ಪಿಎಸ್‌ಐ ಹಗರಣ; ಆರೋಪ ಪಟ್ಟಿಯಲ್ಲಿ ಸಾಕ್ಷಿಗಳೇ ಇಲ್ಲವೆಂದು ವಾದ
ಬೆಂಗಳೂರು, ಜುಲೈ 21; ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪ್ರಾಸಿಕ್ಯೂಷನ್ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಯಾವುದೇ ಸಾಕ್ಷ್ಯಗಳೇ ಇಲ್ಲ ಎಂದು ಪ್ರಕರಣದ ಆರೋಪಿ, ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.
ಅಲ್ಲದೆ, ಅದೇ ಆಧಾರದ ಮೇಲೆ ಆರೋಪಿಯನ್ನು ವೃಥಾ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಹಾಗಾಗಿ ಜಾಮೀನು ನೀಡಬೇಕೆಂದು ಕೋರಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಅಮೃತ್ ಪೌಲ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಾಲಯ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿತು.

ವಕೀಲರ ವಾದವೇನು?; ಅಮೃತ್ ಪೌಲ್ ಪರ ವಾದ ಮಂಡಿಸಿದ ಹಿರಿಯ ವಕೀಲರು, ಪ್ರಾಸಿಕ್ಯೂಷನ್ ಆರೋಪಿಸಿದ್ದ ಅಂಶಗಳಿಗೆ ಪ್ರತಿಯಾಗಿ ಉತ್ತರ ಪತ್ರಿಕೆಯ ಮಾದರಿಯನ್ನು ಮುಕ್ತ ನ್ಯಾಯಾಲಯದಲ್ಲಿ ಪ್ರದರ್ಶಿಸಿದರಲ್ಲದೇ, ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯ ಆಧಾರದಲ್ಲಿ ಸಾಕ್ಷ್ಯವನ್ನು ಪರಿಗಣಿಸುವುದು ಸರ್ವಥಾ ಸಮರ್ಥನೀಯವಲ್ಲ ಎಂದು ಪ್ರತಿಪಾದಿಸಿದರು.
ಒಂದು ವೇಳೆ ಎಫ್‌ಎಸ್‌ಎಲ್ ವಾದವನ್ನೇ ಒಪ್ಪುವುದಾದರೆ, ಉತ್ತರ ಪತ್ರಿಕೆಯ ನಾಲ್ಕು ವಿಭಾಗಗಳಾದ ಅರ್ಜಿಸಂಖ್ಯೆ, ರೋಲ್ ನಂಬರ್, ಪ್ರಶ್ನೆ ಪತ್ರಿಕೆ ಶ್ರೇಣಿ ಹಾಗೂ ಪ್ರಯತ್ನಿಸಿದ ಪ್ರಶ್ನೆಗಳ ಸಂಖ್ಯೆ ಗಮನಾರ್ಹ. ಈ ನಾಲ್ಕೂ ಅಂಶಗಳನ್ನು ಒಬ್ಬ ಅಭ್ಯರ್ಥಿ ಉತ್ತರ ಬರೆಯುವ ಪರೀಕ್ಷಾ ಕೊಠಡಿಯ ಒಳಗೇ ಭರ್ತಿ ಮಾಡಿರಬೇಕಾಗುತ್ತದೆ. ಈ ಕಾಲಂಗಳನ್ನು ಖಾಲಿ ಬಿಡಲು ಆಗುವುದಿಲ್ಲ. ಆದರೆ, ಪ್ರಾಸಿಕ್ಯೂಷನ್ ಈ ಕಾಲಂಗಳಲ್ಲಿ ತಿದ್ದಲಾಗಿದೆ ಎಂದು ಆರೋಪಿಸುತ್ತಿರುವುದು ಆಧಾರ ರಹಿತ ಎಂದರು.
ಪರೀಕ್ಷಾ ಕೊಠಡಿಯಲ್ಲಿ ಅಂದು ಹಾಜರಿದ್ದ ಪರಿವೀಕ್ಷಕರನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿಲ್ಲ. ಅಂತೆಯೇ ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಾಡಿಸಲಾಗಿತ್ತು. ಉತ್ತರ ಪತ್ರಿಕೆಗಳನ್ನು ಇರಿಸಿದ್ದ ಪೆಟ್ಟಿಗೆಗಳನ್ನು ಸುಲಭವಾಗಿ ಯಾರೂ ಅನುಮತಿಯಿಲ್ಲದೆ, ಅನಧಿಕೃತವಾಗಿ ತೆರೆಯಲು ಅವಕಾಶವಿರಲಿಲ್ಲ ಎಂದು ವಾದಿಸಿದರು.
ಪ್ರಾಸಿಕ್ಯೂಷನ್ ಪ್ರಕರಣವನ್ನು ವ್ಯಾಪಂ ಹಗರಣಕ್ಕೆ ಹೋಲಿಸಿ ವಾದ ಮಂಡಿಸುತ್ತಿರುವುದು ಸರಿಯಲ್ಲ. ವ್ಯಾಪಂ ಪ್ರಕರಣಲ್ಲಿ ಬಹುತೇಕ ಆರೋಪಿಗಳು ಜಾಮೀನು ಪಡೆದಿದ್ದಾರೆ ಮತ್ತು ಈ ಪ್ರಕರಣದಲ್ಲಿ ಯಾವುದೇ ನೇರ ಸಾಕ್ಷ್ಯ ಇಲ್ಲ. ಪ್ರಾಸಿಕ್ಯೂಷನ್ ಶೂನ್ಯಾತಿಶೂನ್ಯ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದೆ ಎಂದು ವಾದವನ್ನು ಮಂಡಿಸಿದರು.
ಇದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್ ಪರ ವಕೀಲರು, 'ಅರ್ಜಿದಾರರ ಪರ ವಕೀಲರು ಪ್ರಕರಣದ ಮುಖ್ಯ ಅಂಶವನ್ನೇ ಬದಿಗಿರಿಸಿ ಸುತ್ತಿಬಳಸಿ ಮಹತ್ವರಹಿತ ವಾದ ಮಂಡನೆ ಮಾಡುತ್ತಿದ್ದಾರೆ' ಎಂದು ಆಕ್ಷೇಪಿಸಿದರು. ಪಿಎಸ್‌ಐ ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮೃತ್ ಪೌಲ್, ಹಗರಣದ 35ನೇ ಆರೋಪಿಯಾಗಿದ್ದಾರೆ.
ವೈದ್ಯಕೀಯ ರಜೆ ಪಡೆದಿದ್ದರು; ಪಿಎಸ್‌ಐ ನೇಮಕಾತಿ ಹಗರಣದಲ್ಲಿ 35ನೇ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದೆ. ತಮ್ಮ ವಶದಲ್ಲಿದ್ದ ಉತ್ತರ ಪತ್ರಿಕೆಗಳನ್ನು ತಿದ್ದಲು ಅವರು ಹೇಗೆ ಕಾರಣವಾಗಿದ್ದಾರೆ? ಎಂಬ ಕುರಿತು ಪ್ರಾಸಿಕ್ಯೂಷನ್ ಈ ಹಿಂದಿನ ವಿಚಾರಣೆ ಸಮಯದಲ್ಲಿ ಹೈಕೋರ್ಟ್‌ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿತ್ತು.
ಹಗರಣದ ನಡೆದ ವೇಳೆ ಅಮೃತ್ ಪೌಲ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು ಮತ್ತು ಆ ಸಮಯದಲ್ಲಿ ಅವರು ಸುಳ್ಳು ದಾಖಲೆಗಳ ಮೂಲಕ ಕಚೇರಿಗೆ ವೈದ್ಯಕೀಯ ರಜೆ ಹಾಕಿ ಸಂಚು ಸಾಕಾರಗೊಳ್ಳಲು ಕಾರಣವಾಗಿದ್ದಾರೆ ಎಂದು ವಿವರಣೆ ಕೊಟ್ಟಿದ್ದರು.












Click it and Unblock the Notifications