ಮುಂದಿನ ನಾಲ್ಕೈದು ದಿನ ಭಾರೀ ಮಳೆ ಮುನ್ನೆಚ್ಚರಿಕೆ
ಬೆಂಗಳೂರು, ಜು. 09 : ರಾಜ್ಯಾದ್ಯಂತ ಜೂನ್ ತಿಂಗಳಿನಲ್ಲಿ ಆರ್ಭಟಿಸಿದ್ದ ವರುಣ ನಂತರ ತಣ್ಣಗಾಗಿದ್ದ. ಜುಲೈ 10 ರಿಂದ ಮತ್ತೆ ಮಳೆ ಬಿರುಸಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡಿನ ಅಲ್ಲಲ್ಲಿ ಚದುರಿದಂತೆ ಮಳೆ ಬೀಳಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ಜುಲೈ 10 ರಿಂದ ನಾಲ್ಕೈದು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ಮಳೆಗಾಲದೊಂದಿಗೇ ಪಾಪಿ ಆಷಾಢವೂ ಬಂದಿದೆ]

ಚೀನಾ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿನ ಮೋಡಗಳು ಚೀನಾದತ್ತ ಸಾಗಿದ್ದವು. ಹಾಗಾಗಿ ಏಕಾಏಕಿ ಮಳೆ ಕೊರತೆ ಉಂಟಾಯಿತು. ಕಬಿನಿ ಜಲಾಶಯ ಮಾತ್ರ ಭರ್ತಿಯಾಗಿದ್ದು ಮಳೆ ಕಡಿಮೆ ಆದ ಕಾರಣದಿಂದ ಜಲಾಶಯಗಳ ಒಳಹರಿವಿನಲ್ಲಿ ಭಾರೀ ಪ್ರಮಾಣದ ಇಳಿಮುಖವವಾಗಿದೆ.
ಸದ್ಯ ರಾಜ್ಯದಲ್ಲಿ ಸರಾಸರಿಗಿಂತ ಕಡಿಮೆ ಮಳೆ ಸುರಿದಿದೆ. ಜೂನ್ 1 ರಿಂದ ಜುಲೈ 8 ರವರೆಗೆ ಮಳೆ ಪ್ರಮಾಣದಲ್ಲಿ ಶೇ. 15 ರಷ್ಟು ಕೊರತೆಯಾಗಿದೆ. ವಾಡಿಕೆಯಂತೆ ಅವಧಿಯಲ್ಲಿ 269 ಮಿ.ಮೀ ಮಳೆಯಾಗಬೇಕಿತ್ತು. ಈ ವರ್ಷ 228 ಮಿ.ಮೀ ಮಳೆಯಾಗಿದೆ.[ಜೂನ್ ತಿಂಗಳ ಮಳೆ ಹಾನಿ ಚಿತ್ರಗಳು]
ದಕ್ಷಿಣ ಒಳನಾಡಲ್ಲಿ ಹೆಚ್ಚು: ಒಟ್ಟಾರೆ ಪ್ರಮಾಣ ಕಡಿಮೆಯಾಗಿದ್ದರೂ ದಕ್ಷಿಣ ಒಳನಾಡಿನಲ್ಲಿ ಈ ಬಾರಿ ವಾಡಿಕೆಗಿಂತ ಶ. 13 ರಷ್ಟು ಹೆಚ್ಚು ಮಳೆ ಸುರಿದಿದೆ. ಮೈಸೂರಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾದರೆ ರಾಯಚೂರು ರೈತರಲ್ಲಿ ವರುಣ ಆತಂಕ ತಂದಿರಿಸಿದ್ದಾನೆ. ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು ಸಂಜೆ ತುಂತುರು ಮಳೆ ಬೀಳಲಿದೆ.












Click it and Unblock the Notifications