Breaking; ಸಿದ್ದರಾಮಯ್ಯ ಭೇಟಿಯಾದ ರಾಹುಲ್ ಸಲಹೆಗಾರ!
ಬೆಂಗಳೂರು, ಫೆಬ್ರವರಿ 06; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆಗಾರ ಕೆ. ರಾಜು ಬೆಂಗಳೂರು ಪ್ರವಾಸದಲ್ಲಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭಾನುವಾರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಕೆ. ರಾಜುವನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಸ್ವಾಗತಿಸಿದರು. ಬಳಿಕ ಸಿದ್ದರಾಮಯ್ಯ ನಿವಾಸದಲ್ಲಿ ಕೆ. ರಾಜು ಭೋಜನ ಸವಿದರು.
ರಾಜು ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, "ರಾಜು ಅವರಿಗೆ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಜವಾಬ್ದಾರಿ ನೀಡಲಾಗಿದೆ. ಎಲ್ಲಾ ರಾಜ್ಯಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ. ಹಾಗೆಯೇ ಬೆಂಗಳೂರಿಗೆ ಬಂದಿದ್ದಾರೆ" ಎಂದರು.
ಕರ್ನಾಟಕ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸದಸ್ಯತ್ವ ಅಭಿಯಾನ ನಡೆಸುತ್ತಿದೆ. ಶುಕ್ರವಾರ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಪಕ್ಷ ಚಾಲನೆ ನೀಡಿದೆ.

ಕೊಪುಲ್ಲ ರಾಜು ನಿವೃತ್ತ ಐಎಎಸ್ ಅಧಿಕಾರಿ. ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋರ್ ಕಮಿಟಿಯ ಮುಖ್ಯಸ್ಥರು ಮತ್ತು ರಾಹುಲ್ ಗಾಂಧಿ ಸಲಹೆಗಾರರು.
2013ರಲ್ಲಿ ಪಕ್ಷದ ಪ್ರಮುಖ ವಿಭಾಗದ ಜವಾಬ್ದಾರಿ ವಹಿಸಿಕೊಂಡಿದ್ದ ಕೆ. ರಾಜು ಬಳಿಕ ರಾಹುಲ್ ಗಾಂಧಿ ಕೋರ್ ಗ್ರೂಪ್ ಸೇರಿದ್ದರು. ರಾಹುಲ್ ಗಾಂಧಿ ಅತ್ಯಾಪ್ತರಲ್ಲಿ ಕೆ. ರಾಜು ಸಹ ಒಬ್ಬರು. ಅವರು ಭಾನುವಾರ ಬೆಂಗಳೂರು ಪ್ರವಾಸದಲ್ಲಿದ್ದಾರೆ.
1981ನೇ ಬ್ಯಾಚ್‌ನ ಆಂಧ್ರ ಪ್ರದೇಶ ಕೆಡರ್ ಐಎಎಸ್ ಅಧಿಕಾರಿ ಕೆ. ರಾಜು 2013ರಲ್ಲಿ ಸ್ವಯಂ ನಿವೃತ್ತಿ ಪಡೆದರು. ನ್ಯಾಕ್‌ನ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡಿದ್ದರು. ಕಡ್ಡಾಯ ಶಿಕ್ಷಣ ಕಾಯ್ದೆ, ನರೇಗಾ ಯೋಜನೆ ಮುಂತಾದವುಗಳ ಕರಡು ತಯಾರಿಯಲ್ಲಿಯೂ ಕೆ. ರಾಜು ಕಾರ್ಯ ನಿರ್ವಹಣೆ ಮಾಡಿದ್ದಾರೆ.
ರಾಹುಲ್ ಗಾಂಧಿ ಕೋರ್ ಸಮಿತಿ ರಚನೆ, ದೇಶದ ವಿವಿಧ ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ 100ಕ್ಕೂ ಅಧಿಕ ಜನರನ್ನು ಕೆ. ರಾಜು ನೇಮಿಸಿದ್ದಾರೆ. ಈಗ ಕಾಂಗ್ರೆಸ್ ಡಿಜಿಟನ್ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ಅದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ: ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಸಿದ್ದರಾಮಯ್ಯ, "ಕುಮಾರಸ್ವಾಮಿ ನನ್ನ ಬಗ್ಗೆ ಮಾತನಾಡಲು ಯಾರು?. ಅವರು ರಾಜಕೀಯ ಪಕ್ಷದ ನಾಯಕರು ನಾನು ಅವರ ಬಗ್ಗೆ ಮಾತನಾಡಲ್ಲ. ಅವರೇಕೆ ನನ್ನ ಬಗ್ಗೆ ಮಾತನಾಡಬೇಕು?" ಎಂದು ಪ್ರಶ್ನಿಸಿದರು.
"ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಕನಸು" ಎಂದ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರು ಕುಮಾರಸ್ವಾಮಿ, ಓ ಆ ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ. ನಾನು ಹಿಜಾಬ್ ಬಗ್ಗೆ ಮಾತನಾಡಿದ್ದು ನಿಜ. ಆದರೆ ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ" ಎಂದರು.
ಸಿ. ಎಂ. ಇಬ್ರಾಹಿಂ ವಿಚಾರದ ಕುರಿತು ಮಾತನಾಡಿದ ಸಿದ್ದರಾಮಯ್ಯ, "ಅವರು ಪಕ್ಷ ಬಿಡಲ್ಲ. ಮಹದೇವಪ್ಪ ಅವರ ಜೊತೆ ಮಾತನಾಡಿದ್ದಾರೆ. ಕೋಪ ಕಡಿಮೆಯಾದ ಬಳಿಕ ನಾನು ಮಾತನಾಡುತ್ತೇನೆ. ವಿರೇಂದ್ರ ಪಾಟೀಲ್ ಜೊತೆ ಹೋಗಿದ್ದ ಆ ಮೇಲೆ ನನ್ನ ಜೊತೆ ಬಂದ" ಎಂದು ಹೇಳಿದರು.
ಕುಮಾರಸ್ವಾಮಿಗೆ ಯಾವ ಹುಚ್ಚು?; ಜಮೀರ್ ಅಹಮದ್ ಖಾನ್ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. "ಕುಮಾರಸ್ವಾಮಿಗೆ ಯಾವ ಹುಚ್ಚು ಇರುವುದು?. ಸಿಎಂ ಆಗಬೇಕು ಎಂಬ ಹುಚ್ಚು ತಾನೇ?. ಜನಸೇವೆ ಮಾಡಬೇಕು ಎಂದು ಇದೆಯೇ?. ಅವರಿಗೂ ಸಿಎಂ ಆಗಬೇಕು ಎಂಬ ಹುಚ್ಚು ಇದೆ. ಎಲ್ಲರಿಗೂ ಸಿಎಂ ಆಗಬೇಕು ಎಂಬ ಹುಚ್ಚು ಇದೆ" ಎಂದರು.












Click it and Unblock the Notifications