'ಡಿ.ಜೆ ಹಾಕಿಯೇ ಗಣೇಶೋತ್ಸವ ಮಾಡಿ': ಹೀಗಂದಿದ್ಯಾರು?
ಗಣೇಶೋತ್ಸವದ ಅಂಗವಾಗಿ ಭದ್ರತಾ ದೃಷ್ಟಿಯಿಂದ ರಾಜ್ಯ ಪೊಲೀಸರು ಡಿ.ಜೆ ಬಳಕೆಗೆ ಬ್ರೇಕ್ ಹಾಕಿದ್ದಾರೆ. ಅದರಂತೆ ಗಣೇಶೋತ್ಸವ ಹಾಗೂ ವಿಸರ್ಜನೆ ವೇಳೆ ಪ್ರತಿಷ್ಠಾಪನಾ ಸಮಿತಿಗಳು ಡಿ.ಜೆ ಬಳಸಬಾರದು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ. ಈ ವಿಚಾರವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಗಣೇಶೋತ್ಸವದ ಸಂದರ್ಭದಲ್ಲಿ ಡಿ.ಜೆ ಬಳಸಲು ಸರ್ಕಾರ ಹಾಗೂ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ಅವರು, ಗಣೇಶೋತ್ಸವವನ್ನು ವರ್ಷಕ್ಕೊಮ್ಮೆ ಆಚರಿಸುತ್ತೇವೆ. ಈ ವೇಳೆ ಡಿ.ಜೆ ಬಳಸುವುದು ಹೊಸದೇನಲ್ಲ. ಆದರೆ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವು ಪೊಲೀಸರನ್ನು ಛೂ ಬಿಟ್ಟು ಗಣೇಶೋತ್ಸವಕ್ಕೆ ತೊಂದರೆ ಕೊಡುತ್ತಿದೆ ಎಂದಿದ್ದಾರೆ.

ತುಮಕೂರು ಜಿಲ್ಲೆಯಲ್ಲೂ ಹಿಂದೂ ಸಂಘಟನೆಗಳಿಗೆ ಈ ವಿಚಾರದಲ್ಲಿ ರಾಜ್ಯ ಸರ್ಕಾರ ತೊಂದರೆ ಕೊಡುತ್ತಿದೆ. ಏನಾದರೂ ಆಗಲಿ, ಡಿ.ಜೆ ಬಳಸುವುದನ್ನು ಯಾರೂ ನಿಲ್ಲಿಸಬೇಡಿ. ಎಂದಿನಂತೆ ಡಿ.ಜೆ ಹಾಕಿ ಗಣೇಶೋತ್ಸವ ಆಚರಿಸಿರಿ ಎಂದು ಉತ್ಸವ ಸಮಿತಿಗಳಿಗೆ ಕರೆ ನೀಡಿದ್ದಾರೆ.
ಗಣೇಶೋತ್ಸವದ ವೇಳೆ ಡಿ.ಜೆ ಹಾಕಬಾರದು, ಇದು ಸುಪ್ರೀಂಕೋರ್ಟ್‌ನ ಆದೇಶ ಅಂತೆಲ್ಲ ಜೋರು ಮಾಡುತ್ತಾರೆ. ಆದರೆ ಮಸೀದಿಗಳಲ್ಲಿ ಮೈಕ್‌ಗಳಲ್ಲಿ ಆಜಾನ್ ಕೂಗುತ್ತಾರೆ. ಅದಕ್ಕೆಲ್ಲ ಸುಪ್ರೀಂಕೋರ್ಟ್ ಆದೇಶ ಅನ್ವಯಿಸುವುದಿಲ್ಲವೇ? ಈ ಬಗ್ಗೆ ಏಕೆ ಪೊಲೀಸರು ಮಾತನಾಡುವುದಿಲ್ಲ? ಕೇವಲ ಹಿಂದೂಗಳ ಡಿ.ಜೆ ಬಗ್ಗೆ ಯಾಕೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಹಿಂದೂಗಳು ಮೃದು ಸ್ವಭಾವದವರು ಎಂದು ನಮ್ಮ ಆಚರಣೆಗಳಿಗೆ ಪ್ರತಿ ಬಾರಿಯೂ ಅಡಚಣೆ ಮಾಡುತ್ತಲೇ ಇದ್ದಾರೆ. ಈ ತಾರತಮ್ಯ ನೀತಿಯನ್ನು ನಾನು ಖಂಡಿಸುತ್ತೇನೆ. ನೀವು ನಿಜವಾಗಿಯೂ ಸುಪ್ರೀಂಕೋರ್ಟ್ ಆದೇಶವನ್ನು ಕಾರ್ಯರೂಪಕ್ಕೆ ತರುವುದೇ ಆದರೆ, ಮಸೀದಿಗಳಲ್ಲಿರುವ ಮೈಕ್‌ಗಳನ್ನು ಕೂಡ ಕೂಡಲೇ ತೆರವು ಮಾಡಿ ನೋಡೋಣʼ ಎಂದು ಸವಾಲು ಹಾಕಿದ್ದಾರೆ.
ಗಣೇಶ ಕೂರಿಸಲು ಏನೆಲ್ಲ ನಿಯಮಗಳಿವೆ?: ಗಣೇಶ ಹಬ್ಬ ಆಯೋಜಿಸುವವರಿಗೆ ಪೊಲೀಸರು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದಾರೆ. ಅದೇನಂದ್ರೆ, ವಿವಾದಿತ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಯಾವುದೇ ಅಪರಾಧಗಳು ನಡೆದರೆ, ಅದಕ್ಕೆ ಆಯೋಜಕರೇ ಜವಾಬ್ದಾರಿ ಹೊರಬೇಕು.
ಗಣೇಶನನ್ನು ಕೂರಿಸುವ ಸಂಘದವರು ತಮ್ಮ ಸಂಪೂರ್ಣ ವಿವರಗಳನ್ನು ಸ್ಥಳೀಯ ಪೊಲೀಸ್ ಸ್ಟೇಷನ್‌ಗಳಲ್ಲಿ ದಾಖಲಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಸಂಬಂಧಪಟ್ಟ ಠಾಣೆಯಿಂದ ಪರ್ಮಿಷನ್ ಪಡೆಯಬೇಕು. ಸಾರ್ವಜನಿಕರು ಹಾಗೂ ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿ ಗಣೇಶ ಕೂರಿಸುವಂತಿಲ್ಲ.
ಚಪ್ಪರ, ಶಾಮಿಯಾನ ಹಾಕಲು ಪರವಾನಗಿ ಪಡೆದುಕೊಳ್ಳಬೇಕು. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಸೌಂಡ್ ಬಾಕ್ಸ್‌ಗಳ ಬಳಕೆಗೆ ಅನುಮತಿ ಪಡೆಯಬೇಕು. ಯಾವುದೇ ಡಿ.ಜೆ. ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶವಿಲ್ಲ. ಎಲ್ಲೆಂದರಲ್ಲಿ ಪಟಾಕಿಗಳನ್ನು ಸಿಡಿಸಬಾರದು, ಕರ್ಪೂರಗಳನ್ನು ಹಚ್ಚಬಾರದು. ಗಣೇಶ ವಿಸರ್ಜನೆಯ ಮೆರವಣಿಗೆಯು ರಾತ್ರಿ 10ರೊಳಗೆ ಮುಗಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications