Priyanka Gandhi in Bengaluru : ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ; ಬೆಂಗಳೂರಿಗೆ ಇಂದು ಪ್ರಿಯಾಂಕಾ ಗಾಂಧಿ
ಬೆಂಗಳೂರು,ಜನವರಿ16: ಬೆಂಗಳೂರಿನಲ್ಲಿ ಇಂದು (ಸೋಮವಾರ) ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಚುನಾವಣೆಗೆ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟ್ ತುಂಬಲು ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಮಹಿಳಾ ಘಟಕದಿಂದ ಮಹಿಳೆಯರ ಸಂಘಟನೆಗಾಗಿ ಹಮ್ಮಿಕೊಂಡಿದ್ದ ನಾ ನಾಯಕಿ ಸಮಾರೋಪ ಸಮಾರಂಭ ಮಧ್ಯಾನ್ಹ 12;30 ಕ್ಕೆ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಸೇರುವ ನೀರಿಕ್ಷೆ ಇದೆ.
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗಲಿದೆ ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಹಿಳೆಯರ ಹೆಚ್ಚಿನ ಮತ ಪಡೆಯುವ ಉದ್ದೇಶದಿಂದ ಪ್ರಿಯಾಂಕಾ ಅವರನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕಾಂಗ್ರೆಸ್ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವ ಬಗ್ಗೆ ಯೋಚನೆ ಮಾಡಿದೆ. ಈಗಾಗಲೇ ಮಹಿಳಾ ಕಾಂಗ್ರೆಸ್ ವತಿಯಿಂದ ಸಭೆ ನಡೆಸಿದ್ದು, 30 ಮಂದಿ ಮಹಿಳೆಯರಿಗೆ ಈ ಬಾರೀ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದು, ಇಂದು ರಾಜ್ಯಕ್ಕೆ ಅಗಮಿಸುತ್ತಿರುವ ಪ್ರಿಯಾಂಕಾ ಗಾಂಧಿಯವರ ಮುಂದೆ ಮಹಿಳಾ ಕಾಂಗ್ರೆಸ್ ತಮ್ಮ ಬೇಡಿಕೆಯನ್ನ ವ್ಯಕ್ತಪಡಿಸಲಿದೆ.

ಇನ್ನೂ ನಾ ನಾಯಕಿ ಸಮಾವೇಶದಲ್ಲಿ ಮಹಿಳೆಯರಿಗೆ ವಿಶೇಷವಾದ ಯೋಜನೆಯನ್ನು ಪ್ರಿಯಾಂಕಾ ಅವರ ಮೂಲಕ ಘೋಷಣೆ ಮಾಡಿಸುವ ಸಾಧ್ಯತೆ ಇದೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ 1500 ರೂ ಮಹಿಳೆಗೆ ಕೊಡಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ, ರಾಜ್ಯದ ಎಲ್ಲಾ ಮಹಿಳೆಯರಿಗೆ ಕೊಡ್ತಾರಾ ಅಥವಾ ಕೇವಲ ಎಪಿಎಲ್ , ಬಿಪಿಎಲ್ ಕಾಡ್೯ ಇರುವವರಿಗೆ ಕೊಡ್ತಾರ ಅನ್ನೋ ಬಗ್ಗೆ ಸ್ಪಷ್ಟವಾಗಿ ಮಾಹಿತಿಯಿಲ್ಲ. ಹೀಗಾಗಿ ಇಂದು ನಡೆಯುವ ಸಮಾವೇಶದಲ್ಲಿ ಪ್ರಿಯಾಂಕಾ ಘೋಷಣೆ ಮಾಡಿದ ಮೇಲೆ ಗೊತ್ತಾಗಲಿದೆ.
ಇನ್ನು ಕಾರ್ಯಕ್ರಮಕ್ಕೆ ದಕ್ಷಿಣ ಕರ್ನಾಟಕದಿಂದ ಪ್ರತಿ ಬೂತ್ ನಿಂದ ಕನಿಷ್ಠ ಮೂವರು ಮಹಿಳೆಯರು ಬರಬೇಕು ಮತ್ತು ಉತ್ತರ ಕರ್ನಾಟಕದಿಂದ ಇಬ್ಬರು ಮಹಿಳೆಯರನ್ನು ಕರೆತರಬೇಕಾಗಿದೆ ಕೈ ನಾಯಕರು, ಈ ಸಮಾವೇಶದ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳೆಯರ ಹೆಚ್ಚಿನ ಬೆಂಬಲ ಪಡೆಯುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ ಎನ್ನಲಾಗಿದೆ.

ನಾ ನಾಯಕಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.












Click it and Unblock the Notifications