Karnataka Rain Report: ಕರ್ನಾಟಕದಲ್ಲಿ ಶೇ 23 ರಷ್ಟು ಮಳೆ ಕೊರತೆ- ಯಾವ ಜಿಲ್ಲೆಗಳಲ್ಲಿ ಎಷ್ಟು ತಿಳಿಯಿರಿ
ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ ಜೂನ್ 1 ರಿಂದ ಜುಲೈ 19 ರ ವರೆಗೆ 27.3 ಸೆಂ.ಮೀ ಮಳೆಯಾಗಿದೆ. ಸಾಮಾನ್ಯವಾಗಿ 35.35 ಸೆಂ.ಮೀ ಮಳೆಯಾಗುತ್ತಿತ್ತು. ಅಂಕಿಅಂಶಗಳ ಪ್ರಕಾರ ನೋಡುವುದಾದರೆ, ಕರ್ನಾಟಕವು ಈ ಬಾರಿ ಶೇ 23 ನಷ್ಟು ಮಳೆ ಕೊರತೆಯನ್ನು ಎದುರಿಸುತ್ತಿದೆ ಎಂದು ಹವಾಮಾನ ಇಲಾಖೆ ದೃಢಪಡಿಸಿದೆ.
ಹವಾಮಾನ ಇಲಾಖೆ ಪ್ರಕಾರ, ಎರಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಅವುಗಳೆಂದರೆ, ಚಿತ್ರದುರ್ಗ ಮತ್ತು ವಿಜಯನಗರ. ಆದರೆ, ಕೊಡಗಿನಲ್ಲಿ ಅತಿ ಹೆಚ್ಚು ಮಳೆ ಕೊರತೆ ವರದಿಯಾಗಿದೆ. ಆ ನಂತರದ ಸ್ಥಾನದಲ್ಲಿ ಹಾಸನ, ರಾಮನಗರ ಮತ್ತು ಶಿವಮೊಗ್ಗ ಮತ್ತು ಬಾಗಲಕೋಟೆ ಜಿಲ್ಲೆಗಳಿವೆ. ಇದೇ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಶೇ 7 ಮತ್ತು ಬೆಂಗಳೂರು ನಗರದಲ್ಲಿ ಶೇ 17 ಅಧಿಕ ಮಳೆ ದಾಖಲಾಗಿದೆ.

ಕೆಲವು ಪ್ರದೇಶಗಳಲ್ಲಿ ಮಳೆಯ ಕೊರತೆ ಹೆಚ್ಚು ಕಾಡುತ್ತಿದೆ. ರಾಜ್ಯ ಸರ್ಕಾರ ಮತ್ತು ಖಾಸಗಿ ಏಜೆನ್ಸಿ ಮೋಡ ಬಿತ್ತನೆ ಕೈಗೊಳ್ಳಲು ಹವಾಮಾನ ಇಲಾಕೆಯನ್ನು ಸಂಪರ್ಕಿಸಿವೆ ಎಂದು ಹೇಳಲಾಗುತ್ತಿದೆ.
'ಅವರು ( ರಾಜ್ಯ ಸರ್ಕಾರ ) ನಮ್ಮಿಂದ ವರದಿ ಕೇಳಿದರು. ಆದರೆ, ನಾವು ಸಾಮಾನ್ಯವಾಗಿ ಮೋಡ ಬಿತ್ತನೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಈ ಕಾರಣ, ಮೋಡ ಬಿತ್ತನೆ ವಿಚಾರವಾಗಿ ಪುಣೆಯ ಖಾಸಗಿ ಏಜೆನ್ಸಿಯೊಂದಕ್ಕೆ ರೆಫರ್ ಮಾಡಿದ್ದೇವೆ. ಹಾಸನ ಮತ್ತು ರಾಣೆಬೆನ್ನೂರಿನಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ಸರ್ಕಾರ ಬಯಸಿದೆ. ಈ ಎರಡು ಕ್ಷೇತ್ರಗಳನ್ನೇ ಅವರು ಏಕೆ ಆರಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ' ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ಈ ಸಮಯದಲ್ಲಿ ಕಾವೇರಿ ಜಲಾನಯನ ಪ್ರದೇಶಗಳು ಮತ್ತು ಘಟ್ಟ ಪ್ರದೇಶಗಳು ಅತಿ ಹೆಚ್ಚು ಮಳೆ ಮತ್ತು ಪ್ರವಾಹವನ್ನು ಕಂಡಿದ್ದವು ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಒಳನಾಡು ಕರ್ನಾಟಕ, ಬೀದರ್, ಬೆಳಗಾವಿ, ಕೊಪ್ಪಳ, ಕಲಬುರಗಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಯೆಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ ಐದು ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಸಿದ್ದಾಪುರ ತಾಲೂಕಿನ ನಿಲ್ಕುಂದ, ಸೂಪಾ ತಾಲೂಕಿನ ಕ್ಯಾಸಲ್‌ರಾಕ್ ಮತ್ತು ಸಿದ್ದಾಪುರ ತಾಲೂಕಿನ ಕೋಡ್ಕಣಿಯಲ್ಲಿ ಕ್ರಮವಾಗಿ 87, 81 ಮತ್ತು 77.5 ಮಿಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಕುಡಿಯುವ ನೀರಿನ ಕೊರತೆ ನೀಗಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರತಿ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ನೀಡಬೇಕೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ರಾಜ್ಯದ ಉತ್ತರ ಭಾಗಗಳಲ್ಲಿ ಮುಂಗಾರು ಹಂಗಾಮು ಇನ್ನೂ ಪ್ರಾರಂಭವಾಗದ ಕಾರಣ ಹಲವಾರು ರೈತರು ಬಿತ್ತನೆಯನ್ನು ಕಡಿಮೆ ಮಾಡಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications