ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ?
ಬೆಂಗಳೂರು, ಮಾರ್ಚ್ 23; ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಏಕೆಯಾಗಿದೆ. ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯಾಗುವ ನಿರೀಕ್ಷೆ ಇದೆ.
ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ) ಈಗಾಗಲೇ ಫೆಬ್ರವರಿ 14 ರಿಂದ 28ರ ತನಕ ಎಸ್ಕಾಂಗಳಲ್ಲಿ ವಿದ್ಯುತ್ ದರ ಏರಿಕೆ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದೆ. ಎಲ್ಲಾ ಎಸ್ಕಾಂಗಳು ಸಹ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ.
ಸಂಘ ಸಂಸ್ಥೆಗಳು, ಜನರು ಕೋವಿಡ್ ಪರಿಸ್ಥಿತಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಆದ್ದರಿಂದ ದರ ಏರಿಕೆ ಮಾಡಬಾರದು ಎಂದು ಕೆಇಆರ್‌ಸಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಎಸ್ಕಾಂಗಳು ನಷ್ಟ ಅನುಭವಿಸುತ್ತಿದ್ದು, ದರ ಏರಿಕೆ ಅನಿವಾರ್ಯವಾಗಿದೆ.

ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಸಂಸ್ಥೆಗಳು ಪ್ರತಿ ಯೂನಿಟ್‌ಗೆ 1.50 ರಿಂದ 2 ರೂ. ತನಕ ದರ ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಕೆಇಆರ್‌ಸಿಗೆ ಮನವಿ ಮಾಡಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಪ್ರತಿ ಯೂನಿಟ್‌ಗೆ 1.50 ರೂ. ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದೆ.
2021ರಲ್ಲಿ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 1.39 ರೂ. ದರ ಏರಿಕೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದವು. ಆಗ ಕೆಇಆರ್‌ಸಿ ಕೇವಲ 30 ಪೈಸೆ ಪರಿಷ್ಕರಣೆ ಮಾಡಲು ಅವಕಾಶ ನೀಡಿತ್ತು. ಈ ಬಾರಿ ಎಷ್ಟು ದರ ಏರಿಕೆಗೆ ಅನುಮತಿ ನೀಡಲಾಗುತ್ತದೆ? ಎಂದು ಕಾದು ನೋಡಬೇಕಿದೆ.
ಕಳೆದ ವರ್ಷ ಜೂನ್‌ನಲ್ಲಿ ವಿದ್ಯುತ್ ದರ ಏರಿಕೆಯಾಗಿತ್ತು. ಎಸ್ಕಾಂಗಳು 1.39 ಪೈಸೆ ಏರಿಕೆಗೆ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿದ್ದ ಕೆಇಆರ್‌ಸಿ ಪ್ರತಿ ಯೂನಿಟ್‌ಗೆ ಸರಾಸರಿ 30 ಪೈಸೆ ದರ ಏರಿಕೆ ಮಾಡಲು ಅನುಮೋದನೆ ನೀಡಿತ್ತು. ಬಳಿಕ ದರ ಏರಿಕೆಯಾಗಿಲ್ಲ.
ಈ ಬಾರಿಯೂ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 1.50 ರೂ. ಏರಿಕೆ ಮಾಡಲು ಅನುಮತಿ ಕೇಳಿವೆ. ಏರುತ್ತಿರುವ ವಿದ್ಯುತ್ ಉತ್ಪಾದನಾ ವೆಚ್ಚ, ನಿರ್ವಹಣಾ ವೆಚ್ಚದಿಂದಾಗಿ ಎಸ್ಕಾಂಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿವೆ.
ಉಚಿತ ವಿದ್ಯುತ್ ಘೋಷಣೆ; ಬೇಸಿಗೆ ಆರಂಭವಾಗಿದ್ದು ರಾಜ್ಯದಲ್ಲಿ ನಿಯಮಿತ ಮತ್ತು ಅನಿಯಮಿತ ವಿದ್ಯುತ್ ಕಡಿತ ಆರಂಭವಾಗಿದೆ. ಇದೇ ವೇಳೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ಹೆಚ್‌ಪಿ ಪಂಪ್‌ಸೆಟ್‌ವರೆಗಿನ ತನಕ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಘೋಷಣೆ ಬಳಿಕ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿದರು. ಯೋಜನೆ ವ್ಯಾಪ್ತಿಗೆ ಬರುವ ರೈತರು ಎಷ್ಟು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬೇಸಿಗೆಯಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಜಲ ವಿದ್ಯುತ್ ಉತ್ಪಾದನೆ ಜೊತೆಗೆ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಉಷ್ಣ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದರೆ ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ.
ಬೇಸಿಗೆ ಆರಂಭದಲ್ಲಿ 1.5 ಲಕ್ಷ ಟನ್ ತನಕ ಕಲ್ಲಿದ್ದಲು ದಾಸ್ತಾನು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 10 ಸಾವಿರ ಟನ್ ದಾಸ್ತಾನು ಇದೆ. ಸ್ಥಾವರಕ್ಕೆ ಬರಬೇಕಿರುವ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯು ಉಂಟಾಗಿದ್ದು, ದಾಸ್ತಾನು ಸಹ ಕಡಿಮೆ ಇದೆ.
ತೆಲಂಗಾಣದ ಸಿಂಗರೇಣಿ ಕೋಲ್ ಕಂಪನಿ, ಆಂಧ್ರದ ಮಹಾನದಿ ಕೋಲ್ ಕಂಪನಿ ಮತ್ತು ಮಹಾರಾಷ್ಟ್ರದ ವೆಸ್ಟರ್ನ್ ಕೋಲ್‌ಫೀಲ್ಡ್‌ಗಳಿಂದ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಕೆಯಾಗಬೇಕು. ಆದರೆ ಬೇಡಿಕೆಯ ಅರ್ಧದಷ್ಟು ಕಲ್ಲಿದ್ದಲು ಸಹ ಪೂರೈಕೆಯಾಗುತ್ತಿಲ್ಲ.












Click it and Unblock the Notifications