2nd PUC Result 2025: ಕೂಲಿ ಕೆಲಸ, ಲಾರಿ ಡ್ರೈವರ್ ಮಕ್ಕಳು ರಾಜ್ಯಕ್ಕೆ ಪಿಯುಸಿ ಟಾಪರ್ಸ್
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಬಡ ಹೆಣ್ಣುಮಕ್ಕಳೇ ಇಂದು ಉತ್ತಮ ಅಂಕ ಪಡೆಯುವ ಮೂಲಕ ಕಂತೆಗಟ್ಟಲೆ ನೋಟು ಪಡೆಯುವ ಖಾಸಗಿ ಕಾಲೇಜುಗಳು ತಿರುಗಿ ನೋಡುವಂತೆ ಮಾಡಿದ್ದಾರೆ. ಇದು ನಿಜಕ್ಕೂ ಹೆಮ್ಮೆ ಪಡುವಂತಹ ವಿಚಾರ.
ಕೂಲಿ ಕೆಲಸ ಮಾಡುವ ಹಾಗೂ ಲಾರಿ ಡ್ರೈವರ್ ಮಗಳು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಇದರಿಂದ ಅವರಿಗೆ ಕಲಿಸಿದ ಶಿಕ್ಷಕರು ಹಾಗೂ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯರು ತಮ್ಮ ಮುಂದಿನ ಗುರಿಯೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕೂಲಿ ಕೆಲಸ ಮಾಡುವವರ ಮಗಳು ರಾಜ್ಯಕ್ಕೆ ಟಾಪರ್
ಕೂಲಿ ಕೆಲಸ ಮಾಡುವ ತಂದೆಯ ಮಗಳು ಇಂದು ದ್ವೀತಿಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಇದು ನಿಜಕ್ಕೂ ಬಡವರ ಮಕ್ಕಳ ಕಠಿಣ ಅಭ್ಯಾಸಕ್ಕೆ ಹಾಗೂ ಅವರ ಪೋಷಕರ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ಹುಬ್ಬಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಾಗವೇಣಿ ರಾಜಕ್ಕೆ ಐದನೇ ರ್‍ಯಾಂಕ್ ಬಂದಿದ್ದಾರೆ. ಮಗಳ ಈ ಸಾಧನೆ ಕಂಡು ಕೂಲಿ ಕಾರ್ಮಿಕ ತಂದೆ ಸಂತೋಷಗೊಂಡಿದ್ದಾರೆ. ಮಗಳ ಈ ಸಾಧನೆಗೆ ಮೆಚ್ಚಿ ಕಾಲೇಜಿನಲ್ಲಿ ಶಿಕ್ಷಕರು ತಂದೆಗೆ ಸನ್ಮಾನ ಮಾಡಿದರೆ ಮಗಳು ನಾಗವೇಣಿ ಕಣ್ಣೀರು ಹಾಕಿದ್ದಾರೆ.
ಇನ್ನೂ ಇದೇ ಖುಷಿಯಲ್ಲಿ ಮಾತನಾಡಿದ ನಾಗವೇಣಿ, 'ಹಗಲು ರಾತ್ರಿ ಓದಿದ್ದಕ್ಕೆ ನನಗೆ ಫಲ ಸಿಕ್ಕಿದೆ. ನಾನು ಪರೀಕ್ಷೆ ಇದೆ ಅಂತ ಓದಿತ್ತಿರಲಿಲ್ಲ. ಜೂನ್ ಅಂದರೆ ಕಾಲೇಜು ಶುರುವಾದಾಗಿನಿಂದ ನನ್ನ ಓದು ಆರಂಭವಾಗುತ್ತಿತ್ತು. ನಾವು ಮೊಬೈಲ್ ಹಿಡಿಯುತ್ತಿರಲಿಲ್ಲ. ಮನೆಯಲ್ಲಿ ನಮಗೆ ಅಪ್ಪ ಅಮ್ಮ ಚೆನ್ನಾಗಿ ಓದಲು ಹೇಳ್ತಾಯಿದ್ದರು. ಮಧ್ಯ ವಾರ್ಷಿಕ ಪರೀಕ್ಷೆಯಲ್ಲೂ ನಾನು ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದುಕೊಳ್ಳುತ್ತಿದ್ದೆ. ಒಂದು ಮಾರ್ಕ್ಸ್ ಹೋದ್ರೆ ಅದು ಎಲ್ಲಿ ಹೋಯ್ತು ಅಂತ ನಾನು ಹುಡುಕಿ ತೆಗೆಯುತ್ತಿದ್ದೆ. ಈಗ ನಾನು ಉತ್ತಮ ಅಂಕ ಪಡೆಯಲು ಕಾರಣ ನಾನು ಈ ಹಿಂದೆ ಮಧ್ಯವಾರ್ಷಿಕ ಪರೀಕ್ಷೆ ಬರೆದಾಗ ಪಡೆದ ಅಂಕ ಶ್ರಮನೇ ಕಾರಣ ಎಂದಿದ್ದಾರೆ'
'ನನ್ನ ತಂದೆ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದರೂ ಕೂಡ ಅವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ತಾಯಿ ಕೂಡ ಮನೆ ಕೆಲಸಕ್ಕೆ ಹೋಗುತ್ತಾರೆ. ಅವರ ಕಷ್ಟ ನೋಡಿ ನನಗೂ ಏನಾದರು ಮಾಡಬೇಕು. ಚೆನ್ನಾಘಿ ಓದು ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು ಅನಿಸುತ್ತಿತ್ತು. ಹೀಗಾಗಿ ನಾನು ಓದಿದೆ. ಮುಂದೆ ಕೂಡ ಚೆನ್ನಾಗಿ ಓದುತ್ತೇನೆ. ನನ್ನ ಮುಂದಿನ ಗುರಿ ಅಂದರೆ ನಾನು ರಾಜಕೀಯಕ್ಕೆ ಸೇರಬೇಕು. ಸಮಾಜಕ್ಕೆ ನಾನು ಕೂಡ ಕೊಡಗೆ ಕೊಡಬೇಕು ಅನ್ನೋ ಆಸೆ ಇದೆ' ಎಂದಿದ್ದಾರೆ.
ಇನ್ನೂ ಸರ್ಕಾರ ಕಾಲೇಜುಗಳ ಬಗ್ಗೆ ಇಂದಿನ ಯುವ ಪೀಳಿಗೆ ಹಾಗೂ ಪೋಷಕರಿಗೆ ಇರುವ ಭಾವನೆಯನ್ನು ನಾಗವೇಣಿ ತಿರಸ್ಕರಿಸಿದ್ದಾರೆ. 'ಸರ್ಕಾರಿ ಕಾಲೇಜು ಅಂದರೆ ಈಗ ಯಾವ ರೀತಿ ಆಗಿದೆ ಅಂದರೆ ವಿದ್ಯಾರ್ಥಿಗಳಿಗೆ ಕಟ್ಟಡ ಸರಿಯಾಗಿ ಇರುವುದಿಲ್ಲ. ಅಲ್ಲಿನ ಶಿಕ್ಷಣ ಸರಿಯಾಗಿ ಇರುವುದಿಲ್ಲ. ವಾತಾವರಣ ಸರಿಯಾಗಿ ಇರುವುದಿಲ್ಲ ಅನ್ನೋದು ಎಲ್ಲರ ತಲೆಯಲ್ಲಿ ಇರುತ್ತದೆ. ಆದರೆ ಅವರ ತಿಳುವಳಿಕೆ ತಪ್ಪು. ಅವರು ಒಮ್ಮೆ ಸರ್ಕಾರಿ ಶಾಲೆಗಳಿಗೆ ವಿಸಿಟ್ ಮಾಡಿ ನಂತರ ಅವರು ತಮ್ಮ ನಿರ್ಧಾರ ಮಾಡಬೇಕು. ನಾನು ಒಂದನೇ ತರಗತಿಯಿಂದ ಹಿಡಿದು ಇಲ್ಲಿವರೆಗೂ ಸರ್ಕಾರಿ ಶಾಲೆ ಕಾಲೇಜಿನಲ್ಲೇ ಓದಿದ್ದು. ಇಲ್ಲಿ ಕೂಡ ಶಿಕ್ಷಕರು ತುಂಬಾ ಚೆನ್ನಾಗಿ ಕಲಿಸಿ ಕೊಡುತ್ತಾರೆ' ಎಂದಿದ್ದಾರೆ.
ಒಟ್ಟಿನಲ್ಲಿ ಸರ್ಕಾರಿ ಕಾಲೇಜು ಅಂದರೆ ಮೂಗು ಮುರಿಯೋ ಜನರಿಗೆ ನಾಗವೇಣಿ ವಾಸ್ತವ ಹೇಗಿರುತ್ತದೆ ಎನ್ನುವುದನ್ನು ತಮ್ಮ ಅಂಕಗಳ ಮೂಲಕ ತಿಳಿಸಿಕೊಟ್ಟಿದ್ದಾರೆ.
ಲಾರಿ ಡ್ರೈವರ್ ಮಗಳು ಸಂಜನಾ ರಾಜ್ಯಕ್ಕೆ ಟಾಪರ್
ಇನ್ನೂ ಲಾರಿ ಡ್ರೈವರ್ ಮಗಳು ರಾಜ್ಯಕ್ಕೆ ಫಸ್ಟ್ ಬಂದಿದ್ದಾರೆ. ಕಲಾ ವಿಭಾಗದಲ್ಲಿ ಅಧಿಕ ಅಂಕ ಗಳಿಸಿದ ಸಂಜನಾ ಬಾಯಿ ಲಾರಿ ಡ್ರೈವರ್ ಪುತ್ರಿಯಾಗಿದ್ದಾರೆ. ಕೊಟ್ಟೂರಿನ ಇಂದೂ ಪಿಯು ಕಾಲೇಜು ವಿದ್ಯಾರ್ಥಿನಿಯಾದ ಅವರು 600ಕ್ಕೆ 597 ಅಂಕ ಪಡೆದಿದ್ದಾರೆ. 'ನಾನು ಕ್ಲಾಸ್ ಅಲ್ಲಿ ಗಮನಕೊಟ್ಟು ಪಾಠ ಕೇಳುತ್ತಿದ್ದೆ. ಮನೆಯಲ್ಲಿ ನಾಲ್ಕು ಗಂಟೆ ಮಾತ್ರ ಅಭ್ಯಾಸ ಮಾಡುತ್ತಿದ್ದೆ' ಎಂದು ಸಂಜನಾ ಹೇಳಿದ್ದಾರೆ.
ನಾನು ರಾತ್ರಿ ಮಾತ್ರ ಓದುತ್ತಿದ್ದೆ- ದೀಪಶ್ರೀ
ಅಲ್ಲದೆ ವಾಣಿಜ್ಯ ಶಾಸ್ತ್ರದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ ದೀಪಶ್ರೀ. ಇವರು ಕೂಡ ಸಂತಸವನ್ನು ಹಂಚಿಕೊಂಡಿದ್ದಾರೆ. ಕೆನರಾ ಪಿಯು ಕಾಲೇಜು ಮಂಗಳೂರಿನಲ್ಲಿ ಓದಿದ್ದಾರೆ. ಇವರು 600 599 ಅಂಕ ಪಡೆದಿದ್ದಾರೆ. 'ನಾನು ರ್ಯಾಂಕ್ ಬರಲು ನಾನು ಮಾಡಿದಷ್ಟೇ ನಮ್ಮ ಶಿಕ್ಷಕರೂ ಪ್ರಯತ್ನ ಮಾಡಿದ್ದಾರೆ. ಪೋಷಕರು ಕೂಡ ಸಹಕಾರ ಮಾಡಿದ್ದಾಎಎ. ಉಳಿದಂತೆ ಎಲ್ಲವೂ ದೇವರ ಕೇಪೆ ಯಿಂದ ಆಗಿದೆ ಎಂದು ದೀಪಶ್ರೀ ಹೇಳಿಕೊಂಡಿದ್ದಾರೆ. ಜಾಸ್ತಿ ರಾತ್ರಿ ಹೊತ್ತು ಓದುತ್ತಿದ್ದೆ. ಪರೀಕ್ಷೆಯ ಸಮಯದಲ್ಲಿ ಗಂಟೆಗಟ್ಟಲೆ ಓದುತ್ತಿರಲಿಲ್ಲ. ವಿಷಯ ಅರ್ಥ ಮಾಡಿಕೊಳ್ಳುವಷ್ಟು ಓದುತ್ತಿದ್ದೆ' ಎಂದಿದ್ದಾರೆ.












Click it and Unblock the Notifications