PSI recruitment; ಹೈಕೋರ್ಟ್ 111 ಪುಟಗಳ ತೀರ್ಪಿನ ಪ್ರಮುಖ ಅಂಶಗಳು
ಬೆಂಗಳೂರು, ನವೆಂಬರ್ 11: 545 ಪಿಎಸ್ಐ ನೇಮಕ ಪರೀಕ್ಷೆಯ ಅಕ್ರಮದಲ್ಲಿ ಬ್ಲೂಟೂತ್ ಬಳಕೆಯಾಗಿರುವುದರಿಂದ ಇನ್ನೂ ಕೆಲವರು ಅಕ್ರಮದಲ್ಲಿ ಭಾಗಿಯಾದ ಸಂಶಯಗಳು ಹಾಗೆಯೇ ಇದೆ. ಹೀಗಾಗಿ ಕಳಂಕಿತರು, ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲಎಂದು ಹೈಕೋರ್ಟ್ ಹೇಳಿದೆ. ನ್ಯಾಯಾಲಯ ತನ್ನ 111 ಪುಟಗಳ ತೀರ್ಪಿನಲ್ಲಿ ಅಕ್ರಮಗಳ ಅಂಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಮರು ಪರೀಕ್ಷೆ ಆಗಲೇಬೇಕೆಂದು ಹೇಳಿದೆ.
ನ್ಯಾಯಾಲಯ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವ ಕಾರಣಕ್ಕೆ ಮರುಪರೀಕ್ಷೆ ನಡೆಸಲು ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಸ್ವತಂತ್ರ ಸಂಸ್ಥೆಯಿಂದಲೇ ಮರು ಪರೀಕ್ಷೆ ನಡೆಸುವಂತೆ ತಾಕೀತು ಮಾಡಿದೆ.

ತೀರ್ಪಿನ ಪ್ರಮುಖ ಅಂಶಗಳು: ನ್ಯಾಯಪೀಠ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಹಲವು ರೀತಿಯ ಅಕ್ರಮಗಳ ಆರೋಪಗಳಿವೆ. ಪ್ರಶ್ನೆ ಪತ್ರಿಕೆ ಮೊದಲೇ ಸೋರಿಕೆಯಾದ ಕಾರಣದಿಂದಲೇ ಪ್ರಶ್ನೆ ಪತ್ರಿಕೆಗೆ ಅನುಗುಣವಾಗಿ ಅಭ್ಯರ್ಥಿಗೆ ಬ್ಲೂಟೂತ್ ಮೂಲಕ 3ನೇ ವ್ಯಕ್ತಿ ಉತ್ತರಿಸಿರುವ ಸಾಧ್ಯತೆ ಇದೆ. ನೇಮಕಾತಿ ವಿಭಾಗದ ಪೊಲೀಸ್ ಎಡಿಜಿಪಿಯೇ ಉತ್ತರಪತ್ರಿಕೆ ಒಎಂಆರ್ ಶೀಟ್‌ಗಳನ್ನು ತಿರುಚಿರುವುದರಿಂದ ಪರೀಕ್ಷೆಯಲ್ಲಿನ ಸಾರ್ವಜನಿಕ ವಿಶ್ವಾಸವೇ ಹಾಳಾಗಿದೆ ಎಂದು ಹೇಳಿದೆ.
ಅಲ್ಲದೆ, 53 ಅಭ್ಯರ್ಥಿಗಳ ವಿರುದ್ಧ ಆರೋಪಪಟ್ಟಿ ದಾಖಲಾಗಿದೆ. 52 ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಬ್ಲೂಟೂತ್ ಬಳಕೆಯಾಗಿರುವುದರಿಂದ ಇನ್ನೂ ಕೆಲವರು ಅಕ್ರಮದಲ್ಲಿ ಭಾಗಿಯಾದ ಸಂಶಯಗಳು ಹಾಗೆಯೇ ಇದೆ. ಹೀಗಾಗಿ ಕಳಂಕಿತರು, ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದೂ ಸಹ ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ಇದೀಗ ಮರುಪರೀಕ್ಷೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: 2021ರಲ್ಲಿ ನಡೆದಿದ್ದ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದವು. ಬೇಲಿಯೇ ಎದ್ದು ಹೊಲ ಮೇಯ್ದ ರೀತಿಯಲ್ಲಿ ನಡೆದ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿಯನ್ನೇ ತನಿಖಾಧಿಕಾರಿಗಳು ಬಂಧಿಸಿದ್ದರು.
545 ಅಭ್ಯರ್ಥಿಗಳ ನೇಮಕದ ಆಯ್ಕೆ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಸುಮಾರು 52 ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದು ತನಿಖೆಯಲ್ಲಿ ಪತ್ತೆಯಾಯಿತು. ಲಿಖಿತ ಪರೀಕ್ಷೆಗೆ ಬಳಸಿದ ಒಎಂಆರ್ ಶೀಟ್ ಅನ್ನೇ ಕೆಲವರು ತಿರುಚಿದ್ದರೆ, ಮತ್ತೆ ಕೆಲವರು ಬ್ಲೂಟೂತ್ ಬಳಸಿ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದು ಕಂಡು ಬಂದಿತ್ತು.
ನೇಮಕಾತಿ ವಿಭಾಗದ ಮುಖ್ಯಸ್ಥರೇ ಉತ್ತರ ಪತ್ರಿಕೆಯನ್ನು ತಿರುಚುವ ಕೃತ್ಯದಲ್ಲಿ ಭಾಗಿಯಾಗಿತ್ತು ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಹಿಂದಿನ ಬಿಜೆಪಿ ಸರ್ಕಾರ ತೀರ್ಮಾನ ಕೈಗೊಂಡಿತ್ತು.
ಈ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಸ್‌ಎಟಿ) ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 2022ರ ಜು.19ರಂದು ಕೆಎಸ್‌ಎಟಿ ವಜಾಗೊಳಿಸಿತ್ತು. ಆದೇಶ ಪ್ರಶ್ನಿಸಿ 296 ಅಭ್ಯರ್ಥಿಗಳು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಹೊಸದಾಗಿ ಲಿಖಿತ ಪರಿಕ್ಷೆ ನಡೆಸುವ ಸರ್ಕಾರದ ಆದೇಶಕ್ಕೆ 2022ರ ಸೆ.27ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಮರುಪರೀಕ್ಷೆಗೆ ಹಸಿರು ನಿಶಾನೆ ತೋರಿದೆ.












Click it and Unblock the Notifications