ಎಫ್‌ಐಆರ್ ರದ್ದು, ರಾಘವೇಶ್ವರ ಶ್ರೀಗಳು ಸಲ್ಲಿಸಿದ್ದ ಅರ್ಜಿ ವಾಪಸ್
ಬೆಂಗಳೂರು, ಆಗಸ್ಟ್ 17 : ಅತ್ಯಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಾಪಸ್ ಪಡೆದಿದ್ದಾರೆ.
ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿ, ಸಿಐಡಿ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಸ್ವಾಮೀಜಿಗೆ ಈಗಾಗಲೇ ಷರತ್ತುಬದ್ಧ ಜಾಮೀನು ಸಿಕ್ಕಿದೆ. [ಧರ್ಮ ಯುದ್ಧದಲ್ಲಿ ಮಡಿದರೆ ಅದುವೇ ಸ್ವರ್ಗ : ರಾಘವೇಶ್ವರ ಶ್ರೀ]

ಈ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ಕೋರಿ ಮೇ ತಿಂಗಳಿನಲ್ಲಿ ರಾಘವೇಶ್ವರ ಶ್ರೀಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಅರ್ಜಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿತ್ತು. ಸೋಮವಾರ ಶ್ರೀಗಳ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಕೋರ್ಟ್ ಅರ್ಜಿ ವಾಪಸ್ ಪಡೆಯಲು ಒಪ್ಪಿಗೆ ನೀಡಿದೆ. [ಸಿಐಡಿ ಮನವಿ ವಜಾ : ರಾಘವೇಶ್ವರ ಶ್ರೀ ಸದ್ಯಕ್ಕೆ ನಿರಾಳ]
ಮುಂದಿನ ಹೋರಾಟವೇನು? : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಸಿಐಡಿ ಶೀಘ್ರದಲ್ಲೇ ಪ್ರಕರಣದ ಚಾರ್ಜ್ ಶೀಟ್‌ಅನ್ನು ಕೋರ್ಟ್‌ಗೆ ಸಲ್ಲಿಸಲಿದ್ದು, ನಂತರ ಚಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರಿ ಶ್ರೀಗಳು ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.












Click it and Unblock the Notifications