Siddaramaiah: ಪ್ರಾಸಿಕ್ಯೂಷನ್‌ಗೆ ಅನುಮತಿ, ಸಿದ್ದರಾಮಯ್ಯ ಪರ ವಕೀಲರ ವಾದವೇನು?
ಬೆಂಗಳೂರು, ಆಗಸ್ಟ್ 19: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಕಾನೂನು ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಯ ವಿಚಾರಣೆ ಆರಂಭವಾಗಿದೆ. ಹೈಕೋರ್ಟ್ ಆದೇಶ ಕುತೂಹಲ ಮೂಡಿಸಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ವಿಚಾರಣೆಗೆ ಅನುಮತಿ ನೀಡಿ ರಾಜ್ಯಪಾಲರು ಆದೇಶಿಸಿದ್ದಾರೆ. ಸೋಮವಾರ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಅಲ್ಲದೇ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಲಾಗಿತ್ತು.

ಹೈಕೋರ್ಟ್ 2 ಗಂಟೆ ಬಳಿಕ ಅರ್ಜಿ ವಿಚಾರಣೆಗೆ ಸಮಯ ನಿಗದಿ ಮಾಡಿತ್ತು. ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಪೀಠದಲ್ಲಿ ಸಿದ್ದರಾಮಯ್ಯ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಕರ್ನಾಟಕ ರಾಜ್ಯಪಾರ ಕಾರ್ಯದರ್ಶಿ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುತ್ತಿದ್ದಾರೆ. ಅರ್ಜಿಯ ವಿಚಾರಣೆ ವೇಳೆ ಅವರು, ರಾಜಭವನದಿಂದ ಇಂದು ಬೆಳಗ್ಗೆ ದಾಖಲೆಗಳನ್ನು ನೀಡಲಾಗಿದೆ. ಅರ್ಜಿ ವಿಚಾರಣೆಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಅಭಿಷೇಕ್ ಮನು ಸಿಂಘ್ವಿ ವಾದ: ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಿದ ಸುಪ್ರೀಂಕೋರ್ಟ್ ವಕೀಲ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುನ್ನ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಸಚಿವ ಸಂಪುಟದ ಶಿಫಾರಸಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ವಾದ ಮಂಡಿಸಿದರು.
ಪಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೊದಲು ಸಂವಿಧಾನದ 163ನೇ ವಿಧಿಯಂತೆ ಸಂಪುಟದ ಶಿಫಾರಸು ಪಾಲಿಸಬೇಕು. ದಾಖಲೆಗಳನ್ನು ಪರಿಶೀಲಿಸದೇ ಅನುಮತಿ ನೀಡಲಾಗಿದೆ. ಈ ಕುರಿತು ಕೇವಿಯಟ್ ಸಲ್ಲಿಸಿದವರಿಗೆ, ರಾಜ್ಯಪಾಲರ ಕಛೇರಿಗೆ ಸಹ ಅರ್ಜಿಯ ಪ್ರತಿ ಸಲ್ಲಿಸಲಾಗಿದೆ ಎಂದು ವಾದಿಸಿದರು. ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಮುಡಾ ಪ್ರಕರಣದಲ್ಲಿ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯದಲ್ಲಿ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸವಿದೆ. ರಿಟ್ ಅರ್ಜಿಯಲ್ಲಿ ಮಧ್ಯಂತರ ಪರಿಹಾರವಾಗಿ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ನೀಡಬೇಕೆಂದು ಕೋರಲಾಗಿದೆ. ಈ ರಿಟ್ ಅರ್ಜಿಯ ಬಗ್ಗೆ ಖ್ಯಾತ ವಕೀಲರಾದ ಅಭಿಷೇಕ್ ಮನು ಸಿಂಗ್ವಿಯವರು ವಾದ ಮಂಡಿಸಲಿದ್ದಾರೆ. ನನ್ನ ಆತ್ಮಸಾಕ್ಷಿ ಸ್ಪಷ್ಟವಾಗಿದ್ದು, ನಾನು ಯಾವ ತಪ್ಪನ್ನೂ ಎಸಗಿಲ್ಲ" ಎಂದು ಹೇಳಿದ್ದರು.
"ನಾನು ಮಂತ್ರಿಯಾಗಿ 40 ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಜನರ ಆಶೀರ್ವಾದದಿಂದ ಅವರ ಸೇವೆಯಲ್ಲಿ ನಿರತನಾಗಿದ್ದೇನೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಯಾವುದೇ ತಪ್ಪು ಮಾಡಿಲ್ಲವೆಂದು ರಾಜ್ಯದ ಜನರಿಗೂ ತಿಳಿದಿದೆ. ರಾಜಭವನವನ್ನು ಬಳಸಿಕೊಂಡು ಬಿಜೆಪಿ ಕರ್ನಾಟಕ, ಜೆಡಿಎಸ್ ಹಾಗೂ ಕೇಂದ್ರ ಬಿಜೆಪಿ ಸರ್ಕಾರದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ದುರುದ್ದೇಶದಿಂದ ನನ್ನ ಮೇಲೆ ಮಸಿ ಬಳಿಯಲು ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ" ಎಂದು ಆರೋಪಸಿದ್ದರು.
"ಬಿಜೆಪಿಯವರು ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದು, ರಾಜಕೀಯವಾಗಿ ಇದನ್ನು ಎದಿರುಸುತ್ತೇವೆ. ಈ ಪಿತೂರಿಯ ವಿರುದ್ಧ ಕಾನೂನು ಹಾಗೂ ರಾಜಕೀಯ ಹೋರಾಟವನ್ನು ಕೈಗೊಳ್ಳುತ್ತೇವೆ. ಇಂತಹ ರಾಜಕೀಯ ಹೋರಾಟಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದು, ಇನ್ನೂ ಹೆಚ್ಚಿನ ಸ್ಪೂರ್ತಿಯೊಂದಿಗೆ ಹೋರಾಡುತ್ತೇನೆ. ನಾನು ಬಡಜನರ ಪರವಾಗಿರುವುದೇ ಪ್ರತಿಪಕ್ಷಗಳ ಭಯಕ್ಕೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವುದು ಅವರನ್ನು ಕಾಡುತ್ತಿದೆ. ಸಿದ್ದರಾಮಯ್ಯನನ್ನು ರಾಜಕೀಯವಾಗಿ ಮುಗಿಸಿದರೆ, ಕಾಂಗ್ರೆಸ್ ಪಕ್ಷವನ್ನು ಮುಗಿಸಬಹುದು ಎಂಬ ಭ್ರಮೆಯಲ್ಲಿ ಪ್ರತಿಪಕ್ಷಗಳಿವೆ" ಎಂದು ತಿಳಿಸಿದ್ದರು.












Click it and Unblock the Notifications