ಅಪ್ಪು ಜೀವನ ಕಥೆಯನ್ನು ಪಠ್ಯಕ್ಕೆ ಸೇರಿಸುವಂತೆ ಸಿಎಂಗೆ ಪತ್ರ ಬರೆದ ಪುನೀತ್ ಅಭಿಮಾನಿ
ಬೆಂಗಳೂರು, ಅಕ್ಟೋಬರ್ 29: ಕನ್ನಡ ಚಿತ್ರರಂಗದ ಪವರ್‌ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ(ಅಕ್ಟೋಬರ್ 29) ಒಂದು ವರ್ಷ. ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಸಾವಿರಾರು ಅಭಿಮಾನಿಗಳು ಇಂದು ಅಪ್ಪು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸಿದ್ದಾರೆ.
ಇನ್ನು ಪುನೀತ್ ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ಮೂಲೆ ಮೂಲೆಯಲ್ಲಿ ಅಪ್ಪು ಅಭಿಮಾನಿಗಳು ಅನ್ನದಾನ, ರಕ್ತದಾನದಂತಹ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ಅಪ್ಪು ಬದುಕಿದ ರೀತಿ ಹಾಗೂ ಅವರ ಸಮಾಜ ಸೇವೆ ಎಲ್ಲರಿಗೂ ಮಾದರಿಯಾಗಿದ್ದು, ಅಪ್ಪು ಜೀವನವನ್ನು ಶಾಲಾ ಪಠ್ಯದಲ್ಲಿ ಸೇರಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ರವರ ಜೀವನ ಹಾಗೂ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಅಪ್ಪು ಅಭಿಯಾದ ದೇವರಾಜ ಅರಸು ಎನ್ನುವವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪತ್ರದಲ್ಲಿ ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತೆ ಸಾಧನೆ ಕಥೆಯನ್ನು ಸೇರಿಸಲು ಮನವಿ ಮಾಡಿದ್ದಾರೆ. ಈಗಾಗಲೇ 6ನೇ ತರಗತಿ ಪಠ್ಯ ದಲ್ಲಿ ಡಾ. ರಾಜ್‌ಕುಮಾರ್ ಜೀವನ ಸಾಧನೆ ಪಠ್ಯ ಸೇರಿಸಲಾಗಿದೆ. ಅದೆ ರೀತಿ ನಟ ಪುನೀತ್ ರಾಜ್‌ಕುಮಾರ್ ಜೀವನ ಸಾಧನೆ ಕಥೆ ಸೇರಿಸುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಡಾ.ಪುನೀತ್ ರಾಜಕುಮಾರ್ ರವರ ಜೀವನ ಕಥೆಯನ್ನು ಶಾಲಾ ಪಠ್ಯ ಪುಸ್ತಕಕ್ಕೆ ಸೇರಿಸಲು ಬೆಂಬಲ ಕೋರಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಪ್ಪು ಅಭಿಮಾನಿ ದೇವರಾಜ ಅರಸು ವಿಶೇಷ ಮನವಿ ಸಲ್ಲಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಅತೀ ಕಿರಿಯ ವಯಸ್ಸಿನಲ್ಲೂ ರಾಷ್ಟ್ರಮಟ್ಟದ ಕಲಾವಿದರಾಗಿ ಗುತಿಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟ ಏಕಮಾತ್ರ ಕಲಾವಿದ. ಇಂದಿನ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರುವಂತಹ ಸರಳ ಜೀವಿ. ಇವರ ಆದರ್ಶ ಸಾಧನೆ ಇಂದಿನ ಮಕ್ಕಳಿಗೆ ಸ್ಫೂರ್ತಿಯಾಗಲಿ. ದಯಮಾಡಿ ಇವರ ಬಾಲಾಕಲಾ ಸರಸ್ವತಿಯನ್ನು ಪರಿಗಣಿಸಿ, ಇವರ ಸಾಧನೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸಬೇಕೆಂಬುದಕ್ಕೆ ರಾಜ್ಯಾದ್ಯಂತ ಬೃಹತ್ ಅಭಿಯಾನ ನಡೆಸಿ ಸಾವಿರಾರು ಜನರಿಂದ ಈಗಾಗಲೇ ಸಹಿಯನ್ನು ಸಂಗ್ರಹಿಸಲಾಗಿರುತ್ತದೆ. ಈ ಅಭಿಯಾನನಕ್ಕೆ ಬೆಂಬಲ ಸೂಚಿಸುವಂತೆ ಹಾಗೂ ಅಪ್ಪು ಜೀವನ ಕಥೆಯನ್ನು ಶಾಲಾ ಪಠ್ಯ ಪುಸ್ತಕಕ್ಕೆ ಸೇರಿಸುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ.












Click it and Unblock the Notifications