ಪೆನ್ ಡ್ರೈವ್ ಮೊದಲು ತಲುಪಿದ್ದೇ ಡಿಕೆ ಶಿವಕುಮಾರ್ ಗೆ; ಕೊಟ್ಟಿದ್ದು ಯಾರು ಗೊತ್ತಾ? ಸತ್ಯ ಬಿಚ್ಚಿಟ್ಟ ಕುಮಾರಸ್ವಾಮಿ

ಬೆಂಗಳೂರು,ಮೇ 21: ಮಾಜಿ ಪ್ರಧಾನಿ ದೇವೆಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಪೆನ್ ಡ್ರೈವ್ ಸಂಚಿನಲ್ಲಿ ನೇರವಾಗಿ ಭಾಗಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಬೆಂಗಳೂರಿನ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆಡಿಯೋ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್ ಪಾತ್ರ ಸ್ಪಷ್ಟವಾಗಿದೆ. ಅವರು ರಾಜೀನಾಮೆ ಕೊಡಲೇಬೇಕು. ಇಲ್ಲವಾದರೆ ಸಿಎಂ ಅವರೇ ಸಂಪುಟದಿಂದ ವಜಾ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Prajwal Case Kumaraswamy demanded that DK Shivakumar should resign immediately

ಪೆನ್ ಡ್ರೈವ್ ಸೃಷ್ಟಿಕರ್ತ ಕಾರ್ತಿಕ್ ಗೌಡ ಮೊತ್ತ ಮೊದಲು ಈ ವಿಡಿಯೋಗಳನ್ನು ತಂದು ಕೊಟ್ಟಿದ್ದೆ ಡಿಕೆಶಿಗೆ. ಆ ಸಂದರ್ಭದಲ್ಲಿ ಅವರ ಪಕ್ಷದ ಹಾಸನದ ಅಭ್ಯರ್ಥಿಯೂ ಇದ್ದರು. ಪ್ರಕರಣದಲ್ಲಿ ಇಷ್ಟೆಲ್ಲ ಭಾಗಿಯಾದ ಮೇಲೂ ಅವರನ್ನು ಸಂಪುಟದಲ್ಲಿ ಮುಂದುವರಿಸುವುದು ಸರಿಯಲ್ಲ. ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ. ಸರ್ಕಾರ ಇಂತಹ ತಪ್ಪಿತಸ್ಥರಿಗೆ ರಕ್ಷಣೆ ಕೊಡಬಾರದು, ದುರಂತಕ್ಕೆ ಸಿಎಂ ಸೇರಿದಂತೆ ಇಡಿ ಸರ್ಕಾರವೇ ಅವರ ರಕ್ಷಣೆಗೆ ನಿಂತಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.

ರಾಜಕೀಯ ಸ್ವಾರ್ಥಕ್ಕಾಗಿ, ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಬೇಕೆಂಬ ಕಾರಣಕ್ಕೆ ಡಿಕೆಶಿ ಹೂಡಿರುವ ಸಂಚು ಏನು ಎಂಬುದು ಜಗಜ್ಜಾಹೀರಾಗಿದೆ. ಇಡೀ ದೇಶವೇ ಆ ವ್ಯಕ್ತಿಯ ಹೀನ ಕೆಲಸದ ಬಗ್ಗೆ ಮಾತನಾಡುತ್ತಿದೆ. ನೊಂದ ಮಹಿಳೆಯರ ಜೀವನಕ್ಕೆ ಕೊಳ್ಳಿ ಇಟ್ಟ ಈ ವ್ಯಕ್ತಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇಂದು ವೇಳೆ ಸರ್ಕಾರ ಈ ಕಳಂಕಿತ ಸಚಿವನನ್ನು ರಕ್ಷಣೆ ಮಾಡಿದರೆ ಭಾರೀ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ದೇವರಾಜೇಗೌಡ, ಶಿವರಾಮೇಗೌಡ ನಡುವಿನ ಮೊಬೈಲ್ ಸಂಭಾಷಣೆ ಹೊರಬಂದಾಗಿನಿಂದ ಡಿಕೆಶಿ ಮಾತನಾಡುತ್ತಿಲ್ಲ. ಅದಕ್ಕೆ ನಾನು ಕೇಳಿದ್ದು, ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು. ಇದಕ್ಕೆ ನಾವು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ. ನಾನು ಮೊದಲಿನಿಂದಲೂ ಹೇಳಿದ್ದೇನೆ, ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು ಎಂದಿದ್ದೇನೆ. ತಪ್ಪಿತಸ್ಥರನ್ನು ರಕ್ಷಣೆ ಮಾಡಲು ನಾವು ಹೋಗುವುದಿಲ್ಲ. ಆದರೆ, ಈ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡರೆ ದೇವೆಗೌಡರ ಕುಟುಂಬವನ್ನು ರಾಜಕೀಯವಾಗಿ ನಿರ್ನಾಮ ಮಾಡಬೇಕು ಎಂದು ಸಂಚು ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಪೆನ್ ಡ್ರೈವ್ ಸೃಷ್ಟಿ ಮಾಡಿ ಅದನ್ನೆಲ್ಲಾ ಹೊರಗೆ ತಂದು ಮಹಿಳೆಯರಿಗೆ ಕಂಟಕರಾದವರೇ ಇವತ್ತು ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಎನ್ ಡಿಎ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷವನ್ನು ಯಾವಾಗ ಹೊರಕ್ಕೆ ಹಾಕುತ್ತೀರಿ ಎಂದು ಕೇಳುತ್ತಾರೆ. ಆಡಿಯೋ ಸಂಭಾಷಣೆಯಲ್ಲಿ ಈ ಅಂಶವೂ ಇದೆ. ಅಲ್ಲಿಗೆ ಇವರ ದುರುದ್ದೇಶ ಏನು ಎನ್ನುವುದು ಅರ್ಥ ಆಯಿತಲ್ಲವೇ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.

ಈ ಪ್ರಕರಣಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಡಿಸಿ ಅದನ್ನು ದೇಶ ವಿದೇಶದಲ್ಲಿಯೂ ಹರಡುವಂತೆ ಮಾಡಿದವರೇ ಕಾಂಗ್ರೆಸ್ ನವರು. ಬಿಜೆಪಿ ಜೆಡಿಎಸ್ ಮೈತ್ರಿ ಆಗದೇ ಇದ್ದಿದ್ದರೆ ಅವರು ರಾಜ್ಯದಲ್ಲಿ 20 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಭ್ರಮೆಯಲ್ಲಿ ಇದ್ದರು. ಅವರ ಕನಸು ನುಚ್ಚು ನೂರಾಗಿದೆ. ಚುನಾವಣೆ ಫಲಿತಾಂಶ ಹೇಗೆ ಬರುತ್ತದೆ ಎನ್ನುವ ಹತಾಶೆಯಲ್ಲಿ ಅವರು ಇದ್ದಾರೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡ ದಿನವೇ ಅವರಿಗೆ ಅರ್ಥವಾಯಿತು, ನಮ್ಮ ಓಟಕ್ಕೆ ‌ಕಡಿವಾಣ ಬಿತ್ತು ಎಂದುಕೊಂಡರು. ಈ ಆತಂಕಕ್ಕೆ ಒಳಗಾಗಿ ಈ ಪ್ರಕರಣಕನ್ನು ಸೃಷ್ಟಿಸಿ ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದ್ದೆ ಇದೇ ಡಿ.ಕೆ.ಶಿವಕುಮಾರ್ ಎಂದು ಅವರು ನೇರ ಆರೋಪ ಮಾಡಿದರು.

ಡಿ.ಕೆ.ಶಿವಕುಮಾರ್ ಮತ್ತು ಇವರ ಪಟಾಲಂಗಳು ಇದನ್ನು ಮಾಡಿದ್ದಾರೆ. 'ಸೀಡಿ ಶಿವು' ಅವರೇ ಇದನ್ನೆಲ್ಲ ಮಾಡಿದ್ದಾರೆ. ಆದರೆ, ಇದುವರೆಗೂ ಯಾರ ಮೇಲೆಯೂ ಕ್ರಮ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಕಟುವಾಗಿ ಟೀಕಿಸಿದರು. ಈ ನೆಲದ ಕಾನೂನಿನ ಪ್ರಕಾರ ಯಾರೇ ಆದರೂ ನ್ಯಾಯಕ್ಕೆ ತಲೆ ಬಾಗಲೇಬೇಕು. ನಿತ್ಯವೂ ಹಣ, ಅಧಿಕಾರದ ದುರುಪಯೋಗ ಮಾಡಿಕೊಂಡು ಮೆರೆಯುವ ವ್ಯಕ್ತಿಗಳು ಬಹಳ ದಿನ ಮೆರೆಯುವುದಕ್ಕೆ ಸಾಧ್ಯ ಇಲ್ಲ. ಪ್ರತಿಯೊಂದಕ್ಕೂ ಅಂತಿಮ ದಿನಗಳು ಬಂದೇ ಬರುತ್ತವೆ ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ಪೆನ್ ಡ್ರೈವ್ ಹಂಚಿಕೆ ಪ್ರಕರಣದ ತನಿಖೆ ಸಿಬಿಐ ಕೊಡಲಿ ಎನ್ನುವ ಉದ್ದೇಶದಿಂದ ಯಾರೋ ಒಬ್ಬರು ಹೈಕೋರ್ಟ್ ಮೊರೆ ಹೋಗುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ನಾವು ಕೂಡ ಏನು ಮಾಡಬೇಕು ಎಂಬ ಬಗ್ಗೆ ಕಾನೂ‌ನು ತಜ್ಞರ ಜತೆ ಚರ್ಚೆ ಮಾಡುತ್ತೇವೆ. ಈ ವಿಷಯದಲ್ಲಿ ಕಾನೂನು ಚೌಕಟ್ಟಿನಲ್ಲಿ, ದೇಶದ ಕಾನೂನು ವ್ಯವಸ್ಥೆಯಲ್ಲಿ ಸತ್ಯಾಂಶ ಹೊರಗೆ ತರಲು ಏನೇನು ಕ್ರಮ ತೆಗೆದುಕೊಳ್ಳಬೇಕೋ ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ‌ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+