Actor Prakash Raj: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ; ಸಹಕರಿಸಿದ ಹಾಲಿ, ಮಾಜಿಗಳಿಗೆ ಶಿಕ್ಷೆಯಿಲ್ಲವೇ?: ಪ್ರಕಾಶ್ ರಾಜ್
ಬೆಂಗಳೂರು, ಆಗಸ್ಟ್ 04: ಜೆಡಿಎಸ್ ಮುಖಂಡ ಹಾಗೂ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ದೋಷಿ ಎಂದು ಪರಿಗಣಿಸಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಕುಲಾಸೆ ಆಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿತ್ತು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 11 ಲಕ್ಷ ದಂಡ ವಿಧಿಸಿದೆ.
ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯನ್ನು ವಿಶೇಷ ನ್ಯಾಯಾಲಯ ಪ್ರಕಟಿಸುತ್ತಿದ್ದಂತೆ ಬಹುಭಾಷಾ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟವಾದ ಬಳಿಕ ತನ್ನ ಎಕ್ಸ್ ಖಾತೆಯಲ್ಲಿ ಪರೋಕ್ಷವಾಗಿ ಕುಟುಕಿರುವ ಪ್ರಕಾಶ್ ರಾಜ್ ಅವರು, ಪ್ರಜ್ವಲ್ ಈ ಕೃತ್ಯವನ್ನು ಸಹಕರಿಸಿದವರಿಗೆ ಶಿಕ್ಷೆ ಇಲ್ಲವೆ ಎಂದು ಪ್ರಶ್ನೆಯನ್ನು ಮಾಡಿದ್ದಾರೆ? ಇದೀಗ ನಟ ಪ್ರಕಾಶ್ ರಾಜ್ ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ರೈತರ ಪರ ಹೋರಾಟದಲ್ಲಿಯೂ ಇತ್ತೀಚೆಗೆ ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕಿ ರೈತರ ಸಮಸ್ಯೆಯನ್ನ ಬಗೆಹರಿಸುವಲ್ಲಿಯೂ ಯಶಸ್ವಿಯಾಗಿದ್ದರು. ಇದೀಗ ಮಾಜಿ ಸಂಸದ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತೀರ್ಪು ಪ್ರಕಟವಾಗುತ್ತಿದ್ದಂತೆ, ಅವರಿಗೆ ಸಹಕರಿಸಿದವರಿಗೂ ಶಿಕ್ಷೆಯನ್ನು ನೀಡಬೇಕು ಎಂದು ಪ್ರರೋಕ್ಷವಾಗಿ ಟ್ವೀಟ್ (ಎಕ್ಸ್ ಪೋಸ್ಟ್) ಮಾಡಿದ್ದಾರೆ.
"ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವೇ?..ಯುವರ್ ಆನರ್, ಪ್ರಜ್ವಲ್ ಮಾಡಿದ ಅಮಾನುಷ ಅಪರಾಧಗಳಿಗೇನೋ ತಕ್ಕ ಶಿಕ್ಷೆ ಆಗಿದೆ. ಆದರೆ.. ಆ ಅಪರಾಧಗಳನ್ನು ಗೊತ್ತಿದ್ದೂ ಮುಚ್ಚಿಟ್ಟ.. ಸಂತ್ರಸ್ತರನ್ನು ಹೆದರಿಸಿದ.. ಸಾಕ್ಷಿ ನಾಶ ಮಾಡಲು ಸಹಕರಿಸಿದ.. ಹಾಲಿ, ಮಾಜಿಗಳಿಗೆ.. ಪ್ರಭಾವಿಗಳಿಗೆ ಶಿಕ್ಷೆಯಿಲ್ಲವೇ???" ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ಮೂಲಕ ಪ್ರಜ್ವಲ್ ರೇವಣ್ಣಗೆ ಅಷ್ಟೇ ಅಲ್ಲ. ಇಂತಹ ಅಪರಾಧ ಎಸಗಲು ಸಹಾಯ ಮಾಡಿದವರಿಗೆ ಶಿಕ್ಷೆಯನ್ನು ನೀಡಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಹಾಲಿ, ಮಾಜಿಗಳು, ಪ್ರಭಾವಿಗಳು ಎಂದು ಹೇಳಿದ್ದಾರೆಯೇ ವಿನ: ಸಹಕಾರ ನೀಡಿದವರು ಯಾರು? ಅನ್ನೋದನ್ನು ನೇರವಾಗಿ ಸಾಮಾಜಿಕ ಹೋರಾಟಗಾರ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಹೇಳಿಲ್ಲ. ಹಲವು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪುತ್ರ ಹಾಗೂ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿ ಇದ್ದಾರೆ. ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ನಿರಾಕರಣೆ ಮಾಡುತ್ತಲೇ ಬಂದಿತ್ತು. ಈ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಅವರ ಕೇಸ್ ಎಷ್ಟು ಗಂಭೀರ ಅನ್ನೋದು ಜಾಹೀರಾಗಿತ್ತು. ಇದೀಗ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದ್ದು, 11.5 ಲಕ್ಷ ರೂಪಾಯಿ ದಂಡದ ವಿಧಿಸಿದೆ, ಆ ಹಣವನ್ನ ಸಂತ್ರಸ್ತೆಗೆ ನೀಡುವುದಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.












Click it and Unblock the Notifications