ಪೆನ್ ಡ್ರೈವ್ ದೇವೇಗೌಡರ ಕುಟುಂಬದ ಆಸ್ತಿ, ತೆನೆಹೊತ್ತ ಮಹಿಳೆ ಈಗ ಪೆನ್ ಡ್ರೈವ್ ಹೊರುವಂತಹ ಪರಿಸ್ಥಿತಿ ಬಂದಿದೆ: ಡಿ ಕೆ ಸುರೇಶ್
ಬೆಂಗಳೂರು. ಮೇ 02: ನಾನು ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಪೆನ್ ಡ್ರೈವ್ ಈ ಕುಟುಂಬದ ಆಸ್ತಿ, ತೆನೆಹೊತ್ತ ಮಹಿಳೆ ಈಗ ಪೆನ್ ಡ್ರೈವ್ ಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಜನ ಹಾಡಿ, ಹೊಗಳುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಲೇವಡಿ ಮಾಡಿದರು.
ಅವರ ಕುಟುಂಬವನ್ನ ಇಡೀ ಪ್ರಪಂಚ ಕೊಂಡಾಡುತ್ತಿದೆ, ಹೊಗಳುತ್ತಿದೆ. ಜನರು ಹೇಳಿದ ಮಾತನ್ನು ನಾನು ಹೇಳುತ್ತಿದ್ದೇನೆ. ಅವರ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದರೆ ನಾಲ್ಕು ಮಾತು ನಮ್ಮನ್ನು ಬೈದುಕೊಳ್ಳಲಿ. ಆದರೆ ನನಗೆ ಈ ರಾಜ್ಯದ ಹೆಣ್ಣು ಮಕ್ಕಳ ಮಾನವನ್ನು ಕಾಪಾಡುವ ಕೆಲಸ ಮೊದಲು ಆಗಬೇಕಿದೆ.

ಮಾಜಿ ಪ್ರಧಾನಿಗಳು ಸಣ್ಣ, ಸಣ್ಣ ವಿಚಾರಕ್ಕೂ ಮಾಧ್ಯಮಗೋಷ್ಠಿ ನಡೆಸಿ ಹೇಳಿಕೆ ನೀಡಿ, ಪಿಟಿಷನ್ ಬರೆಯುತ್ತಾರಲ್ಲವೇ? ಅದೇ ರೀತಿ ಈ ವಿಚಾರವಾಗಿಯೂ ಹೇಳಿಕೆ ನೀಡಲಿ ಹಾಗು ನೂಲಿನಂತೆ ಸೀರೆ ಎನ್ನುವ ಮಾತನ್ನು ಅರ್ಥೈಸಲಿ." ಪೆನ್ ಡ್ರೈವ್ ವಿಚಾರದಲ್ಲಿ ಬಿಜೆಪಿಯನ್ನು ಗುರಿ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾತನಾಡಿ, ಮೈತ್ರಿಯಲ್ಲಿ ಮೋದಿ ಅವರೂ ಪಾಲುದಾರರು. ಅವರು ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಬೇಕು. ಘಟನೆಯ ಕುರಿತು ಕ್ರಮ ತೆಗೆದುಕೊಳ್ಳಲು ಒತ್ತಾಯ ಮಾಡಬೇಕು.
ನೇಹಾ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಏಕೆ ಗುರಿ ಮಾಡಲಾಗುತ್ತಿದೆ ಎಂದು ನಾವು ಪ್ರಶ್ನೆ ಮಾಡಬಹುದಲ್ಲವೇ? ತಾಳಿ ಭಾಗ್ಯದ ವಿಚಾರವಾಗಿ ಚರ್ಚೆ ಮಾಡುತ್ತಾರೆ. ತಾಳಿ ಭಾಗ್ಯಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವ ಸಂಬಂಧವಿದೆ. ಬಿಜೆಪಿ ಮಾತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಈ ದೇಶದ ಪ್ರಧಾನಮಂತ್ರಿ ಎನ್ ಡಿಎ ಮುಖ್ಯಸ್ಥರು. ತಮ್ಮ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ಆದ ಕಾರಣ ಅವರು ಸ್ಪಷ್ಟೀಕರಣ ಕೊಡಬೇಕಾಗುತ್ತದೆ.
ಮೋದಿ ಅವರು ಕರ್ನಾಟಕದ ಬೇರೆ, ಬೇರೆ ವಿಚಾರಗಳನ್ನು ತೆಗೆದುಕೊಂಡು ರಾಜ್ಯದ ಮಾನ ಹರಾಜು ಹಾಕುತ್ತಾರೆ. ಆದರೆ ಈ ವಿಚಾರದ ಕುರಿತು ಏಕೆ ಮಾತನಾಡುತ್ತಿಲ್ಲ. ಇದಕ್ಕೆ ನೇರ ಹೊಣೆಗಾರರು ಪ್ರಧಾನಮಂತ್ರಿಗಳು. ಸೆಕ್ಸ್ ಹಗರಣದ ಬಗ್ಗೆ ಪ್ರಧಾನಿ ಅವರಿಗೆ ಈ ಮೊದಲೇ ತಿಳಿದಿತ್ತಲ್ಲವೇ? ಪಕ್ಷದ ಸ್ಥಳೀಯ ಮುಖಂಡರು ಪತ್ರ ಬರೆದು ಈ ಮೊದಲೇ ತಿಳಿಸಿದ್ದಾರಲ್ಲವೇ? ಸ್ಕ್ರೀನಿಂಗ್ ಕಮಿಟಿಯಲ್ಲಿಯೂ ಇದರ ಬಗ್ಗೆ ಚರ್ಚೆಯಾಗಿದೆ. ಕುಮಾರಸ್ವಾಮಿ ಅವರೂ ಸಹ ಟಿಕೆಟ್ ಕೊಡುವುದು ಬೇಡ ಎಂದು ಹೇಳಿದ್ದಾರೆ. ಆದರೂ ಟಿಕೆಟ್ ಕೊಟ್ಟು, ಪ್ರಚಾರವನ್ನೂ ಮಾಡಿದ್ದಾರೆ ಎಂದರು.
ಪೆನ್ ಡ್ರೈವ್ ರುವಾರಿ ಕಾರ್ತಿಕ್ ಅವರನ್ನು ಮಲೇಷ್ಯಾಗೆ ಪರಾರಿಯಾಗಲು ರಾಜ್ಯ ಸರ್ಕಾರ ಕಾರಣ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಅವರು ಅಂತರರಾಷ್ಟ್ರೀಯ ಏಜೆನ್ಸಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಎಲ್ಲಾ ಮಾಹಿತಿಯೂ ಅವರಿಗೆ ಗೊತ್ತಿರುತ್ತದೆ. ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ಮುಖ್ಯ ವಿಚಾರದ ಹಾದಿ ತಪ್ಪಿಸಲು ಏನೇನೋ ಹೇಳುತ್ತಿರುತ್ತಾರೆ. ಮೊದಲು ಹಾಸನದ ಹೆಣ್ಣು ಮಕ್ಕಳ ಮಾನ ರಕ್ಷಣೆಗೆ ಏನು ಮಾಡಬೇಕು. ಇವರ ಕುಟುಂಬದ ಸದಸ್ಯನಿಂದ ಆಗಿರುವ ತಪ್ಪಿಗೆ ಏನು ಮಾಡಬೇಕು ಎಂದು ಹೇಳಬೇಕು. ಇದನ್ನು ಮರೆಮಾಚಿ ಇತರೇ ವಿಚಾರಗಳನ್ನು ಹೇಳುತ್ತಿರುತ್ತಾರೆ. ಇದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಚಾರ ಎಂದು ತಿಳಿಸಿದರು












Click it and Unblock the Notifications