ಖಾಸಗಿ ಶಾಲೆ ನವೀಕರಣ, ಪ್ರತಿ ವರ್ಷ ದಾಖಲೆ ಕೇಳುವುದು ಸರಿಯಲ್ಲ
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಸರ್ಕಾರ 2023-24ನೇ ಸಾಲಿನಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸೂಚನೆ ನೀಡಿತ್ತು. ಆದರೆ ಪ್ರತಿವರ್ಷ ನವೀಕರಣ ಮಾಡುವಾಗಲೂ ದಾಖಲೆಗಳನ್ನು ಕೇಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರವನ್ನು ಬರೆದಿದ್ದಾರೆ. ಈ ಅವೈಜ್ಞಾನಿಕ ಪದ್ಧತಿಯನ್ನು ಸರಿಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ. ಹೊರಟ್ಟಿ ಪತ್ರದ ಸಾರಂಶ; ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಕುರಿತಂತೆ ಪ್ರತಿ ವರ್ಷ ಸಲ್ಲಿಸಲಾಗುತ್ತಿರುವ ಪ್ರಸ್ತಾವನೆಯಲ್ಲಿ ಹಲವಾರು ಷರತ್ತುಗಳನ್ನು ವಿಧಿಸಲಾಗುತ್ತಿದೆ ಎಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಹಾಗೂ ಅಗ್ನಿನಂದಕ ಅಳವಡಿಸಿರುವ ಕುರಿತು ಅಗ್ನಿಶಾಮಕ ಇಲಾಖೆಯ ಪ್ರಮಾಣ ಪತ್ರ ಮೊದಲಾದವುಗಳನ್ನು ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಏಕೆಂದರೆ ಪುರಾತನ ಕಾಲದ ಕಟ್ಟಡಗಳಿಗೆ ಈಗಾಗಲೇ ಈ ಮೊದಲು ಈ ಮಾಹಿತಿಯನ್ನು ಸಲ್ಲಿಸಿದ್ದು ಅದೇ ಮಾಹಿತಿಯನ್ನು ಪ್ರತಿ ಸಲ ಸಲ್ಲಿಸುವಂತೆ ಕೇಳುವದು ಸಮಂಜಸವಾಗಿರುವುದಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಹಾಗೂ ಸರಕಾರಿ ಶಾಲೆಗಳಿಗೆ ಇಲ್ಲದ ನಿಯಮಗಳು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ವಿಧಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂಬುವುದು ನನ್ನ ವಿಚಾರ. ಆದ್ದರಿಂದ ಈ ನಿಟ್ಟಿನಲ್ಲಿ ಇಂತಹ ಅನವಶ್ಯಕ ಮಾಹಿತಿಯನ್ನು ಕೇಳಬಾರದೆಂದು ತಮ್ಮ ಇಲಾಖೆಯ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಈ ಮೂಲಕ ಕೋರುತ್ತೇನೆ ಎಂದು ಬಸವರಾಜ ಹೊರಟ್ಟಿ ಶಿಕ್ಷಣ ಸಚಿವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಈ ಹಿಂದೆ ಶಿಕ್ಷಣ ಸಚಿವರಾಗಿ ಕೆಲಸ ನಿರ್ವಹಣೆ ಮಾಡಿದವರು. 2006-07ರಲ್ಲಿ ನಾನು ಸಚಿವನಾಗಿದ್ದಾಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆದೇಶಿಸಿದ್ದೆ ಎಂದು ಪತ್ರದಲ್ಲಿ ವಿವರಣೆ ಕೊಟ್ಟಿದ್ದಾರೆ.
ಪ್ರತಿ 5 ವರ್ಷಕ್ಕೊಮ್ಮೆ, 10 ವರ್ಷಕ್ಕೊಮ್ಮೆ, 15 ವರ್ಷಕ್ಕೊಮ್ಮೆ ತದನಂತರ ಶಾಶ್ವತ ಮಾನ್ಯತೆ ನವೀಕರಣ ನೀಡುವ ಕುರಿತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಎರಡು ವರ್ಷ ಈ ಆದೇಶ ಪಾಲಿಸಿದ ಶಿಕ್ಷಣ ಇಲಾಖೆ ಮತ್ತೆ ಪ್ರತಿ ವರ್ಷ ಮಾನ್ಯತೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದೆ. ಇದು ಏಕಾಗಿ? ಎಂಬುದು ನನ್ನ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಸಭೆಯನ್ನು ಕರೆದು 2006-07ರ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕು ಎಂದು ಸಚಿವ ಮಧು ಬಂಗಾರಪ್ಪಗೆ ಬಸವರಾಜ ಹೊರಟ್ಟಿ ಪತ್ರದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications