ಪ್ರಶಾಂತ್ ಮಾಡಾಳ್‌ಗೆ ಜೈಲೇ ಗತಿ, ಜಾಮೀನು ಅರ್ಜಿ ವಜಾ
ಬೆಂಗಳೂರು, ಏಪ್ರಿಲ್ 10; ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಲಂಚ ಪ್ರಕರಣದಲ್ಲಿ ಪ್ರಶಾಂತ್ ಮಾಡಾಳ್ ಜಾಮೀನು ಅರ್ಜಿ ವಜಾಗೊಂಡಿದೆ. ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪಗೆ ಸಹ ಈ ಪ್ರಕರಣದಲ್ಲಿ ಬಂಧಿತರಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಾರ್ಚ್ ತಿಂಗಳ 2ರಂದು ಪ್ರಶಾಂತ್ ಮಾಡಾಳ್ ಬಂಧಿಸಲಾಗಿತ್ತು.
ಪ್ರಶಾಂತ್ ಮಾಡಾಳ್ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೋಮವಾರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಏಪ್ರಿಲ್ 15ರಂದು ಮಾಡಾಳು ವಿರೂಪಾಕ್ಷಪ್ಪ ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿಯ ತೀರ್ಪನ್ನು ಕೋರ್ಟ್ ಪ್ರಕಟಿಸಲಿದೆ.

40 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಜಾಮೀನು ಅರ್ಜಿಯ ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಶಾಂತ್ ಮಾಡಾಳ್ ತನಿಖೆಗೆ ಸಹಕಾರ ನೀಡಿಲ್ಲ. ಆದ್ದರಿಂದ ಜಾಮೀನು ನೀಡಬಾರದು ಎಂದು ವಾದ ಮಂಡನೆ ಮಾಡಿದರು. ವಾದ ಆಲಿಸಿದ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದೆ.
ಕೆಎಸ್‌ಡಿಎಲ್‌ಗೆ ರಾಸಾಯನಿಕ ಪೂರೈಕೆ ಮಾಡುವ ಟೆಂಡರ್ ಮತ್ತು ವರ್ಕ್ ಆರ್ಡರ್ ನೀಡಲು ಪ್ರಶಾಂತ್ ಮಾಡಾಳ್ 80 ಲಕ್ಷ ರೂ. ಲಂಚ ಕೇಳಿದ್ದರು ಎಂಬುದು ಆರೋಪ. ಮಾರ್ಚ್ 2ರ ಗುರುವಾರ ಸಂಜೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಖಾಸಗಿ ಕಚೇರಿಯಲ್ಲಿ 40 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ಪ್ರಶಾಂತ್ ಮಾಡಾಳ್‌ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಹಣ ನೀಡಲು ಬಂದಿದ್ದ ನಿಕಲೋಸ್, ಗಂಗಾಧರ್ ಎಂಬುವವರನ್ನು ಬಂಧಿಸಲಾಗಿತ್ತು.
ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದರು. ಪುತ್ರನ ಬಂಧನವಾಗುತ್ತಿದ್ದಂತೆ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮಾಡಾಳ್ ಸಂಬಂಧಿ ಸಿದ್ದೇಶ್, ಅಕೌಟೆಂಟ್ ಸುರೇಂದ್ರ ಸಹ ಬಂಧಿಸಲಾಗಿದೆ. ಲೋಕಾಯುಕ್ತ ಪೊಲೀಸರು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಈ ಪ್ರಕರಣದಲ್ಲಿ ಮೊದಲ ಆರೋಪಿ ಎಂದು ಎಫ್‌ಐಆರ್ ದಾಖಲು ಮಾಡಿದ್ದರು.

ಆದರೆ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಸಲ್ಲಿಕೆ ಮಾಡಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಮಾರ್ಚ್ 28ರಂದು ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಸಹ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಅದರ ವಿಚಾರಣೆ ಪೂರ್ಣಗೊಳಿಸಿ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
6 ಕೋಟಿ ನಗದು ಪತ್ತೆಯಾಗಿತ್ತು; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಖಾಸಗಿ ಕಚೇರಿಯಲ್ಲಿನ ದಾಳಿ ಬಳಿಕ ಲೋಕಾಯುಕ್ತ ಪೊಲೀಸರು ಪ್ರಶಾಂತ್ ಮಾಡಾಳ್ ನಿವಾಸದ ಮೇಲೆ ದಾಳಿ ಮಾಡಿದ್ದರು. ಆಗ ದಾಖಲೆ ಇಲ್ಲದ 6 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಚನ್ನಗಿರಿಯಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆಯೂ ದಾಳಿ ಮಾಡಲಾಗಿತ್ತು.
ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿಯಾಗಿದ್ದರು. ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಂದೆ ಅಧ್ಯಕ್ಷರಾಗಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್‌ನಲ್ಲಿ ಹಸ್ತಕ್ಷೇಪ ಮಾಡಿದ್ದರು ಎಂಬುದು ಆರೋಪ. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ಮೇಲೆ ಆರೋಪಗಳನ್ನು ಮಾಡುತ್ತಿದೆ.
ಇನ್ನು ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮೇ 10ರಂದು ಚುನಾವಣೆ ನಡೆಯಲಿದೆ. ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಅಥವ ಅವರ ಕುಟುಂಬ ಸದಸ್ಯರಿಗೆ ಈ ಬಾರಿಯ ಚುನಾವಣೆಯ ಟಿಕೆಟ್ ಸಿಗಲಿದೆಯೇ? ಎಂದು ಕಾದು ನೋಡಬೇಕು. ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ತಡರಾತ್ರಿ ಅಥವ ಬುಧವಾರ ಪ್ರಕಟವಾಗಲಿದೆ.












Click it and Unblock the Notifications