ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ; ಸಂಭವನೀಯ ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 31: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ಸಂಭವನೀಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಸರ್ಕಾರ ಪರೀಕ್ಷಾ ವ್ಯವಸ್ಥೆಯನ್ನು ಬದಲಾವಣೆ ಮಾಡಿದೆ.
ಕರ್ನಾಟಕ ಸರ್ಕಾರ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಹೆಸರಿಸಿ ಮೂರು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಕುರಿತು ಆದೇಶ ಹೊರಡಿಸಿದೆ. ಪರೀಕ್ಷೆಗಳನ್ನು ಹೇಗೆ ನಡೆಸಬೇಕು? ಎಂದು ಮಾರ್ಗಸೂಚಿಯನ್ನು ಸಹ ಹೊರಡಿಸಲಾಗಿದೆ.

ಸರ್ಕಾರದ ನಿರ್ದೇಶನದಂತೆ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ಪದ್ಧತಿಯನ್ನು ಸಂಪೂರ್ಣ ಬದಲಾವಣೆ ಮಾಡಲಾಗಿದೆ. ಹಿಂದೆ ಕೇವಲ ಒಂದು ವಾರ್ಷಿಕ ಪರೀಕ್ಷೆ ಹಾಗೂ ಒಂದು ಪೂರಕ ಪರೀಕ್ಷೆ ನಡೆಸುತ್ತಿದ್ದ ಮಂಡಳಿ ಈಗ ಒಟ್ಟು 3 ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ.
ಪರೀಕ್ಷೆ ವೇಳಾಪಟ್ಟಿ; ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈಗ ಎಸ್ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಸಂಭವನೀಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಮತ್ತು ಪರೀಕ್ಷಾ ಆತಂಕವನ್ನು ಸೃಷ್ಟಿಸುತ್ತಿತ್ತು. ಇದರಿಂದ ವಿದ್ಯಾರ್ಥಿಗಳ ಜ್ಞಾನ, ಅರ್ಥಪೂರ್ಣ ಕಲಿಕೆ, ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿತ್ತು. ಆದರೆ ಈಗ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪರೀಕ್ಷಾ ಪದ್ಧತಿಯಲ್ಲಿ ಸುಧಾರಣಾ ವ್ಯವಸ್ಥೆಯನ್ನು ಅಳವಡಿಸಿದಲ್ಲಿ 1, 2 ಮತ್ತು 3 ಪರೀಕ್ಷೆಗಳಲ್ಲಿ ಗಳಿಸಿದ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿದಂತಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗ ಮತ್ತು ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಅವಕಾಶ ಒದಗಿಸಿದಂತಾಗುತ್ತದೆ ಎಂದು ಅಂದಾಜಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ನಡೆಯಲಿದೆ. ಮೇ 8ರಂದುದ ಫಲಿತಾಂಶ ಪ್ರಕಟವಾಗಲಿದ್ದು, ಮೇ 23ರಂದು ಮೌಲ್ಯಮಾಪನ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ-2 ಜೂನ್ 12 ರಿಂದ ಜೂನ್ 19 (ಜೂನ್ 29ಕ್ಕೆ ಫಲಿತಾಂಶ ಪ್ರಕಟ, ಜುಲೈ 10 ರಂದು ಮರುಮೌಲ್ಯಮಾಪನದ ಫಲಿತಾಂಶ ಪ್ರಕಟ). ಪರೀಕ್ಷೆ-3 ಜೂನ್ 29ರಿಂದ ಆಗಸ್ಟ್ 5 (ಆಗಸ್ಟ್ 19ಕ್ಕೆ ಫಲಿತಾಂಶ. ಆಗಸ್ಟ್ 26 ಮರುಮೌಲ್ಯಮಾಪನ ಫಲಿತಾಂಶ ಪ್ರಕಟವಾಗಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-1 ಮಾರ್ಚ್ 1ರಿಂದ ಮಾರ್ಚ್ 25 (ಏಪ್ರಿಲ್ 22 ಫಲಿತಾಂಶ ಪ್ರಕಟ, ಮೇ 10 ಮರುಮೌಲ್ಯಮಾಪನ ಫಲಿತಾಂಶ ಪ್ರಕಟ). ಪರೀಕ್ಷೆ-2 ಮೇ 15 ರಿಂದ ಜೂನ್ 5 (ಜೂನ್ 21ರಂದು ಫಲಿತಾಂಶ. ಪರೀಕ್ಷೆ-3 ಜುಲೈ 12ರಿಂದ ಜುಲೈ 30 (ಆಗಸ್ಟ್ 16ಕ್ಕೆ ಫಲಿತಾಂಶ ಪ್ರಕಟ, ಜೂನ್ 29 ಮರುಮೌಲ್ಯಮಾಪನ ಫಲಿತಾಂಶ ಪ್ರಕಟ) ಪ್ರಕಟ. ಆಗಸ್ಟ್ 25 ಮರುಮೌಲ್ಯಮಾಪನ ಫಲಿತಾಂಶ ಪ್ರಕಟವಾಗಲಿದೆ.
ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯು ಗಳಿಸಿದ ಅಂಕಗಳಿಂದ ತೃಪ್ತರಾಗದಿದ್ದರೆ, ವಾರ್ಷಿಕ ಪರೀಕ್ಷೆಯಲ್ಲಿಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದೆ. ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಸರಳ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ವಿದ್ಯಾರ್ಥಿಯ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತಿದೆ.
ಈ ವ್ಯವಸ್ಥೆಯು ವಿದ್ಯಾರ್ಥಿ ಸ್ನೇಹಿಯಾಗಿರುವುದಿಲ್ಲ. ಏಕೆಂದರೆ ಎರಡು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ಯಾವುದೇ ಆಯ್ಕೆ ಇರುವುದಿಲ್ಲ. ಹೀಗಾಗಿ ಸುಧಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ 1, 2 ಮತ್ತು 3 ಪರೀಕ್ಷೆಗಳಲ್ಲಿ ಗಳಿಸಿದ ವಿಷಯವಾರು ಅಂಕವನ್ನು ಉಳಿಸಿಕೊಳ್ಳಲು ಅವಕಾಶವನ್ನು ಒದಗಿಸಿದಂತಾಗುತ್ತದೆ ಎಂದು ಮಂಡಳಿ ತಿಳಿಸಿದೆ.












Click it and Unblock the Notifications