ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಆರೋಪಿಗೆ ಮತ್ತೆ ಎಸ್‌ಡಿಎ ಹುದ್ದೆ
ಬೆಂಗಳೂರು, ಏಪ್ರಿಲ್ 30: 2012ರಲ್ಲಿ ನಡೆದ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಯಾಗಿದ್ದ ದ್ವಿತಿಯ ದರ್ಜೆ ಸಹಾಯಕ (ಎಸ್‌ಡಿಎ) ಎಚ್. ಎಸ್. ಸುನೀಲ್ ಕುಮಾರ್‌ರನ್ನು ಮತ್ತೆ ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದೆ.
ಅಲ್ಲದೆ, ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ಹೈಕೊರ್ಟ್ ಎತ್ತಿಹಿಡಿದಿದೆ. ಇದರಿಂದಾಗಿ ಹತ್ತಾರು ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಆರೋಪಿಗೆ ಜಯ ಸಂದಿದೆ.

ಮರು ನೇಮಕಕ್ಕೆ ಕೆಎಟಿ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರತಿವಾದಿ ತಪ್ಪಿತಸ್ಥ ಎಂಬುದಾಗಿ ಕಂಡುಹಿಡಿಯುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ತೀಮಾನಕ್ಕೆ ಬಂದಿದೆ. ಹೀಗಾಗಿ ಕೆಎಟಿ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆದ್ದರಿಂದ ಮೇಲ್ಮನವಿ ಅರ್ಜಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ. ಹೀಗಾಗಿ ವಜಾಗೊಳಿಸಿಸುತ್ತಿದ್ದು, ಪ್ರಕರಣದ ಪ್ರತಿವಾದಿಗೆ ಕೆಎಟಿ ಆದೇಶದಂತೆ ಮುಂದಿನ ಎರಡು ತಿಂಗಳಲ್ಲಿ ಅದೇ ಹುದ್ದೆಗೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ.
ಸಾಕ್ಷ್ಯಾಧಾರಗಳಿಲ್ಲ: ಅಲ್ಲದೆ, ಪ್ರಕರಣದಲ್ಲಿ ಪ್ರತಿವಾದಿ ಎಚ್. ಎಸ್. ಸುನೀಲ್ ಕುಮಾರ್, ಸ್ಟ್ರಾಂಗ್ ರೂಮ್ ಬೀಗ ತನ್ನಲ್ಲಿಟ್ಟುಕೊಂಡಿದ್ದರು. 2012ರ ಮಾರ್ಚ್ 15ರಂದು ಪಿಯು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ, ಪ್ರತಿವಾದಿ ಅವರು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆದ ಕಾರಣ ಅನಧಿಕೃತವಾಗಿ ಸ್ಟ್ರಾಂಗ್ ರೂಮ್ ಬೀಗ ತೆಗೆದು ಪ್ರಶ್ನೆ ಪತ್ರಿಕೆ ಸೋರಿಕೆಗೆ ನೆರವಾಗಿದ್ದಾರೆ ಎಂದು ಹೇಳಲಾಗದು ಎಂದು ಪೀಠ ತಿಳಿಸಿದೆ.
ಮೇಲ್ಮನವಿಯಲ್ಲಿ ತಿಳಿಸಿರುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಶಿಸ್ತು ಪ್ರಾಧಿಕಾರ ನೀಡಿದ ವರದಿಯಲ್ಲಿರುವಂತೆ ಸರಿದೂಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಆರೋಪಿ 2012ರಲ್ಲಿ ಖಜಾನೆ ಇಲಾಖೆ ಕಡೂರಿನ ಉಪ ಖಜಾನೆಯಲ್ಲಿ ಎಸ್‌ಡಿಎ ಆಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯ ವಿರುದ್ದ ದೂರು ದಾಖಲಾಗಿ ಪೊಲೀಸರು ಬಂಧಿಸಿದ್ದರು.
ಈ ಸಂಬಂಧ ಶಿಸ್ತು ಪ್ರಾಧಿಕಾರ ಮತ್ತು ಸರ್ಕಾರ ನೇಮಿಸಿದ್ದ ನಿವೃತ್ತ ಜಿಲ್ಲಾನ್ಯಾಯಾಧೀಶರ ನೇತೃತ್ವದ ಸಮಿತಿ ಆರೋಪ ಕುರಿತು ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ವರದಿಯ ಆಧಾರದಲ್ಲಿ ಆರೋಪಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದು, ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆದುಕೊಳ್ಳಲಾಗಿತ್ತು.
ಆದರೂ 2015ರ ಅಕ್ಟೋಬರ್ 15ರಂದು ಆರೋಪಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರತಿವಾದಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು, ಇದನ್ನು ಸರ್ಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ್ದ ಕೆಎಟಿ ಅರ್ಜಿದಾರರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದ ಕಾರಣ ಅವರನ್ನು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಈ ಆದೇಶ ಪ್ರಶ್ನಿಸಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಖಜಾನೆ ನಿರ್ದೇಶನಾಲಯದ ನಿರ್ದೇಶಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications