70 ಸದಸ್ಯರ ಪ್ರಚಾರ ಸಮಿತಿಗೆ ರಾಹುಲ್ ಗ್ರೀನ್ ಸಿಗ್ನಲ್!
ಬೆಂಗಳೂರು, ಜನವರಿ 27 : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ 70 ಸದಸ್ಯರ ಪ್ರಚಾರ ಸಮಿತಿಗೆ ಅನುಮತಿ ನೀಡಿದ್ದು, ಈ ಸಮಿತಿಗೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಅಚ್ಚರಿ ಮೂಡಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ರಾಹುಲ್ ಗಾಂಧಿಯವರು ಇಟ್ಟಿದ್ದು, ಮುಂದೆ ಏನೇನು ಸ್ಟ್ರಾಟಜಿಗಳನ್ನು ರೂಪಿಸಲಿದ್ದಾರೆ ಎಂಬ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮಿತಿಯ ಸದಸ್ಯರಾಗಿರಲಿದ್ದಾರೆ. ಹಾಗೆಯೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಕಾಂಗ್ರೆಸ್ ನ ಇತರ ಹಿರಿಯ ಮುಖಂಡರು ಕೂಡ ಈ ಪ್ರಚಾರ ಸಮಿತಿಯ ಭಾಗವಾಗಿರಲಿದ್ದಾರೆ.

ಈ ಸಮಿತಿಯಲ್ಲಿ ಕೇಂದ್ರದ ಎಲ್ಲ ಮಾಜಿ ಸಚಿವರು, ಪ್ರದೇಶ ಕಾಂಗ್ರೆಸ್ ಸಮಿತಿಯ ಎಲ್ಲ ಮಾಜಿ ಅಧ್ಯಕ್ಷರು, ಪಕ್ಷದ ಇತರ ಪ್ರಮುಖ ಸಂಘಟನೆಗಳ ಮುಖ್ಯಸ್ಥರು, ಎಐಸಿಸಿ ಪದಾಧಿಕಾರಿಗಳು ಮತ್ತು ರಾಜ್ಯ ಕಾಂಗ್ರೆಸ್‌ನ ಎಲ್ಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಇರಲಿದ್ದಾರೆ.
ಕಾಂಗ್ರೆಸ್ ಆಡಳಿತಾವಧಿ 2018ರ ಮೇನಲ್ಲಿ ಮುಗಿಯಲಿದ್ದು, ಏಪ್ರಿಲ್ ತಿಂಗಳಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುವ ಸಂಭವನೀಯತೆಯಿದೆ. ಎಲ್ಲ ಪಕ್ಷಗಳು ಈಗಾಗಲೆ ಯಾತ್ರೆಗಳ ಮೂಲಕ ಭಾರೀ ಪ್ರಚಾರ ನಡೆಸಿವೆ.
ಎಲ್ಲ ಊಹಾಪೋಹಗಳನ್ನು ಹುಸಿಗೊಳಿಸಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಸೆಣಸುವುದಾಗಿ ರಾಹುಲ್ ಹೇಳಿದ್ದರೂ, ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ 70 ಸದಸ್ಯರ ಪ್ರಚಾರ ಸಮಿತಿಯನ್ನು ರಚಿಸಿದ್ದು, ಹಲವರ ಹುಬ್ಬೇರುವಂತೆ ಮಾಡಿದರೂ ಅಚ್ಚರಿಯಿಲ್ಲ.












Click it and Unblock the Notifications