ಸಿಎಂ ಸಿದ್ದರಾಮಯ್ಯನವರಿಗೂ ತಟ್ಟಿದ 'ಮೋದಿ' ಪರ ಘೋಷಣೆಯ ಬಿಸಿ
ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತಬೇಟೆಯ ವೇಳೆ ಮೋದಿ.. ಮೋದಿ.. ಜೈಕಾರದ ಘೋಷಣೆಯ ಬಿಸಿ ಮುಖ್ಯಮಂತ್ರಿಗಳಿಗೆ ತಟ್ಟಿದೆ. ಸಿಎಂ ಆಗಮಿಸುತ್ತಿದ್ದಂತೇ ಮೋದಿ ಜಪ, ಕಾಂಗ್ರೆಸ್ ಮತ್ತು ಪಿಎಂ ಘೋಷಣೆ ಕೂಗಿದವರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.
ಶನಿವಾರ ರಾತ್ರಿ (ಮೇ 5) ಬಾದಾಮಿಯ ಕೆರೂರಿನಲ್ಲಿ ಮತಯಾಚನೆ ಮಾಡಲು ಸಿಎಂ ಕಾರಿನಲ್ಲಿ ಇಳಿಯುತ್ತಿದ್ದಂತೇ, ಅಲ್ಲಿದ್ದ ಯುವಕರ ಗುಂಪು ಮೋದಿ ಪರವಾಗಿ ಘೋಷಣೆ ಕೂಗಿದ್ದಾರೆ. ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ರಾಹುಲ್ .. ಎಂದು ಘೋಷಣೆ ಕೂಗಿದ್ದಾರೆ.
ಇತ್ತಂಡಗಳ ಮೋದಿ, ರಾಹುಲ್ ಘೋಷಣೆ ತಾರಕಕ್ಕೇರುತ್ತಿದ್ದಂತೇ, ವಾಗ್ಯುದ್ದ ಆರಂಭವಾಗಿ ಎರಡೂ ಕಡೆಯವರು ಕೈಕೈ ಮಿಲಾಯಿಸಲು ಮುಂದಾಗಿ, ಕಲ್ಲು ತೂರಾಟ ನಡೆಸಲು ಆರಂಭಿಸಿದ್ದಾರೆ. ಆ ವೇಳೆ, ಸುನಿಲ್ ಗಡ್ಡದ್ ಎನ್ನುವ ಕಾಂಗ್ರೆಸ್ ಕಾರ್ಯಕರ್ತನ ಹಣೆಗೆ ಕಲ್ಲೇಟು ಬಿದ್ದು ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವದನ್ನು ಅರಿತ ಪೊಲೀಸರು ಲಾಠಿ ಚಾರ್ಚ್ ನಡೆಸಿ, ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಮುಖ್ಯಮಂತ್ರಿ ಕೆರೂರಿನಲ್ಲಿ ರೋಡ್ ಶೋ ನಡೆಸಬೇಕಾಗಿತ್ತು. ಆದರೆ, ಸಮಯದ ಅಭಾವದಿಂದ ಬರೀ ಭಾಷಣ ಮಾಡಿ ಮತಯಾಚಿಸಿ ಮುಂದಿನ ಪೂರ್ವ ನಿಗದಿತ ಕಾರ್ಯಕ್ರಮದತ್ತ ಸಾಗಿದ್ದಾರೆ.
ಇದಕ್ಕೂ ಮುನ್ನ ಬಾದಾಮಿಯಲ್ಲಿ ನಡೆದ ಮುಖ್ಯಮಂತ್ರಿಗಳ ರೋಡ್ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಮಗೆಲ್ಲ ಒಳ್ಳೆ ಚಾನ್ಸ್ ಇದೆ, ನನ್ನನ್ನು ಗೆಲ್ಲಿಸಿ, ಸಿಎಂ ಮಾಡಿಸಿ, ಬಾದಾಮಿಯ ಅಭಿವೃದ್ದಿ ನನಗೆ ಬಿಟ್ಟುಬಿಡಿ ಎಂದು ಸಿಎಂ ಮತಯಾಚಿಸಿದ್ದಾರೆ. ಕಾಂಗ್ರೆಸ್ ಸಭೆಗಳಲ್ಲಿ ಮೋದಿ, ಬಿಜೆಪಿ, ಜೆಡಿಎಸ್ ಜಪ ಇದೇನು ಮೊದಲಲ್ಲ, ಕೆಲವೊಂದು ಮುಂದಿದೆ...

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರೋಡ್ ಶೋ
ಕರಾವಳಿ ಪಟ್ಟಣ, ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ ನಡೆದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರೋಡ್ ಶೋ ವೇಳೆ ಮೋದಿ ಘೋಷಣೆ ಕೇಳಿ ಬಂದಿತ್ತು. ಏಪ್ರಿಲ್ 26ರಂದು ನಡೆದ ರೋಡ್ ಶೋ ವೇಳೆ ಯುವಕರ ತಂಡ, ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ತೆರೆದ ವಾಹನದ ಬಳಿ ಮೋದಿ ಜಪ ಮಾಡುತ್ತಿದ್ದರು.

ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ತೀವ್ರ ಮುಜುಗರ
ಫೆಬ್ರವರಿ 28ರಂದು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ನಡೆದ ರಾಹುಲ್ ಗಾಂಧಿಯ ಪರಿವರ್ತನಾ ರ‍್ಯಾಲಿಯ ರೋಡ್ ಶೋ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಜನಸ್ತೋಮ ನೆರೆದಿತ್ತು. ರಾಹುಲ್ ಅವರ ವಾಹನ ಬರುತ್ತಿದ್ದಂತೇ, ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಜನರು ಮೋದಿ.. ಮೋದಿ ಎಂದು ಘೋಷಣೆ ಕೂಗಲಾರಂಭಿಸಿದರು. ಇದರಿಂದ ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರು ತೀವ್ರ ಮುಜುಗರ ಎದುರಿಸಬೇಕಾಯಿತು.

ಭಾಷಣಕ್ಕೆ ಬ್ರೇಕ್ ಹಾಕಿ ಮತ್ತು ಮತ್ತೆ ಭಾಷಣ ಮುಂದುವರಿಸಿದರು
ಫೆಬ್ರವರಿ 26ರಂದು ನಡೆದ ರ‍್ಯಾಲಿಯ ವೇಳೆಯೂ, ರಾಹುಲ್ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಂತೇ ಮೋದಿ ಪರ ಘೋಷಣೆ ಮುಗಿಲು ಮುಟ್ಟಿತ್ತು. ಒಂದು ನಿಮಿಷ ರಾಹುಲ್ ಮತ್ತು ಸಿದ್ದರಾಮಯ್ಯ ಘೋಷಣೆ ಕೂಗದಂತೇ ಕೈಸನ್ನೆ ಮಾಡಿದರೂ, ಮೋದಿ ಮಂತ್ರ ಕಮ್ಮಿಯಾಗಲಿಲ್ಲ. ರಾಹುಲ್, ಮುಗುಳ್ನಗುತ್ತಾ ಒಂದು ನಿಮಿಷ ಭಾಷಣಕ್ಕೆ ಬ್ರೇಕ್ ಹಾಕಿ ಮತ್ತೆ ಭಾಷಣ ಮುಂದುವರಿಸಿದರು.

ದೇವೇಗೌಡರ ಪರ ಘೋಷಣೆಯನ್ನು ಸ್ಥಳೀಯರು ಕೂಗಲಾರಂಭಿಸಿದರು
ಇದೇ ರೀತಿಯ ಮುಜುಗರ ಎದುರಿಸಬೇಕಾದ ಪರಿಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮೈಸೂರಿನಲ್ಲಿ ಆಗಿತ್ತು. ಪ್ರಚಾರಕ್ಕೆಂದು ತಾವು ಸ್ಪರ್ಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಾಗ, ದೇವೇಗೌಡ್ರು ಮತ್ತು ಅಲ್ಲಿನ ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡರ ಪರ ಘೋಷಣೆಯನ್ನು ಸ್ಥಳೀಯರು ಕೂಗಲಾರಂಭಿಸಿದ್ದರು.

ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದ ನಟ ದರ್ಶನ್
ಶನಿವಾರ, ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದ ನಟ ದರ್ಶನ್ ಕೂಡಾ ಸ್ಥಳೀಯರ ವಿರೋಧ ಎದುರಿಸಬೇಕಾಯಿತು. ಅಂಬರೀಶ್ ಅವರನ್ನು ದೂರ ಮಾಡಿದ ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ನೀವು ಬರಬೇಡಿ ಎಂದು ಚಾಮುಂಡೇಶ್ವರಿಯಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯನವರ ಮತಯಾಚನೆಯ ವೇಳೆಯೂ, ಜೆಡಿಎಸ್ ಪರ ಘೋಷಣೆ ಮೊಳಗುತ್ತಿತ್ತು.












Click it and Unblock the Notifications