ಸರ್ಕಾರದಿಂದ ಮಾಧ್ಯಮಗಳ ಪರೋಕ್ಷ ನಿಯಂತ್ರಣ ಯತ್ನ: ಆರ್.ಅಶೋಕ
ಬೆಂಗಳೂರು, ಸೆಪ್ಟಂಬರ್ 11: ಕರ್ನಾಟಕ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೂತನವಾಗಿ ಜಾಹೀರಾತು ಪರಿಶೀಲನಾ ಸಮಿತಿ ರಚನೆ ಮಾಡಿರುವ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಮಾಧ್ಯಮಗಳ ನಿಯಂತ್ರಣ ಮಾಡುವ ಉದ್ದೇಶವಿದೆಯೇ ಎಂದು ಅವರು ಆರೋಪ ಮಾಡಿದ್ದಾರೆ.
ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೊಸ ಜಾಹೀರಾತು ಪರಿಶೀಲನಾ ಸಮಿತಿ ರಚನೆ ಕುರಿತು ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆರ್.ಅಶೋಕ ಮಾಹಿತಿ ಹಂಚಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರವು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಅವರುಗಳನ್ನು ಸಮಿತಿಯಲ್ಲಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜಾಹೀರಾತುಗಳನ್ನು ಪರಿಶೀಲನೆ ಮಾಡಲು ತಮ್ಮ ಪಕ್ಷದ ಪದಾಧಿಕಾರಿಗಳನ್ನು ನೇಮಿಸಿದ್ದೀರಿ. ಕೆಪಿಸಿಸಿ ವಕ್ತಾರರಿಗೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಜಾಹೀರಾತು ಪರಿಶೀಲನೆ ಮಾಡುವ ಯಾವ ಅರ್ಹತೆ ಇದೆ? ಯಾವ ಅನುಭವ ಇದೆ? ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಜಾಹೀರಾತು ಪರಿಶೀಲನೆ ಸಮಿತಿಗೆ ಅರ್ಹರನ್ನು ನೇಮಕ ಮಾಡಬೇಕಾದರೆ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಂಪಾದಕರನ್ನೋ ಅಥವಾ ವಾರ್ತಾ ಇಲಾಖೆಯ ಜಾಹಿರಾತು ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅನುಭವಿ ಅಧಿಕಾರಿಗಳನ್ನೋ ನೇಮಿಸಬಹುದಿತ್ತು.
ಸರ್ಕಾರದ ನಡೆಯಿಂದ ಹಲವು ಅನುಮಾನ
ಇದೆಲ್ಲ ಬಿಟ್ಟು ಇಲಾಖೆ ಜಾಹೀರಾತು ಪರಿಶೀಲನಾ ಸಮಿತಿಗೆ ಆಡಳಿತ ಪಕ್ಷ ಕಾಂಗ್ರೆಸ್‌ನ ಪದಾಧಿಕಾರಿಗಳನ್ನು ನೇಮಕ ಮಾಡಿರುವುದು ಎಷ್ಟು ಸಮಂಜಸ?. ಸರಣಿ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಸರ್ಕಾರ ಜನಮನ್ನಣೆ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಇಂತಹ ನಡೆ ಸಹಜವಾಗಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಅವರು ದೂರಿದರು.
ಈ ಅನುಮಾನಗಳ ಪೈಕಿ ಒಂದನ್ನು ವ್ಯಕ್ತಪಡಿಸಿರುವ ಆರ್.ಅಶೋಕ ಅವರು, ಸರ್ಕಾರ ಈ ನಡೆಯ ಹಿಂದೆ ಮಾಧ್ಯಮಗಳನ್ನು ಪರೋಕ್ಷವಾಗಿ ನಿಯಂತ್ರಣ ಮಾಡುವ ಹುನ್ನಾರ ಇದೆಯೇ? ಎಂದು ಶಂಕಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದು, ಸರ್ಕಾರ ಏನು ಉತ್ತರ ನೀಡಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications