ಬಿಜೆಪಿಯಲ್ಲಿ ಬಿರುಕು: ಭಗವಂತ ಖೂಬಾಗೆ ಟಿಕೆಟ್ ನೀಡದಂತೆ ಬಿವೈ ವಿಜಯೇಂದ್ರ ಕಾಲಿಗೆ ಬಿದ್ದ ಮಾಜಿ ಸಚಿವ
ಬೀದರ್, ಜನವರಿ 30: ರಾಜ್ಯ ಬಿಜೆಪಿಯಲ್ಲಿ ಸ್ವಪಕ್ಷದ ನಾಯಕರ ನಡುವೆ ಬಹಿರಂಗ ಅಸಮಾಧಾನ ಜೋರಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಿಂದಲೂ ಮಾಜಿ ಸಚಿವ ಪ್ರಭು ಚವ್ಹಾಣ್ ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ನಡುವಿನ ಸಮರ ಜೋರಾಗಿದೆ.
ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಭಗವಂತ್ ಖೂಬಾ ಅವರು ನನ್ನನ್ನು ಕೊಲೆ ಮಾಡಿ ಆರು ತಿಂಗಳಲ್ಲಿ ಉಪ ಚುನಾವಣೆ ನಡೆಸಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದರು. ಇದೀಗ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಎಲ್ಲಾ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬೀದರ್ ಸಂಸದರೂ ಆಗಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮತ್ತೆ ಟಿಕೆಟ್ ನೀಡದಂತೆ ಮಾಜಿ ಸಚಿವ ಪ್ರಭು ಚೌಹಾಣ್ ಒತ್ತಾಯಿಸುತ್ತಲೇ ಇದ್ದಾರೆ. ಸೋಮವಾರ ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಕಾಲಿಗೆ ಬಿದ್ದ ಪ್ರಭು ಚೌಹಾಣ್, ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವಂತೆ ಮನವಿ ಮಾಡುವ ಮೂಲಕ ಪರೋಕ್ಷವಾಗಿ ಭಗವಂತ್ ಖೂಬಾಗೆ ಟಿಕೆಟ್ ನೀಡುದಂತೆ ಸಂದೇಶ ರವಾನಿಸಿದ್ದಾರೆ.
ಸೋಮವಾರ ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಭಾಗಿಯಾಗಿದ್ದರು. ಈ ವೇಳೆ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಮಾಜಿ ಸಚಿವ ಪ್ರಭು ಚವ್ಹಾಣ್ ವಿಜಯೇಂದ್ರರ ಕಾಲಿಗೆ ಬಿದ್ದು, ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಸಾಮಾನ್ಯ ಕಾರ್ಯಕರ್ತನಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಭಗವಂತ್ ಖೂಬಾ ಸಂಸದರಾಗಿರುವ ಬೀದರ್‌ನಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ವಶವಾಗಿದೆ. ಆದರೆ, ಬಿಜೆಪಿ ಶಾಸಕರು ಖೂಬಾಗೆ ಟಿಕೆಟ್ ನೀಡುವುದನ್ನು ವಿರೋಧಿಸಲಾಗುತ್ತಿದೆ. ಭಗವಂತ ಖೂಬಾ ಅವರು ಬಿಜೆಪಿ ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಫ್ರಭು ಚವ್ಹಾಣ್ ಅವರು ಸಾಕಷ್ಟು ಬಾರೀ ಭಗವಂತ್ ಖೂಬಾ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸಭಾ ಚುನಾವಣೆ ಸಮಯದಲ್ಲಿ ನಮ್ಮ ಭವಿಷ್ಯ ಹಾಳುಮಾಡುವ ಪ್ರಯತ್ನ ನಡೆಸಿದ್ದರು ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದರು. ಮಾಜಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಶರಣು ಸಲಗರ ಕೂಡ ಬೆಂಬಲವಾಗಿ ಮಾತನಾಡಿ ಭಗವಂತ್ ಖೂಬಾ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದರು.
ಮುಂಬರುವ ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ಇತ್ತೀಚೆಗೆ ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಬೀದರ್ ಸಂಸದರೂ ಆಗಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮರು ಟಿಕೆಟ್ ನೀಡುವುದನ್ನು ವಿರೋಧಿಸುತ್ತಿರುವ ಪಕ್ಷದ ನಾಯಕರೊಂದಿಗೆ ವಿಜಯೇಂದ್ರ ಸಭೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಇನ್ನೂ ಸಭೆಯಲ್ಲಿ ಕರಡಿ ಸಂಗಣ್ಣ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮತ್ತೆ ಟಿಕೆಟ್ ನೀಡುವುದನ್ನು ಪಕ್ಷದ ಪದಾಧಿಕಾರಿಗಳು ವಿರೋಧಿಸಿದ್ದರು.












Click it and Unblock the Notifications