆ. ಎಲ್ಲದಕ್ಕೂ ಪರಿಹಾರ ಜನತಾದಳ ಅಧಿಕಾರಕ್ಕೆ ಬರಬೇಕು. ರೈತರ ಮಕ್ಕಳ ಸರ್ಕಾರಕ್ಕಾಗಿ ನಿಮ್ಮ ದುಡಿಮೆ ಮಾಡಿ ಎಂದು ಕುಮಾರಸ್ವಾಮಿ ಅವರು ವಾಗ್ದಾನ ನೀಡಿದರು.

ನೀವು ಮುಂದಿನ ದಿನಗಳಲ್ಲಿ ಸಾಲ ಮಾಡಿ ಬೆಳೆ ಬೆಳೆಯಬೇಕಿಲ್ಲ
ಚಿಕ್ಕಬಳ್ಳಾಪುರ ರೈತರ ಜತೆ ಮಾತನಾಡಬೇಕಾದರೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಮಾಜಿ ಮುಖ್ಯಮಂತ್ರಿಗಳು, ಬಹುಶಃ ದೇವೇಗೌಡರು ಮೂರನೇ ಸಲ ಶಾಸಕರಾಗಿ ಇದ್ದಾಗಲೂ ಚಿಕ್ಕಬಳ್ಳಾಪುರಕ್ಕೆ ಬಿತ್ತನೆ ಆಲೂಗಡ್ಡೆ ಖರೀದಿಗೆ ಹೋಗುತ್ತಿದ್ದರು. ಆ ದಿನಗಳು ನನಗೆ ಚೆನ್ನಾಗಿ ನೆನಪಿವೆ ಎಂದು ಕುಮಾರಸ್ವಾಮಿ ಹೇಳಿದರು.
ಬ್ಯಾಂಕುಗಳ ಕೃಷಿಕರ ಮೇಲಿನ ನಿರ್ಲಕ್ಷ್ಯದ ಬಗ್ಗೆ ನಾಗಠಾಣ ಕ್ಷೇತ್ರದ ರೈತರು ಬೇಸರ ವ್ಯಕ್ತಪಡಿಸಿದರು. ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ಕೊಡಬೇಕಾದರೆ ತಾರತಮ್ಯ ಮಾಡ್ತಿದ್ದಾರೆ. ನಮ್ಮ ಸರ್ಕಾರದ ಬಂದಮೇಲೆ ಅದನ್ನೆಲ್ಲಾ ಹೋಗಲಾಡಿಸುತ್ತೇವೆ. ರೈತರಿಗೆ ಯಾವುದೇ ರೀತಿಯ ತಾರತಮ್ಯ ಇರಬಾರದು. ನೀವು ಮುಂದಿನ ದಿನಗಳಲ್ಲಿ ಸಾಲ ಮಾಡಿ ಬೆಳೆ ಬೆಳೆಯಬೇಕಿಲ್ಲ. ಸರ್ಕಾರವೇ ಇಂತಿಷ್ಟು ಹಣ ಅಂತಾ ನಿಮಗೆ ಕೊಡುತ್ತೇವೆ. ಅದು ಸಾಲ ಅಲ್ಲ, ಅದಕ್ಕೆ ಬಡ್ಡಿ ಕೊಡಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ನನ್ನ ಸರಕಾರ ಬಂದರೆ ಕಬ್ಬಿನ ರೈತರ ನೆರವಿಗೆ ಬರುವೆ
ಶಿವಮೊಗ್ಗ ಗ್ರಾಮಾಂತರ ರೈತರು ಎಲೆಚುಕ್ಕೆ ರೋಗದ ಬಗ್ಗೆ ದುಃಖ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಅವರು, ಮಲೆನಾಡಿನಲ್ಲಿ ಎಲೆಚುಕ್ಕೆ ರೋಗ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.
ಮಂಡ್ಯ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಕಬ್ಬಿನ ಬೆಳೆಗಾರರು ಕಷ್ಟದಲ್ಲಿ ಇದ್ದಾರೆ. ನನ್ನ ಸರಕಾರ ಬಂದರೆ ಅವರ ನೆರವಿಗೆ ಧಾವಿಸಲಾಗುವುದು. ರೈತ ಬಂಧು ಕಾರ್ಯಕ್ರಮದ ಮೂಲಕ ಕಬ್ಬು ಬೆಳೆಗಾರರ ಕಷ್ಟಕ್ಕೆ ಸ್ಪಂದನೆ ಮಾಡಲಾಗುವುದು. ಇನ್ನೂ ಮಾಲೂರು ಕ್ಷೇತ್ರದ ರೈತರ ಸಮಸ್ಯೆಗಳನ್ನು ಆಲಿಸಿದ ಹೆಚ್‌ಡಿಕೆ ಅವರು; ಆಲೂಗಡ್ಡೆ, ಟೋಮೋಟೋ ಬೆಳೆಯಿಂದ ರೈತರು ಕಷ್ಟದಲ್ಲಿದ್ದಾರೆ. ಬಿತ್ತನೆಯಲ್ಲಿನ ದೋಷಗಳನ್ನು ಸರ್ಕಾರ ಬಗೆಹರಿಸಬೇಕು. ನಮ್ಮ ರಾಜ್ಯದಲ್ಲಿ ರೈತರಿಗೆ ವ್ಯವಸಾಯಕ್ಕೆ 24 ಗಂಟೆ ವಿದ್ಯುತ್ ಒದಗಿಸುವುದಾಗಿ ಭರವಸೆ ನೀಡಿದರು.
ಕೊರಟಗೆರೆ ಕ್ಷೇತ್ರದ ರೈತರ ಜತೆ ಸಂವಾದ ನಡೆಸಿದ ಕುಮಾರಸ್ವಾಮಿ ಅವರು, ರಾಗಿ ಖರೀದಿಯ ಬಗ್ಗೆ ಸರಕಾರದ ನೀತಿ ಸರಿ ಇಲ್ಲ. ರಾಗಿ ಬೆಳೆಯ ಮಾರಾಟ ಮಾಡಲು ಬೆಲೆ ಸಿಗ್ತಿಲ್ಲ ಅನ್ಕೋಬೇಡಿ. ರಾಗಿ ಬೆಳೆಯನ್ನು ಬೈ ಪ್ರಾಡಕ್ಟ್ ಮಾಡಿ ಲಾಭ ಗಳಿಸಬಹುದು. ರಾಗಿಯ ಬಿಸ್ಕೇಟ್‌ಗೆ ಹೆಚ್ಚಿನ ಬೇಡಿಕೆಗಳು ಇದೆ. ಇದಕ್ಕೆ ಹಳ್ಳಿಯ ಜನರಿಗೆ ಸರ್ಕಾರ ತರಬೇತಿ ನೀಡಲಿದೆ. ಅಲ್ಲದೇ ಪ್ರಧಾನಿ ಭೀಮಾ ಫಸಲ್ ವಿಮೆಯಲ್ಲಿ ವಂಚನೆ ಆಗುತ್ತಿದೆ. ರೈತರಿಗೆ ದಾರಿ ತಪ್ಪಿಸಿ ಮೋಸ ಮಾಡ್ತಿದ್ದಾರೆ. ನಮ್ಮ ಮುಂದಿನ ಕಾರ್ಯಕ್ರಮ ಬೆಳೆ ವಿಮೆ ಯೋಜನೆ ಕಾರ್ಯಕ್ರಮ ಆಗಿದೆ. ಇದನ್ನು ನಾನು ಸರಿ ಮಾಡುತ್ತೇನೆ ಎಂದು ತಿಳಿಸಿದರು.












Click it and Unblock the Notifications