ಮುಜರಾಯಿ ಇಲಾಖೆ ದೇವಾಲಯಗಳ ಹಣ ಬಿಡುಗಡೆಗೆ ಕಮಿಷನ್: ಅರ್ಚಕರ ಸಂಘದಿಂದ ಗಂಭೀರ ಆರೋಪ
ಬೆಂಗಳೂರು, ಆಗಸ್ಟ್ 05: ಕಾಂಗ್ರೆಸ್ ಸರ್ಕಾರದ ಮೇಲೆ ದೇವಸ್ಥಾನದ ಅರ್ಚಕರಿಂದ ಗಂಭೀರ ಆರೋಪ ಕೇಳಿಬಂದಿದೆ. ಮುಜರಾಯಿ ಇಲಾಖೆಗೆ ಒಳಪಡುವ ದರ್ಜೆಯ ದೇವಸ್ಥಾನಗಳಲ್ಲಿ ತಸ್ತಿಕ್ ಹಣ ಬಿಡುಗಡೆಗೆ ಕಮಿಷನ್ ನೀಡಬೇಕಾದ ಆರೋಪ ಕೇಳಿ ಬಂದಿದೆ. ರಾಜ್ಯ ಅರ್ಚಕರ ಸಂಘ ಈ ಆರೋಪ ಮಾಡಿದ್ದು, ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿಗೆ ಪತ್ರ ಬರೆದಿದ್ದಾರೆ.
ಕಮಿಷನ್ ಆರೋಪ ಕೇಳಿ ಬರುತ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಕೆಲಸ ಆಗಬೇಕು ಎಂದರೆ ಅಧಿಕಾರಿಗಳಿಗೆ ಕಮಿಷನ್ ಕೊಡಬೇಕು ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇದೀಗ ಅದೇ ಆರೋಪ ತಿರುಗಿ ಅವರ ಮೇಲೆ ಬಂದಿದೆ, ಆದ್ರೆ ಈ ಬಾರಿ ಆರೋಪ ಮಾಡ್ತಿರೋದು ಗುತ್ತಿಗೆದಾರರಲ್ಲ, ಬದಲಾಗಿ ದೇವಸ್ಥಾನದ ಅರ್ಚಕರು.

ಮುಜರಾಯಿ ಇಲಾಖೆಗೆ ಒಳಪಡಿಸಿರುವ ದರ್ಜೆ ದೇವಸ್ಥಾನಗಳಲ್ಲಿ ಸರ್ಕಾರದಿಂದ ದಿನನಿತ್ಯದ ಪೂಜಾ ಕಾರ್ಯಕ್ಕೆ ಹಾಗೂ ಅಲಂಕಾರಕ್ಕೆ ಅಂತ ತಿಂಗಳಿಗೆ 20 ರಿಂದ 30 ಸಾವಿರ ತಸ್ತಿಕ್ ಹಣ ಅಂತ ಅನುದಾನ ನೀಡುತ್ತದೆ. ಆದರೆ ಈ ತಸ್ತಿಕ್ ಹಣ ಪಡೆಯೋದಕ್ಕೆ ಧಾರ್ಮಿಕ ಧತ್ತಿ ಇಲಾಖೆಯ ಅಧಿಕಾರಿಗಳಿಗೆ, ಗುಮಸ್ತರಿಗೆ, ಟ್ರೆಷರಿ ಆಫೀಸರ್ ಗಳಿಗೆ ಕಮಿಷನ್ ಕೊಡಬೇಕು, ಇಲ್ಲವಾದರೆ ತಸ್ತಿಕ್ ಹಣ ಬಿಡುಗಡೆ ಆಗಲ್ಲ ಅಂತ ಆರೋಪ ಮಾಡಿ ಮುಜರಾಯಿ ಸಚಿವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದರು.
ಇನ್ನು ದೇವರ ಪೂಜೆಗೆ ಹಣ ಬೇಕು ಅಂದ್ರೂ ಅರ್ಚಕರು ಅಧಿಕಾರಿಗಳಿಗೆ ಕಮಿಷನ್ ಕೊಡಬೇಕು. ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಅಡಿಯಲ್ಲಿ ಬರುವ ಸಾವಿರಾರು ದೇವಾಲಯಗಳ ಅರ್ಚಕರು ದೇವರ ಪೂಜೆಗಾಗಿ ಹಣ್ಣು, ಹೂವು, ಎಣ್ಣೆ, ಅಲಾಂಕರಕ್ಕೆ ಖರ್ಚು ಕೈಯಿಂದ ಹಾಕಿರ್ತಾರೆ ಕನಿಷ್ಠ ತಿಂಗಳಿಗೆ 20 ರಿಂದ 25 ಸಾವಿರ ರೂಪಾಯಿ ಪೂಜಾ ಖರ್ಚ ಬರುತ್ತಿದೆ.

ದೇವರ ಪೂಜೆಗಾಗಿ ಖರ್ಚು ಮಾಡಿರುವ ಹಣ ನೀಡಬೇಕು ಅಂದ್ರೂ ಅಧಿಕಾರಿಗಳಿಗೆ, ಗುಮಸ್ತರಿಗೆ, ಟ್ರೆಷರಿ ಆಫೀಸರ್‌ಗಳಿಗೆ ಹಣ ಕೊಡಬೇಕು ಹಣ ನೀಡಿದರೆ ಮಾತ್ರ ತಸ್ತಿಕ್ ಹಣ ಬಿಡುಗಡೆ ಮಾಡುತ್ತಿದ್ದು, ಮಧ್ಯವರ್ತಿಗಳ ಕಾಟ ದಬ್ಬಾಳಕೆಗೆ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರು ಪರದಾಡುವಂತಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ದಲ್ಲಾಳಿಗಳ ಕಮಿಷನ್ ಹಣಕ್ಕೆ ಬ್ರೇಕ್ ಹಾಕಿ ಮುಜರಾಯಿ ಇಲಾಖೆಯ ಅರ್ಚಕರ ಸಂಘಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.
ಒಟ್ಟಾರೆ ಸರ್ಕಾರ ಅಧಿಕಾರಕ್ಕೆ ಬಂದು ಮೂರೇ ಮೂರು ತಿಂಗಳು ಕಳೆದಿಲ್ಲ. ಆಗಲೇ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಕೇಳು ಬರುತ್ತಿರುವುದು ಸರ್ಕಾರ ಮುಜುಗರ ಉಂಟಾಗಿದೆ. ಹೀಗಾಗಿ ಇದನ್ನು ಈಗಲೇ ಎಚ್ಚತ್ತುಕೊಳ್ಳಲು ನೇರವಾಗಿ ಅರ್ಚಕರ ಖಾತೆಗೆ ಹಣ ಜಮಾ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಮಿಷನ್ ದಂಧೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಾ ಎಂದು ಕಾದು ನೋಡಬೇಕಿದೆ.












Click it and Unblock the Notifications