ಟಿಎಸ್ಆರ್ ಪ್ರಶಸ್ತಿ ಪುರಸ್ಕೃತ ನಾಗೇಶ್ ಹೆಗಡೆ ವ್ಯಕ್ತಿಚಿತ್ರ

Subscribe to Oneindia Kannada

ಬೆಂಗಳೂರು, ಮೇ 16: ರಾಜ್ಯ ಸರ್ಕಾರವು 2016 ನೇ ಸಾಲಿನ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಿದೆ. ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ 2016 ನೇ ಸಾಲಿನ ಟಿಎಸ್ಆರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ ಪತ್ರಿಕೋದ್ಯಮಕ್ಕೆ ಗಣನೀಯ ಕೊಡುಗೆ ನೀಡಿದ ಪತ್ರಕರ್ತರ ಜೀವಮಾನದ ಸಾಧನೆಯನ್ನು ಗುರುತಿಸಿ ಈ ಟಿಎಸ್ಆರ್ ಸ್ಮಾರಕ ಪ್ರಶಸ್ತಿ ನೀಡಲಾಗುತ್ತದೆ.

ನ್ಯಾಯಮೂರ್ತಿ ಇಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ನಾಗೇಶ್ ಹೆಗಡೆಯವರ ಹೆಸರನ್ನು ಟಿಎಸ್ಆರ್ ಸ್ಮಾರಕ ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.[ನಾಗೇಶ್ ಹೆಗಡೆ, ಗಂಗಾಧರ ಹಿರೇಗುತ್ತಿಯವರಿಗೆ ಪತ್ರಿಕೋದ್ಯಮ ಪ್ರಶಸ್ತಿ]

Profile of TSR Memorial Award winner, Veteran Journalist Nagesh Hegade

ಪ್ರಶಸ್ತಿ ಪುರಸ್ಕೃತರಾದ ನಾಗೇಶ್ ಹೆಗಡೆ ವ್ಯಕ್ತಿ ಪರಿಚಯ ಹೀಗಿದೆ

ನಾಗೇಶ್ ಹೆಗಡೆಯವರು ಜನಿಸಿದ್ದು 1948ರಲ್ಲಿ; ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಕ್ಕೆಮನೆ ಎಂಬ ಚಿಕ್ಕಹಳ್ಳಿ ಅವರ ಹುಟ್ಟೂರು.

ಐಐಟಿಯಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಮತ್ತು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಪದವಿ ಪಡೆದು ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು ಗಮನ ಸೆಳೆದಿದ್ದು ಪತ್ರಕರ್ತರಾಗಿ.

ಪತ್ರಕರ್ತ ಮತ್ತು ಲೇಖಕರಾಗಿ ತಮ್ಮ ವೃತ್ತಿ ಆಯ್ದುಕೊಂಡ ನಾಗೇಶ್ ಹೆಗಡೆಯವರು 'ಪ್ರಜಾವಾಣಿ' ಪತ್ರಿಕೆಗೆ ವಿಜ್ಞಾನ ಮತ್ತು ಅಭಿವೃದ್ಧಿ ವರದಿಗಾರರಾಗಿ ಸೇರಿಕೊಂಡರು. ಹೀಗೆ ಸೇರಿಕೊಂಡ ಏಕೈಕ ಪತ್ರಕರ್ತರು ಅವರು ಮಾತ್ರ.

1980 - 2006ರವರೆಗೆ ಪ್ರಜಾವಾಣಿಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. "ವಿಜ್ಞಾನ ವಿಶೇಷ" ಹೆಸರಿನಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ವಿಜ್ಞಾನ ಅಂಕಣ ಬರೆದ ಹೆಗ್ಗಳಿಕೆ ಇವರದ್ದು. ಈ ಅಂಕಣ ಈಗಲೂ ಪ್ರತಿ ಗುರುವಾರ ಪ್ರಕಟವಾಗುತ್ತಿದೆ.

ಪರಿಸರ, ವಿಜ್ಞಾನಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ ಹಾಗೂ ಅದನ್ನು ಕನ್ನಡದಲ್ಲಿ ಸರಳವಾಗಿ ಮನಮುಟ್ಟುವಂತೆ ಬರೆಯಬಲ್ಲರು. ನಿವೃತ್ತಿ ನಂತರವೂ ಪರಿಸರ ಮತ್ತು ವಿಜ್ಞಾನಗಳ ಬಗ್ಗೆ ಅರಿವು ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕನ್ನಡ ಪತ್ರಿಕೋದ್ಯಮದಲ್ಲಿ ವಿಜ್ಞಾನ ಪರಿಸರಕ್ಕೆ ಸಂಬಂಧಿಸಿದಂತೆ ಹೊಸ ಪೀಳಿಗೆಯ ಹಲವಾರು ಪತ್ರಕರ್ತರನ್ನು ಬೆಳೆಸಿ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಹಲವಾರು ಲೇಖನ ಮಾಲಿಕೆಗಳ ಮೂಲಕ ವಿಜ್ಞಾನ ಮತ್ತು ಪರಿಸರ ಓದುಗರ ಸಮೂಹವನ್ನು ಸೃಷ್ಟಿಸಿದ್ದಾರೆ.

ಪತ್ರಿಕೆಗಳಿಗೆ ಬರೆಯುತ್ತಲೇ ಪುಸ್ತಕಗಳನ್ನೂ ಹೊರತರುವ ನಾಗೇಶ ಹೆಗಡೆ ಅವರು ಇದುವರೆಗೆ 18 ಸ್ವತಂತ್ರ ಕೃತಿಗಳು, ಆರು ಅನುವಾದಿತ ಕೃತಿಗಳು ಹಾಗೂ ಎರಡು ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಅನೇಕ ಲೇಖನಗಳು ಶೈಕ್ಷಣಿಕ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿವೆ.

ಇವರ 'ಇರುವುದೊಂದೇ ಭೂಮಿ' ಮತ್ತು 'ಕೆರೆಯಲಿ ಚಿನ್ನ, ಕೆರೆಯೇ ಚಿನ್ನ' ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. 'ಗಗನಸಖಿಯ ಸೆರಗ ಹಿಡಿದು' ಕೃತಿಗೆ ಆರ್ಯಭಟ ಪ್ರಶಸ್ತಿ, 'ನಮ್ಮೊಳಗಿನ ಬ್ರಹ್ಮಾಂಡ' ಕೃತಿಗೆ ಶಿವರಾಮ ಕಾರಂತ ಪುರಸ್ಕಾರಗಳು ಸಂದಿವೆ. 'ಕ್ಯಾಪ್ಸೂಲಗಿತ್ತಿ', 'ಮಂಗಳನಲ್ಲಿ ಜೀವಲೋಕ', 'ಪ್ರತಿದಿನ ಪರಿಸರ ದಿನ', 'ಮುಷ್ಠಿಯಲ್ಲಿ ಮಿಲೆನಿಯಂ', 'ಗುರುಗ್ರಹದಲ್ಲಿ ದೀಪಾವಳಿ', 'ಅದು ವಿಸ್ಮಯ ಇದು ವಿಷಮಯ', 'ಆಚಿನ ಲೋಕಕ್ಕೆ ಕಾಲಕೋಶ' ಇತ್ಯಾದಿ ಇವರ ಹೆಸರಾಂತ ಕೃತಿಗಳಾಗಿವೆ.

ಇವರಿಗೆ ಪ್ರೆಸ್‍ಕ್ಲಬ್ ಪ್ರಶಸ್ತಿ ಮತ್ತು ಮಾಧ್ಯಮ ಅಕಾಡೆಮಿಯ 'ಜೀವಮಾನ ಸಾಧನೆ ಪ್ರಶಸ್ತಿ' ಹಾಗೂ 2008ರಲ್ಲಿ 'ರಾಜ್ಯೋತ್ಸವ ಪ್ರಶಸ್ತಿ'ಗಳು ಸಂದಿದೆ.

ಬೆಂಗಳೂರಿನ ಸಮೀಪದ ಹಳ್ಳಿಯೊಂದರಲ್ಲಿ ಸಣ್ಣ ಕೃಷಿಕರಾಗಿ ನಿವೃತ್ತಿಯ ಜೀವನ ನಡೆಸುತ್ತಿರುವ ಇವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಾಗಿ 'ಮರಿದುಂಬಿ' ಹೆಸರಿನ ಪತ್ರಿಕೆಯನ್ನು ಹೊರ ತರುತ್ತಿದ್ದಾರೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಗೌರವ ಪ್ರಾಧ್ಯಾಪಕರಾಗಿ ಮತ್ತು ಐಐಜೆಎನ್‍ಎಂ ಪತ್ರಿಕೋದ್ಯಮ ಕಾಲೇಜಿನಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ, ವಿದ್ಯಾರ್ಥಿಗಳಿಗೆ ಉಪನ್ಯಾಸಗಳನ್ನೂ ನೀಡುತ್ತಿದ್ದಾರೆ.

ಸಾಧನೆ
ನಾಗೇಶ್ ಹೆಗಡೆಯವರ ಬರಹಗಳು ಪರಿಸರ ಸಂರಕ್ಷಣೆಯ ಅನೇಕ ಚಳವಳಿಗಳಿಗೆ ಬುನಾದಿ ಒದಗಿಸಿವೆ. ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಅವರ ಬರಹಗಳು ಪಾಠಗಳಿವೆ.

ಇಂಗ್ಲೆಂಡ್‍ನಲ್ಲಿ ಕೆಲಕಾಲ ವಾಸವಿದ್ದ ಇವರು ಅಮೆರಿಕ ಸರಕಾರದ ಅತಿಥಿಯಾಗಿ ಆಹ್ವಾನಿತರಾಗಿದ್ದರು. ಬ್ರೆಜಿಲ್, ಕೆನ್ಯಾ, ಮಲೇಶಿಯಾ, ಹಾಂಗ್‍ಕಾಂಗ್ ಮುಂತಾದ ದೇಶಗಳಿಗೆ ಪರಿಸರ ಸಂಬಂಧಿ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಬಂದಿದ್ದಾರೆ. ಸ್ವಿಟ್ಜರ್‍ ಲ್ಯಾಂಡ್ ನಲ್ಲಿ ರೇಡಿಯೋ ವರದಿಗಾರಿಕೆ ತರಬೇತಿ ಪಡೆದಿದ್ದಾರೆ. ರಿಯೋದಲ್ಲಿ ನಡೆದ ಪೃಥ್ವಿಶೃಂಗ ಸಭೆಯಲ್ಲಿ 'ಪ್ರಜಾವಾಣಿ'ಯ ವರದಿಗಾರರಾಗಿ ಭಾಗವಹಿಸಿದ್ದರು.

ಇದುವರೆಗೆ ಅವರು 30 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ. ಅವುಗಳಲ್ಲಿ 'ಇರುವುದೊಂದೇ ಭೂಮಿ', 'ನಮ್ಮೊಳಗಿನ ಬ್ರಹ್ಮಾಂಡ' "ಮುಷ್ಠಿಯಲ್ಲಿ ಮಿಲೆನಿಯಂ'' 'ಗಗನಸಖಿಯ ಸೆರಗ ಹಿಡಿದು', 'ಅಭಿವೃದ್ಧಿಯ ಅಂಧಯುಗ' ಮುಂತಾದವು ಬಹು ಚರ್ಚಿತ ಕೃತಿಗಳೆನಿಸಿವೆ.

ಇವರು ಸಂಪಾದಿಸಿದ 'ಮಾಧ್ಯಮ ಕರ್ನಾಟಕ' ಗ್ರಂಥಕ್ಕೆ 2014 ರ ವಿಶ್ವೇಶ್ವರಯ್ಯ ಪ್ರಶಸ್ತಿ ಬಂದಿದೆ. 'ನರಮಂಡಲ ಬ್ರಹ್ಮಾಂಡ' ಕೃತಿಗೆ ಈ ವರ್ಷದ ಶ್ರೇಷ್ಠ ವಿಜ್ಞಾನ ಕೃತಿ ಎಂಬ ಮನ್ನಣೆ ಸಿಕ್ಕಿದೆ. ಈಚೆಗಷ್ಟೇ ಡಾ. ಶಿವರಾಮ ಕಾರಂತರ ನೆನಪಿನ 'ಬಾಲವನ ಪ್ರಶಸ್ತಿ'ಯನ್ನು ಇವರಿಗೆ ನೀಡಲಾಗಿದೆ.
ಕೃಪೆ: ಕರ್ನಾಟಕ ವಾರ್ತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran journalist Nagesh Hegade has been chosen for the prestigious TSR Memorial Award by the government of Karnataka for 2016. Here is the detail profile of Nagesh Hegade.
Please Wait while comments are loading...