ರಾಜ್ಯದಲ್ಲಿ ಮಳೆ ಪ್ರವಾಹ: ಕಾಣೆಯಾದ ಸಚಿವರನ್ನು ಹುಡುಕಿಕೊಡಿ ಎಂದ ಕಾಂಗ್ರೆಸ್
ಬೆಂಗಳೂರು, ಸೆಪ್ಟೆಂಬರ್ 08: ಕರ್ನಾಟಕ ಈ ತೀವ್ರ ಮಳೆಗೆ ಅಪಾರ ಹಾನಿಗೊಳಗಾಗಿದೆ. ಅದರಲ್ಲೂ ಬೆಂಗಳೂರು ಪರಿಸ್ಥಿತಿ ಮಾತ್ರ ಹೇಳತೀರದ್ದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಕಾಂಗ್ರೆಸ್ 'ಕಾಣೆಯಾಗಿದ್ದಾರೆ' ಎನ್ನುವ ಮೂಲಕ ಸಚಿವರ ಹುಡುಕಿಕೊಡುವಂತೆ ಮನವಿ ಮಾಡಿದೆ. ಮಳೆ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದರು ರಾಜ್ಯದ ಸಚಿವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅವರೆಲ್ಲ ಎಲ್ಲಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸಚಿವರ ಫೋಟೋ ಸಮೇತ 'ಕಾಣೆಯಾಗಿದ್ದಾರೆ' ಎನ್ನು ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಕಾಣೆಯಾದವರ ಪಟ್ಟಿಯಲ್ಲಿ ಸಚಿವ ಬೈರತಿ ಬಸವರಾಜ್, ಸಚಿವ ಅಶ್ವಥ್ ನಾರಾಯಣ್, ಸಚಿವ ಮುನಿರತ್ನ, ಆರ್ ಅಶೋಕ್, ಎಸ್ ಟಿ ಸೋಮಶೇಖರ್, ವಿ ಸೋಮಣ್ಣ, ಸಚಿವ ಡಾ.ಕೆ ಸುಧಾಕರ್, ಗೃಹ ಸಚಿವ ಆರಗ ಜ್ಞಾನೇಂದ್ರ ಇದ್ದಾರೆ. ಇವರೆಲ್ಲರ ಫೋಟೋ ಹಾಕುವ ಮೂಲಕ ಕಾಂಗ್ರೆಸ್ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ. ಸಚಿವರು ಜನರ ಕಷ್ಟಗಳನ್ನು ಆಲಿಸದಿದ್ದಕ್ಕೆ ಕಿಡಿ ಕಾರಿದೆ. ಕಾಂಗ್ರೆಸ್ ಮಾಡಿದ ಟ್ವೀಟ್‌ನಲ್ಲಿ ಏನಿದೆ ನೋಡಿ....
-ಕಾಣೆಯಾಗಿದ್ದಾರೆ ಸಚಿವ ಬೈರತಿ ಬಸವರಾಜ್
ಒಂದೇ ಒಂದು ಬಾರಿ ಸಿಎಂ ಜೊತೆಯಲ್ಲಿ ನೆಪಮಾತ್ರದ ಸಿಟಿ ರೌಂಡ್ಸ್ ಹೊಡೆದಿದ್ದು ಬಿಟ್ಟರೆ ಬೆಂಗಳೂರಿನ ಸಚಿವರಾದ ಭೈರತಿ ಬಸವರಾಜ್‌ರವರು ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.
ನೀರು ನುಗ್ಗಿದ ಮನೆಗಳಿಗೆ ಪರಿಹಾರವೇನು? ನೀರು ನಿಂತ ರಸ್ತೆಗಳಿಗೆ ಮುಕ್ತಿ ಏನು?

ಸಚಿವರು ಜನರ ಕಷ್ಟ ಆಲಿಸಲು ಹೋಗದಿರುವುದೇಕೆ?
-ಕಾಣೆಯಾಗಿದ್ದಾರೆ ಸಚಿವ ಅಶ್ವಥ್ ನಾರಾಯಣ್
ಬೆಂಗಳೂರಿನ ಜನತೆಯ ಮತಬಿಕ್ಷೆ ಪಡೆದು ಜನತೆಗೇ ದ್ರೋಹವೆಸಗುವುದು ಸರಿಯೇ ಸಚಿವರೇ?

ಬೆಂಗಳೂರಿನ ಜನತೆ ಮಳೆಯಿಂದ ಕಂಗೆಟ್ಟಿರುವಾಗ 'ನಾನೇ ಸಿಎಂ' ಎನ್ನುವ ಸಚಿವರು ನಾಪತ್ತೆಯಾಗಿದ್ದಾರೆ
''ಗಂಡಸ್ಥನವನ್ನು ಕೆಲಸದಲ್ಲಿ ತೋರಿಸಿ'' ಎಂದರವೇ ಕೆಲಸ ಮಾಡದಿದ್ದರೆ ಏನೆಂದು ಕರೆಯಬೇಕು ಅಶ್ವಥ್ ನಾರಾಯಣ ಅವರೇ?
-ಕಾಣೆಯಾಗಿದ್ದಾರೆ ಸಚಿವ ಮುನಿರತ್ನ
ಬೆಂಗಳೂರಿನ ಮತ್ತೊಬ್ಬ ಸಚಿವರಾದ ಮುನಿರತ್ನ ಅವರು ಮಳೆ ಬಂದಾಗಿನಿಂದ ಮನೆಯಿಂದ ಹೊರಬಂದಿಲ್ಲ!

ಮುನಿರತ್ನರವರೇ, ಕಮಿಷನ್ ಇಲ್ಲದೆ ತಾವು ಹೊರಬರುವುದಿಲ್ಲವೇ?
ಜನರನ್ನು ಕಡೆಗಣಿಸಿರುವ ಇವರಿಗೆ ''ಮನಿ ಇದ್ದಲ್ಲಿ ಮಾತ್ರ ಮುನಿ'' ಮಾತು ಸೂಕ್ತವಾಗಿದೆ!
-ಕಾಣೆಯಾಗಿದ್ದಾರೆ ಸಚಿವ ಆರ್ ಅಶೋಕ್
ಕೊನೇ ಬಾರಿ ಕಾಣಿಸಿಕೊಂಡಿದ್ದು ಸಭೆಯಲ್ಲಿ ನಿದ್ದೆ ಮಾಡುತ್ತಿದ್ದಾಗ. ಇವರ ಮಾಹಿತಿ ಇದ್ದವರು ಸಚಿವರನ್ನು ನಿದ್ದೆಯಿಂದ ಎಚ್ಚರಿಸಿ.

-ಕಾಣೆಯಾಗಿದ್ದಾರೆ ಸಚಿವ ಎಸ್ ಟಿ ಸೋಮಶೇಖರ್
ಕೊನೇ ಬಾರಿ ಕಾಣಿಸಿಕೊಂಡಿದ್ದು ಅರಸೀಕೆರೆಯಲ್ಲಿ ಸನ್ಮಾನ ಸ್ವೀಕರಿಸುತ್ತಿರುವಾಗ. ಇವರ ಮಾಹಿತಿ ಇದ್ದವರು ಅವರಿಗೆ ಬೆಂಗಳೂರಿನ ದಾರಿ ತೋರಿಸಿ.

-ಕಾಣೆಯಾಗಿದ್ದಾರೆ ಸಚಿವ ವಿ ಸೋಮಣ್ಣ
ಇವರು ಕೊನೇ ಬಾರಿ ಕಾಣಿಸಿಕೊಂಡಿದ್ದು ಬೆಂಗಳೂರಿನ ಮೇಲೆ ಹಿಡಿತಕ್ಕಾಗಿ ಸಚಿವ ಅಶೋಕ್ ಜೊತೆಗಿನ ತಿಕ್ಕಾಟದಲ್ಲಿ. ಇವರ ಮಾಹಿತಿ ಇದ್ದವರು ಅವರಿಗೆ ಬೆಂಗಳೂರಿನ ಪ್ರವಾಹ ಸಮಸ್ಯೆ ಸುಧಾರಿಸಲು ಪೈಪೋಟಿ ನಡೆಸಲು ತಿಳಿಸಿ.

-ಕಾಣೆಯಾಗಿದ್ದಾರೆ ಸಚಿವ ಕೆ ಗೋಪಾಲಯ್ಯ
ಕೊನೇ ಬಾರಿ ಕಾಣಿಸಿಕೊಂಡಿದ್ದು ಮಾಹಿತಿ ಇಲ್ಲ
ಇವರ ಮಾಹಿತಿ ಇದ್ದವರು ಅವರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ತಿಳಿಸಿ

-ಕಾಣೆಯಾಗಿದ್ದಾರೆ ಸಚಿವ ಡಾ.ಕೆ ಸುಧಾಕರ್
ಕೊನೇ ಬಾರಿ ಕಾಣಿಸಿಕೊಂಡಿದ್ದು ಜನೋತ್ಸವದ ತಯಾರಿ ಸಭೆಯಲ್ಲಿ. ಇವರ ಮಾಹಿತಿ ಇದ್ದರವು ಅವರಿಗೆ ರಾಜ್ಯದ ಜನೋತ್ಸವದ ಬಗ್ಗೆ ಮಾಹಿತಿ ನೀಡಿ

-ಕಾಣೆಯಾಗಿದ್ದಾರೆ ಸಚಿವ ಆರಗ ಜ್ಞಾನೇಂದ್ರ
ಕೊನೇ ಬಾರಿ ಕಾಣಿಸಿಕೊಂಡಿದ್ದು ತೀರ್ಥಹಳ್ಳಿಯಲ್ಲಿ. ಇವರ ಮಾಹಿತಿ ಇದ್ದವರು ಮಾನ್ಯರಿಗೆ ತಾವು ಈ ರಾಜ್ಯದ ಗೃಹಸಚಿವರ. ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಅಲ್ಲ ಎಂದು ಮನವರಿಕೆ ಮಾಡಿ ಬೆಂಗಳೂರಿಗೆ ಬರಲು ಹೇಳಿ












Click it and Unblock the Notifications