ಏಪ್ರಿಲ್ 5ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಆಗಮನ
ಕೋಲಾರ, ಮಾರ್ಚ್ 28: ಕೋಲಾರದಲ್ಲಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿ ಸಂಸತ್ ಸದಸ್ಯತ್ವ ಕಳೆದುಕೊಂಡಿದ್ದ ರಾಹುಲ್ ಗಾಂಧಿ ಈಗ ಮತ್ತೆ ಇದೇ ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 5ರಂದು ಆಗಮಿಸಿ ಭಾಷಣ ಮಾಡಲಿದ್ದಾರೆ.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮುದಾಯ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪದ ಮೇಲೆ ನ್ಯಾಯಾಲಯದಿಂದ 2 ವರ್ಷ ಜೈಲು ಶಿಕ್ಷೆ ಮತ್ತು ಸಂಸತ್ ಸ್ಥಾನದಿಂದ ಎಐಸಿಸಿ ಮಾಜಿ ಅಧ್ಯಕ್ಷರೂ ಆಗಿದ್ದ ರಾಹುಲ್ ಗಾಂಧಿ ಅನರ್ಹಗೊಂಡಿದ್ದರು.

ಈ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಕೋಲಾರದಿಂದಲೇ ಬಿಜೆಪಿಗೆ ಪ್ರತ್ಯುತ್ತರ ನೀಡಲು ಏಪ್ರಿಲ್ 5 ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ಹಿನ್ನೆಲೆ ರಾಹುಲ್ ಗಾಂಧಿ ಎರಡನೇ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಕಳೆದ ಬಾರಿ ಬೆಳಗಾವಿಯಲ್ಲಿ ಬಿಜೆಪಿ ಹಾಗೂ ಮೋದಿ ವಿರುದ್ಧ ಅಬ್ಬರಿಸಿದ್ದರು. ಈ ಬಾರಿಯ ರಾಹುಲ ಗಾಂಧಿಯ ಕೋಲಾರ ಭೇಟಿ ನೀಡುತ್ತಿರುವುದು ಗಮನ ಸೆಳೆದಿದೆ.
ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿದ್ದ ಭಾಷಣದಿಂದಲೇ ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ. ಹೀಗಾಗಿ ಕೋಲಾರದಿಂದಲೇ ಪ್ರಚಾರ ಆರಂಭಿಸಿ ಅನರ್ಹಗೊಳಿಸಿದ್ದನ್ನೇ ಪ್ರಚಾರದ ಪ್ರಭಲ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಯೋಜನೆ ಮಾಡಿಕೊಂಡಿದೆ. ಅಲ್ಲದೆ ಬಿಜೆಪಿ ಸರ್ಕಾರಕ್ಕೆ ಉತ್ತರ ನೀಡಲು ಸಿದ್ದವಾಗಿದೆ. ಈಗಾಗಲೇ ಕಾಂಗ್ರೆಸ್ ದೇಶಾದ್ಯಂತ ಕೇಂದ್ರ ಬಿಜೆಪಿ ಸರ್ಕಾರದ ಪ್ರತಿಭಟನೆ ಮಾಡುತ್ತಿದೆ.

ಕೋಲಾರದಲ್ಲಿ ರಾಹುಲ್ ಗಾಂಧಿ ಅವರು ಕಳ್ಳರಿಗೆ ಮೋದಿ ಎಂಬ ಉಪನಾಮ ಇರುತ್ತದೆ ಎಂದು ರಾಹುಲ್ ಗಾಂಧಿ 2019ರಲ್ಲಿ ಹೇಳಿಕೆ ನೀಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಾಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಎಚ್.ಮುನಿಯಪ್ಪ ಪರ ಕೋಲಾರದಲ್ಲಿ ನಡೆದ ಪ್ರಚಾರದಲ್ಲಿ ರಾಹುಲ್ ಗಾಂಧಿ ಅಂದಿನ ಎಐಸಿಸಿ ಅಧ್ಯಕ್ಷರಾಗಿ ಮಾತನಾಡಿದ್ದರು.
ಆ ವೇಳೆ ಅವರು ತಮ್ಮ ಭಾಷಣದ ವೇಳೆಯಲ್ಲಿ ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಸರ್ ನೇಮ್ ಒಂದೇ ಆಗಿದ್ದು, ಈ ಹೆಸರಿನವರು ಎಲ್ಲರೂ ಕಳ್ಳರು. ಈ ಎಲ್ಲಾ ಕಳ್ಳರು ಸೇರಿ ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದರು. ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ, ಮುಳಬಾಗಿಲಿನ ರೋಡ್ ಶೋ ವೇಳೆಯಲ್ಲಿ ಹಾಗೂ ಕೆಜಿಎಫ್ನ ನಗರಸಭೆ ಮೈದಾನದಲ್ಲಿ ಆಯೋಜನೆ ಮಾಡಿದ್ದ ಬಹಿರಂಗ ಸಮಾವೇಶದ ವೇಳೆಯಲ್ಲೂ ರಾಹುಲ್ ಗಾಂಧಿ ಇದೇ ವಿಚಾರವನ್ನು ತಮ್ಮ ಭಾಷಣದಲ್ಲಿ ಮಾತನಾಡಿದ್ದರು.
ಬಳಿಕ ರಾಹುಲ್ ಗಾಂಧಿ ಹೇಳಿಕೆ ವಿರೋಧಿಸಿ ಗುಜರಾತ್‌ನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪೂರ್ಣೇಶ್ ಮೋದಿ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ನೀಡಿದ್ದರು. ಮೋದಿ ಉಪನಾಮದ ಕುರಿತು ರಾಹುಲ್ ಗಾಂಧಿ ಮಾಡಿದ ಟೀಕೆ ಇಡೀ ಮೋದಿ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ ಎಂದು ನೀಡಿದ್ದರು. ಐಪಿಸಿ ಸೆಕ್ಷನ್‌ಗಳಾದ 499 ಮತ್ತು 500ರ ಅಡಿ (ಮಾನಹಾನಿ) ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗಾಗಿ ರಾಹುಲ್ ಗಾಂಧಿಯವರು ಮೂರು ಬಾರಿ ಸೂರತ್ ಕೋರ್ಟ್‌ಗೆ ಹಾಜರಾಗಿದ್ದರು. ಈಗ ಕೋರ್ಟ್ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ್ದು, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.












Click it and Unblock the Notifications