ಕರ್ನಾಟಕ; ಅಕ್ಟೋಬರ್ 10ರ ತನಕ ಮಳೆ ಮುನ್ಸೂಚನೆ
ಬೆಂಗಳೂರು, ಅಕ್ಟೋಬರ್ 07; ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅಕ್ಟೋಬರ್ 10ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಮತ್ತು ಶುಕ್ರವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸೂಚನೆ ಇದೆ. ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದು ಏಳು ಜನರು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಗುರುವಾರದಿಂದ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗಲಿದೆ. ಆದರೆ ಅಕ್ಟೋಬರ್ 10ರ ತನಕ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ತಮಿಳುನಾಡು, ಕೇರಳದಲ್ಲಿ ಸಹ ಇಂದು ಮಳೆ ಮುನ್ಸೂಚನೆ ನೀಡಲಾಗಿದೆ.
ಭಾನುವಾರ, ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆಗಾಲದ ನಿರ್ವಹಣೆಗಾಗಿ 63 ಉಪವಿಭಾಗಗಳಲ್ಲಿ ತಾತ್ಕಾಲಿಕ ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಅಕ್ಟೋಬರ್ ಅಂತ್ಯದವರೆಗೂ ಈ ನಿಯಂತ್ರಣ ಕೊಠಡಿಗಳು ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದೆ.
ಮಂಗಳವಾರ ರಾತ್ರಿ ಮತ್ತು ಬುಧವಾರ ಮಧ್ಯಾಹ್ನದ ತನಕ ಬೆಂಗಳೂರು ಮಲೆನಾಡಿನಂತೆ ಆಗಿತ್ತು. ಬುಧವಾರ ಮಧ್ಯಾಹ್ನದ ಬಳಿಕ ಮಳೆ ಕಡಿಮೆಯಾಗಿದೆ. ಗುರುವಾರ ಬೆಳಗ್ಗೆ ನಗರದಲ್ಲಿ ಬಿಸಿಲಿನ ವಾತಾವರಣವಿದೆ. ಅಕ್ಟೋಬರ್ 10ರ ತನಕ ನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕದಲ್ಲಿನ ನೈಋತ್ಯ ಮುಂಗಾರು ಅವಧಿ ಜೂನ್‌ನಿಂದ ಸೆಪ್ಟೆಂಬರ್ ತನಕ ಇತ್ತು. ವಾಡಿಕೆಯಂತೆ ಮುಂಗಾರು ಅವಧಿಯಲ್ಲಿ 852 ಮಿ. ಮೀ. ಮಳೆಯಾಗಬೇಕಿತ್ತು. ಆದರೆ ಈ ವರ್ಷ 787 ಮಿ. ಮೀ. ಮಳೆಯಾಗಿದೆ. ಅಕ್ಟೋಬರ್‌ನಲ್ಲಿ ಶಾಹೀನ್ ಚಂಡಮಾರುತದ ಪ್ರಭಾವದಿಂದಾಗಿ ಮಳೆಯಾಗುತ್ತಿದೆ.
ಚಂಡಮಾರುತದ ಪರಿಣಾಮ ಮಳೆಯಾಗುತ್ತಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 8121 ಕ್ಯುಸೆಕ್ ಒಳ ಹರಿವು ಇದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಡ್ಯಾಂನಲ್ಲಿ ಪ್ರಸ್ತುತ 34.88 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಗರಿಷ್ಠ ಮಟ್ಟ 38.05 ಮೀಟರ್ ಆಗಿದೆ. ಜಲಾಶಯಕ್ಕೆ 11,427 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಈ ಬಾರಿಯೂ ಕೊಡಗಿನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಉತ್ತಮವಾಗಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ಕೆಆರ್‌ಎಸ್ ಭರ್ತಿಯಾಗುವ ನಿರೀಕ್ಷೆಯನ್ನು ಮಾಡಬಹುದಾಗಿದೆ. ಈ ಹಿಂದೆಯೂ ಅಕ್ಟೋಬರ್ ವೇಳೆಗೆ ಭರ್ತಿಯಾದ ನಿದರ್ಶಗಳಿವೆ.
ಮಂಡ್ಯ ಜಿಲ್ಲೆಗೆ ಕುಡಿಯುವ ನೀರು ಮತ್ತು ಕೃಷಿ, ಬೆಂಗಳೂರು, ಮೈಸೂರು ನಗರಗಳಿಗೆ ಕುಡಿಯುವ ನೀರು ಪೂರೈಕೆಗೆ ಕೆಆರ್‌ಎಸ್ ಜಲಾಶಯದ ನೀರು ಆಸರೆಯಾಗಿದೆ. ಡ್ಯಾಂ ತುಂಬಿದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ.
ವಿವಿಧ ರಾಜ್ಯಗಳಲ್ಲಿ ಮಳೆ; ಇನ್ನೂ ಎರಡು ದಿನ ಪಶ್ಚಿಮ ಬಂಗಾಳ, ಗೋವಾ, ಲಕ್ಷದ್ವೀಪ, ಛತ್ತೀಸ್‌ಗಢ್, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ದೆಹಲಿ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರ ಉತ್ತರ ಪ್ರದೇಶ ರಾಜ್ಯದಲ್ಲಿ ಇನ್ನು ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications