ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಗಂಗಾಧರ್ ಹಿರೇಗುತ್ತಿ ವ್ಯಕ್ತಿಚಿತ್ರ

Subscribe to Oneindia Kannada

ರಾಜ್ಯ ಸರ್ಕಾರ ನೀಡುವ 2016 ನೇ ಸಾಲಿನ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಕಾರವಾರದ 'ಕರಾವಳಿ ಮುಂಜಾವು' ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿಯರನ್ನು ಆಯ್ಕೆ ಮಾಡಲಾಗಿದೆ.

ಒಂದು ಪತ್ರಿಕೆಯನ್ನು ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿಯನ್ನು ನೀಡಲಾಗುತ್ತದೆ. ನ್ಯಾಯಮೂರ್ತಿ ಇಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ಈ ಪ್ರಶಸ್ತಿಗೆ ಗಂಗಾಧರ ಹಿರೇಗುತ್ತಿಯವರನ್ನು ಶಿಫಾರಸ್ಸು ಮಾಡಿತ್ತು.[ನಾಗೇಶ್ ಹೆಗಡೆ, ಗಂಗಾಧರ ಹಿರೇಗುತ್ತಿಯವರಿಗೆ ಪತ್ರಿಕೋದ್ಯಮ ಪ್ರಶಸ್ತಿ]

ಪ್ರಶಸ್ತಿ ಪುರಸ್ಕೃತರಾದ ಗಂಗಾಧರ ಹೀರೆಗುತ್ತಿಯವರ ವ್ಯಕ್ತಿ ಪರಿಚಯ ಹೀಗಿದೆ,

ಉತ್ತರ ಕನ್ನಡದ ಜಿಲ್ಲಾ ಕೇಂದ್ರ ಕಾರವಾರದ 'ಕರಾವಳಿ ಮುಂಜಾವು' ದಿನಪತ್ರಿಕೆಯ ಸಂಸ್ಥಾಪಕ ಮತ್ತು ಸಂಪಾದಕರೇ ಗಂಗಾಧರ ಹಿರೇಗುತ್ತಿ. ಪದವಿ ಶಿಕ್ಷಣದ ನಂತರ ಊರು ತೊರೆದು ಉದ್ಯೋಗವಿಲ್ಲದೇ ಪತ್ರಿಕೆ ಹಂಚುವುದರ ಮೂಲಕ ಪತ್ರಿಕೋದ್ಯಮ ಲೋಕಕ್ಕೆ ಕಾಲಿಟ್ಟವರು ಇವರು. ತದನಂತರದಲ್ಲಿ ಪತ್ರಕರ್ತರಾಗಿ ಪತ್ರಿಕೆ ಮಾರಾಟದ ಕಮಿಷನ್ ಅನ್ನು ಸಂಬಳದಂತೆ ಸ್ವೀಕರಿಸಿ, ಪತ್ರಿಕೋದ್ಯಮದ ತಿಳುವಳಿಕೆಯನ್ನು ಅನುಭವದ ಮೂಲಕ ಸಾಕಾರಗೊಳಿಸಿಕೊಂಡರು ಗಂಗಾಧರ ಹಿರೇಗುತ್ತಿ.

 Profile of Mohare Hanumantha Rao Memorial Award winner Gangadhar Hiregutti

1982 ರಲ್ಲಿ ಉತ್ತರ ಕನ್ನಡದ 15 ಪೈಸೆ ಮುಖಬೆಲೆಯ ಪ್ರಥಮ ದಿನಪತ್ರಿಕೆ 'ಲೋಕಧ್ವನಿ'ಯನ್ನು 4 ಪೈಸೆಯ ಕಮಿಷನ್‍ಗಾಗಿ ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದರು. ಹೀಗೆ ತಿಂಗಳಿಗೆ 4 ರೂ ಗಳಿಸುತ್ತಿದ್ದರು. ಮನೆ ಮನೆಗೆ ಪತ್ರಿಕೆ ಹಾಕುತ್ತಾ ಪತ್ರಿಕೆ ಮಾರಾಟ ಮಾಡಿದ ಆದಾಯಕ್ಕಿಂತಲೂ ಮಿಗಿಲಾಗಿ ಪತ್ರಿಕೋದ್ಯಮದ ಕನಸನ್ನು ಕಂಡವರು ಗಂಗಾಧರ ಹಿರೇಗುತ್ತಿ. ಕ್ರಮೇಣ ಇದೇ ಅನುಭವದಲ್ಲಿ 1984 ರಲ್ಲಿ ಮಂಗಳೂರಲ್ಲಿ ಆರಂಭವಾದ 'ಮುಂಗಾರು' ದಿನಪತ್ರಿಕೆಗೆ ಉತ್ತರ ಕನ್ನಡದ ವರದಿಗಾರನಾಗಿ ಆಯ್ಕೆಯಾಗಿ 10 ವರ್ಷ ದುಡಿದರು. ನಂತರ ಕಾರವಾರದ ಜಿಲ್ಲಾ ಕೇಂದ್ರದಿಂದ 'ಕರಾವಳಿ ಮುಂಜಾವು' ದಿನಪತ್ರಿಕೆಯನ್ನು ಪ್ರಪ್ರಥಮವಾಗಿ ಮೊಳೆಯಚ್ಚಿನ ಯಂತ್ರದಲ್ಲಿ ಆರಂಭಿಸಿದರು.[ಟಿಎಸ್ಆರ್ ಪ್ರಶಸ್ತಿ ಪುರಸ್ಕೃತ ನಾಗೇಶ್ ಹೆಗಡೆ ವ್ಯಕ್ತಿಚಿತ್ರ]

ಕೇವಲ 3 ವರ್ಷದಲ್ಲಿ ಶೀಟ್‍ಫೆಡ್ ಅಫ್‍ಸೆಟ್‍ಗೆ ಹೊರಳಿಕೊಂಡರು. ನಂತರ 2005ರಲ್ಲಿ 8 ಪುಟದ ದಿನಪತ್ರಿಕೆಯನ್ನು ಎರಡು ಕಲರ್ ಪುಟ ಸಹಿತ ಹೊರತಂದರು. ಅಷ್ಟೊತ್ತಿಗಾಗಲೇ ರೋಲ್ ಅಫ್‍ಸೆಟ್ ಯಂತ್ರ ಜೋಡಿಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಗಂಗಾಧರ ಹಿರೇಗುತ್ತಿ ಸಂಪಾದಿಸಿದ್ದರು.

2011 ರಿಂದ 6 ಪುಟದ ವರ್ಣ ಹಾಗೂ 6 ಪುಟದ ಕಪ್ಪು ಬಿಳುಪಿನಲ್ಲಿ ಕರಾವಳಿ ಮುಂಜಾವು ಹೊರ ಬರುತ್ತಿದೆ. ಯಾವುದೇ ಬೃಹತ್ ಉದ್ಯಮಗಳಿಲ್ಲದ, ಸಣ್ಣ ಕೈಗಾರಿಕೆಯಲ್ಲೂ ಹಿಂದುಳಿದಿರುವ, ಅಡಿಕೆ ಹೊರತಾಗಿ ಯಾವುದೇ ವಾಣಿಜ್ಯ ಬೆಳೆಗಳಿಲ್ಲದ ಉತ್ತರ ಕನ್ನಡದಲ್ಲಿ ಈ ಪತ್ರಿಕೆಯ ಯಶಸ್ಸು ಅಚ್ಚರಿ ಮೂಡಿಸುವಂತದು. ಆರ್ಥಿಕ, ವಾಣಿಜ್ಯ, ಉದ್ಯಮದ ಹಿನ್ನೆಲೆಯಲ್ಲಿ ಉಳಿದ ಜಿಲ್ಲೆಗಳಿಂದ ಹೊರಬರುತ್ತಿರುವ ಸ್ಥಳೀಯ ದಿನಪತ್ರಿಕೆಗಳಿಗೆ ಹೋಲಿಸಿದರೆ ಕರಾವಳಿ ಮುಂಜಾವಿನ ಯಶಸ್ಸು ಬೆರಗು ಮೂಡಿಸುತ್ತದೆ.

ಪತ್ರಿಕೆ ಸಾರ್ವಜನಿಕರ ಧ್ವನಿಯಾಗಿ ಮೂಡಿ ಬರುತ್ತಿದೆ. ಮಾತ್ರವಲ್ಲ ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ವಿಪತ್ತಿನ ಸಂದರ್ಭದಲ್ಲಿ ಪತ್ರಿಕೆ ದುರ್ಬಲರ ನೆರವಿಗೆ ನಿಂತಿದೆ. ಪತ್ರಿಕೆ ತಾಳಿರುವ ಜಾತ್ಯತೀತ ನಿಲುವೂ ಸಹ ಅಷ್ಟೇ ಪ್ರಾಮುಖ್ಯತೆ ಪಡೆದಿದೆ.

ಜಿಲ್ಲಾ ಕೇಂದ್ರ ಸ್ಥಾನವಾದ ಕಾರವಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಭಾಷೆಯ ಗಾಳಿ ಸುಳಿದಾಡುತ್ತಿದ್ದರೆ, ಅದು ಕರಾವಳಿ ಮುಂಜಾವಿನ ಕೊಡುಗೆ ಎಂದು ಇಲ್ಲಿನ ಎಲ್ಲ ಕನ್ನಡ ಸಂಘಟನೆಗಳೂ ಒಪ್ಪಿಕೊಂಡ ಸತ್ಯ. ಜೊತೆಗೆ ಧಾರ್ಮಿಕ ಸಾಮರಸ್ಯದೊಂದಿಗೆ ಭಾಷಾ ಸಾಮರಸ್ಯವನ್ನು ಕಾಪಾಡಿಕೊಂಡ ಹೆಗ್ಗಳಿಕೆ ಈ ಪತ್ರಿಕೆಯದ್ದು. ಹೀಗಾಗಿ ಮುಂಜಾವು ಪತ್ರಿಕೆ ಉತ್ತರ ಕನ್ನಡದ ಮನೆ ಮಾತಾದರೆ, ಗೋವಾ ಕನ್ನಡಿಗರನ್ನು ನಿತ್ಯ ಸಂಪರ್ಕಿಸುವ ಉತ್ತರ ಕನ್ನಡದ ವಾರ್ತಾಪತ್ರ ಇದು.

ಕಾರವಾರ ನಗರದ ಮಧ್ಯಭಾಗದಲ್ಲಿ 3195 ಚದರ ಅಡಿಯ ಜಾಗದಲ್ಲಿ ಕರಾವಳಿ ಮುಂಜಾವು ಅತ್ಯುತ್ತಮ ಒಳವಿನ್ಯಾಸದೊಂದಿಗೆ ಸ್ವಂತ ಕಚೇರಿ ಹೊಂದಿದೆ. ನಗರದ ಕೈಗಾರಿಕಾ ವಸಾಹತುವಿನಲ್ಲಿ 10,000 ಚ.ಅ. ಪ್ರದೇಶದಲ್ಲಿ ಆಫ್‍ಸೆಟ್ ಮುದ್ರಣ ಯಂತ್ರವನ್ನು ಹೊಂದಿದ್ದು, ಗಂಟೆಗೆ ಹದಿನೇಳು ಸಾವಿರ ಪ್ರತಿಯನ್ನು ಮುದ್ರಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಾಮಾಜಿಕ ಕಾರ್ಯಗಳು

'ಕರಾವಳಿ ಮುಂಜಾವು' ಪತ್ರಿಕೆಯು ಉತ್ತರ ಕನ್ನಡದ ಲೇಖಕರ ಕಾರ್ಯಾಗಾರ ಎಂದು ಕರೆದವರು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ. ಮುಂಜಾವಿನ ಮೂಲಕ ಲೇಖಕರಾಗಿ ಬೆಳೆದ ಹಲವಾರು ಲೇಖಕರು, ಕವಿಗಳನ್ನು ಹೆಸರಿಸಬಹುದು.

ಕರಾವಳಿ ಮುಂಜಾವಿನಲ್ಲಿ ಮೊದಲ ಅನುಭವ ಪಡೆದು ಆಯ್ಕೆಯಾದ ರಾಜ್ಯದ ಬಹುತೇಕ ಪತ್ರ್ರಕರ್ತರು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಇಂದು ಕೆಲಸ ಮಾಡುತ್ತಿದ್ದಾರೆ. "ಕರಾವಳಿ ಮುಂಜಾವು" ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ ಅನುಭವವಿದ್ದರೆ ಉಳಿದ ಪತ್ರಿಕೆ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಆದ್ಯತೆ ಇದೆ. ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕೆಲವು ತಿಂಗಳ ತರಬೇತಿಗೆಂದು ಕರಾವಳಿ ಮುಂಜಾವು ಕಚೇರಿಯನ್ನು ಹಲವು ಬಾರಿ ಆಯ್ಕೆ ಮಾಡಲಾಗಿದೆ.

ಜಿಲ್ಲೆಯ ಹಿಂದುಳಿದ ಹಾಲಕ್ಕಿ ಒಕ್ಕಲು ಸಮಾಜದ ಇಬ್ಬರಿಗೆ ಪತ್ರಿಕೋದ್ಯಮ ಶಿಕ್ಷಣದ ಸ್ನಾತಕೋತ್ತರ ಪದವಿಯವರೆಗೂ ಪತ್ರಿಕೆ ಓದಿಸಿದೆ. ಈಗಲೂ ಬಡ ದಲಿತರ ಸ್ನಾತಕೋತ್ತರ ಪದವಿ ಶಿಕ್ಷಣದ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಂಡಿದೆ.

ಜಿಲ್ಲೆಯಲ್ಲಿ ಅವಘಡಗಳಲ್ಲಿ ಹಾನಿಯಾದ ಕುಟುಂಬಕ್ಕೆ ಅಥವಾ ವೈಯಕ್ತಿಕವಾಗಿ ಬದುಕು ಕಳೆದುಕೊಂಡವರಿಗೆ, ಮನೆ ಇಲ್ಲದ ವಿದ್ಯಾರ್ಥಿಗಳಿಗೆ ಪತ್ರಿಕೆ ಸಹಾಯ ಹಸ್ತ ಚಾಚುತ್ತಾ ಬಂದಿದೆ.

ಆಸಿಡ್ ದಾಳಿಗೆ ತುತ್ತಾದ ತರುಣಿಗೆ ವೈಯಕ್ತಿಕ ಹಣ ನೀಡಿ ನಂತರ ಪತ್ರಿಕೆಗಳಲ್ಲಿ ಓದುಗರ ಸಹಾಯ ಅಪೇಕ್ಷಿಸಿ ಹಣ ಸಂಗ್ರಹಿಸಿ ಕೊಟ್ಟಿದ್ದಿದೆ. ಬರ್ಗಿಯಲ್ಲಿ ಅನಿಲ ಟ್ಯಾಂಕರ್ ಲೀಕ್ ಆಗಿ ರಾತ್ರಿ ವೇಳೆ ಸತ್ತ 11 ಕುಟುಂಬಕ್ಕೆ ಪತ್ರಿಕೆಯಿಂದ ಆರಂಭಿಕ ಹಣ ಹಾಕಿ ನಂತರ ಸಾರ್ವಜನಿಕರಿಂದ ಸುಮಾರು 2 ಲಕ್ಷಕ್ಕೂ ಮಿಕ್ಕಿದ ಹಣ ಸಂಗ್ರಹಿಸಲಾಗಿತ್ತು.

'ಕರಾವಳಿ ಮುಂಜಾವು' ಎಂದರೆ ಉತ್ತರ ಕನ್ನಡದಲ್ಲಿ ಶುದ್ಧ ಹಸ್ತದ ಪತ್ರಿಕೆಯಾಗಿ ಪ್ರತಿಯೊಬ್ಬರಿಂದ ಪ್ರಶಂಸೆ ಪಡೆದಿದೆ. ಒಂದು ಜಾತ್ಯತೀತ ಪತ್ರಿಕೆಯಾಗಿ, ಹಿಂದುಳಿದ, ಅಲ್ಪಸಂಖ್ಯಾತರ ಧ್ವನಿಯಾಗುವುದರ ಜೊತೆ ಈ ಸಮಾಜದ ದುರ್ಬಲರಿಗೆ ಆರ್ಥಿಕವಾಗಿ ನೆರವಾದ ಪತ್ರಿಕೆ ಇದು.

ಕೃಪೆ: ಕರ್ನಾಟಕ ವಾರ್ತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gangadhar Hiregutti, founder and editor of ‘Karvali Munjavu’ has been chosen for the prestigious Mohare Hanumantha Rao Memorial Award by the government of Karnataka for 2016. Here is the detail profile of Gangadhar Hiregutti.
Please Wait while comments are loading...