ಗುರುವಾರ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅಂತ್ಯಕ್ರಿಯೆ
ಗುಲ್ಬರ್ಗ, ಜ.15 : ಗುಲ್ಬರ್ಗದಲ್ಲಿ ಸುಪಾರಿ ಹಂತಕ ಮುನ್ನಾ ಜೊತೆಗಿನ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಪಿಎಸ್‌ಐ ಮಲ್ಲಿಕಾರ್ಜನ ಬಂಡೆ ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ಅವರ ಸ್ವ ಗ್ರಾಮ ಖಜೂರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬಂಡೆ ನಿಧನದ ಹಿನ್ನಲೆಯಲ್ಲಿ ಗುಲ್ಬರ್ಗದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದ್ದು, ನಾಳೆ ಸಂಜೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಗುರುವಾರ ಗುಲ್ಬರ್ಗ ನಗರಕ್ಕೆ ಮಲ್ಲಿಕಾರ್ಜುನ ಬಂಡೆ ಅವರ ಪಾರ್ಥೀವ ಶರೀರವನ್ನು ತರಲಾಗುತ್ತದೆ. ನಂತರ ಅಳಂದ ತಾಲೂಕಿನ ಖಜೂರಿಯಲ್ಲಿ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಮಲ್ಲಿಕಾರ್ಜನ್ ಅವರ ಕುಟುಂಬಕ್ಕೆ 15 ಲಕ್ಷ ಪರಿಹಾರವನ್ನು ಘೋಷಿಸಲಾಗಿದೆ.

ಮಲ್ಲಿಕಾರ್ಜುನ ಬಂಡೆ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಆದರೆ, ಇದಕ್ಕೆ ಅವರ ಕುಟುಂಬದವರು ಒಪ್ಪಿಗೆ ನೀಡಿಲ್ಲ. ಬಂಡೆ ಅವರ ಸ್ವ ಗ್ರಾಮ ಖಜೂರಿಯಲ್ಲಿ ಶೋಕ ಮಡುಗಟ್ಟಿದ್ದು, ಅವರ ಸಂಬಂಧಿಕರು ಸ್ನೇಹಿತರು ಅಂತ್ಯಕ್ರಿಯೆಗಾಗಿ ಆಗಮಿಸಿದ್ದಾರೆ. [ಮಲ್ಲಿಕಾರ್ಜುನ ಬಂಡೆ ಕೊಂದ ಪಾತಕಿ ಮುನ್ನಾ ಬಗ್ಗೆ ]
ಸಿಎಂ ಸಂತಾಪ : ಪಿಎಸ್‌ಐ ಮಲ್ಲಿಕಾರ್ಜನ ಬಂಡೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಮಲ್ಲಿಕಾರ್ಜುನ್ ಬಂಡೆ ಅವರ ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ. ಹೈದರಾಬಾದ್ ಆಸ್ಪತ್ರೆಯ ವೈದ್ಯರ ಸಲಹೆಯನ್ನು ಸರ್ಕಾರ ಪಾಲಿಸಿದೆ ಎಂದು ಅವರು ಹೇಳಿದರು.
ಗುಲ್ಬರ್ಗದಲ್ಲಿ ಅಘೋಷಿತ ಬಂದ್ : ಮಲ್ಲಿಕಾರ್ಜುನ್ ಬಂಡೆ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಗುಲ್ಬರ್ಗ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಜನ ಸಂಚಾರ ವಿರಳವಾಗಿದೆ. ಬಂಡೆ ಅವರಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಿದ್ದರೆ ಅವರು ಬದುಕಿ ಉಳಿಯುತ್ತಿದ್ದರು ಎಂದು ಸ್ಥಳೀಯರು ನಗರದ ವಿವಿಧ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಿಷೇಧಾಜ್ಞೆ ಜಾರಿ : ಗುಲ್ಬರ್ಗ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ ಸಂಜೆಯ ತನಕ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲಾ ಬಿಜೆಪಿ ಘಟಕೆ ಗುರುವಾರ ಗುಲ್ಬರ್ಗ ಬಂದ್ ಗೆ ಕರೆ ನೀಡಿದೆ. ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.












Click it and Unblock the Notifications